ಅರಣ್ಯ ಕಾಯ್ದೆಯಡಿ ಹಲವು ಗಂಭೀರ ಪ್ರಕರಣಗಳಿರುವ ಆನಂದ್ ಸಿಂಗ್‌ಗೆ ಅರಣ್ಯ ಸಚಿವ ಸ್ಥಾನ!

ಆನಂದ್ ಸಿಂಗ್ ಅವರನ್ನು ಮಂಗಳವಾರ ಅರಣ್ಯ ಸಚಿವರನ್ನಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯುರಪ್ಪ ಅವರು ನೇಮಿಸಿದ್ದಾರೆ. ಆದರೆ ಆನಂದ್ ಸಿಂಗ್ ಅವರ ಮೇಲೆ ಕರ್ನಾಟಕ ಅರಣ್ಯ ಕಾಯ್ದೆಯಡಿ ಗಂಭೀರ ಅಪರಾಧಗಳು ಸೇರಿದಂತೆ ಹದಿನೈದು ಪ್ರಕರಣಗಳು ಬಾಕಿ ಉಳಿದಿವೆ ಎಂದು ಡೆಕ್ಕನ್‌ ಹೆರಾಲ್ಡ್‌ ವರದಿ ಮಾಡಿದೆ.

2019 ರ ಡಿಸೆಂಬರ್ ಉಪಚುನಾವಣೆಗೆ ಆನಂದ್ ಸಿಂಗ್ ಸಲ್ಲಿಸಿದ್ದ ಅಫಿಡವಿಟ್ ಪ್ರಕಾರ, ತಮ್ಮ ವಿರುದ್ಧ 15 ಪ್ರಕರಣಗಳು ಬಾಕಿ ಉಳಿದಿವೆ ಎಂದು ಘೋಷಿಸಿದ್ದರು. ಇದು ಭಾರತೀಯ ದಂಡ ಸಂಹಿತೆಯ ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆಯಡಿ ಕರ್ನಾಟಕ ಅರಣ್ಯ ಕಾಯ್ದೆಯ ಉಲ್ಲಂಘನೆಯ ಅಪರಾಧಗಳಾಗಿವೆ.

ಸಿಂಗ್ ಅವರನ್ನು 2015 ರಲ್ಲಿ ಕರ್ನಾಟಕ ಲೋಕಾಯುಕ್ತದ ವಿಶೇಷ ತನಿಖಾ ತಂಡ (ಎಸ್‌ಐಟಿ) ಅಕ್ರಮ ಕಬ್ಬಿಣದ ಅದಿರು ಸಾಗಣೆಯ ಆರೋಪದ ಮೇಲೆ ಬಂಧಿಸಿತ್ತು. ಬಂದರಿನಿಂದ ಕಬ್ಬಿಣದ ಅದಿರನ್ನು ಅಕ್ರಮವಾಗಿ ರಫ್ತು ಮಾಡಿದ ಆರೋಪದ ಮೇಲೆ 2013 ರಲ್ಲಿಯೂ ಆನಂದ್‌ ಸಿಂಗ್‌‌ರನ್ನು ಬಂಧಿಸಲಾಗಿತ್ತು.

ಕಾಂಗ್ರೆಸ್‌ನಿಂದ ಬಿಜೆಪಿಗೆ ಹಾರಿದ್ದ ಆನಂದ್ ಸಿಂಗ್ ರನ್ನು ಕಳೆದ ವಾರ ಯಡಿಯೂರಪ್ಪ ಅವರ ಕ್ಯಾಬಿನೆಟ್‌ಗೆ ಸೇರಿಸಲಾಗಿತ್ತು.