ಗಾಂಧಿ ಹಂತಕ ಗೋಡ್ಸೆದು ಮೋದಿಯದ್ದು ಒಂದೇ ಸಿದ್ದಾಂತ – ರಾಗಾ ವಿವಾದಾತ್ಮಕ ಹೇಳಿಕೆ

ರಾಷ್ಟ್ರಪಿತ ಮಹಾತ್ಮ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಮತ್ತು ನರೇಂದ್ರ ಮೋದಿ ಒಂದೇ ಸಿದ್ದಾಂತ ಹೊಂದಿರುವವರು ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಹಾತ್ಮ ಗಾಂಧಿಯವರ 72ನೆ ಪುಣ್ಯತಿಥಿಯಾದ ಇಂದು(ಗುರುವಾರ) ಕೇರಳದ ವಯನಾಡ್ ಜಿಲ್ಲೆಯಲ್ಲಿ ಗುರುವಾರ ನಡೆದ ಸಿಎಎ ವಿರೋಧಿ ರ‍್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿರುವ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಗಾಂಧೀಜಿ ಹತ್ಯೆಗೈದ ನಾಥೂರಾಮ್ ಗೋಡ್ಸೆ ವಿಚಾರಧಾರೆ ಒಂದೇ ಆಗಿದೆ. ಇಬ್ಬರ ವಿಚಾರಧಾರೆಯಲ್ಲಿ ಯಾವುದೇ ರೀತಿಯ ಅಂತರವಿಲ್ಲ ಅಂತ ಹೇಳಿದ್ದಾರೆ. ಆದ್ರೆ ಪ್ರಧಾನಿ ಮೋದಿಯವರು ನಾಥೂರಾವ್ ಗೋಡ್ಸೆಯವರಲ್ಲಿ ನಂಬಿಕೆ ಇಟ್ಟಿದ್ದಾರೆ ಅಂತ ಹೇಳೋ ಧೈರ್ಯ ಇಲ್ಲ ಅಷ್ಟೆ ಎಂದಿದ್ದಾರೆ.

ಕೇಂದ್ರ ಸರ್ಕಾರದ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಕೇರಳದ ವಯನಾಡ್ ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕರು ಇಂದು ದೊಡ್ಡ ಮಟ್ಟದ ಸಾಮೂಹಿಕ ಪ್ರತಿಭಟನಾ ರ‍್ಯಾಲಿಯನ್ನು ಹಮ್ಮಿಕೊಂಡಿದ್ದರು. ಭಾರತೀಯರು ತಾವು ಭಾರತೀಯರೆಂದು ಸಾಬೀತುಪಡಿಸುವಂತೆ ಮಾಡಲಾಗುತ್ತಿದೆ.ನಾನು ಭಾರತೀಯನೇ ಎಂದು ನಿರ್ಧರಿಸಲು ನರೇಂದ್ರ ಮೋದಿ ಯಾರು? ಯಾರು ಭಾರತೀಯ ಯಾರು ಭಾರತೀಯನಲ್ಲ ಎಂಬುದನ್ನು ನಿರ್ಧರಿಸಲು ಮೋದಿಗೆ ಪರವಾನಗಿ ನೀಡಿದ್ದು ಯಾರು, ನಾನು ಭಾರತೀಯ ಎಂದು ನನಗೆ ಗೊತ್ತು, ಅದನ್ನು ಯಾರೊಬ್ಬರಿಗೂ ಸಾಬೀತು ಪಡಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.