ಸಾಮಾನ್ಯ ವರ್ಗದ ಬಡವರಿಗೆ 10% ಮೀಸಲು ಮಸೂದೆ ರದ್ದು ಕೋರಿ ಸುಪ್ರೀಂಗೆ ಅರ್ಜಿ

ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಸಾಮಾನ್ಯ ವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10 ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಗುರುವಾರ ಅರ್ಜಿ ದಾಖಲಿಸಲಾಗಿದೆ.

ಯೂತ್ ಫಾರ್ ಈಕ್ವಾಲಿಟಿ ಸಂಸ್ಥೆ ಹಾಗೂ ಕೌಶಲ್ ಕಾಂತ್ ಮಿಶ್ರಾ ಅವರು ಸಲ್ಲಿಸಿರುವ ಈ ಅರ್ಜಿಯಲ್ಲಿ, ಆರ್ಥಿಕ ಮಾನದಂಡವು ಮೀಸಲಾತಿಗೆ ಆಧಾರವಾಗುವುದಿಲ್ಲ, ಹಾಗಾಗಿ ಈ ಮಸೂದೆಯನ್ನು ರದ್ದುಗೊಳಿಸಬೇಕು ಎಂದು ಕೋರಲಾಗಿದೆ. ಈ ಮಸೂದೆಯು ಸಾಮಾನ್ಯ ವರ್ಗಕ್ಕೆ ಆರ್ಥಿಕತೆಯ ಮಾನದಂಡವಾಗಿ ಮೀಸಲು ನೀಡುವುದು ಹಾಗೂ ಶೇ.50ರ ಮಿತಿ ದಾಟುವುದರಿಂದ ಇದು ಸಂವಿಧಾನದ ಪ್ರಾಥಮಿಕ ಲಕ್ಷಣದ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

10 ಗಂಟೆಗಳ ಕಾಲ ಚರ್ಚೆಯ ಬಳಿಕ ಬುಧವಾರ ರಾಜ್ಯಸಭೆಯಲ್ಲೂ ಈ ಮೀಸಲು ಮಸೂದೆ ಅಂಗೀಕಾರಗೊಂಡಿತ್ತು. ಸಂಸತ್ತಿನ ಎರಡೂ ಸದನಗಳಲ್ಲಿ ಬಹುತೇಕ ಎಲ್ಲಾ ಪಕ್ಷಗಳು ಈ ಮಸೂದೆಯ ಪರ ಮತ ಚಲಾಯಿಸಿದ್ದವು. ಇನ್ನೀಗ ರಾಷ್ಟ್ರಪತಿಗಳ ಮುದ್ರೆಯೊಂದೇ ಬಾಕಿಯಿದ್ದು, ಬಳಿಕ ಇದು ಕಾಯ್ದೆಯಾಗಿ ರೂಪುಗೊಳ್ಳಲಿದೆ. ಈಗಾಗಲೇ ಎಸ್‌ಸಿ, ಎಸ್‌ಟಿ, ಹಾಗೂ ಒಬಿಸಿ ವರ್ಗಕ್ಕೆ ಇರುವ ಮೀಸಲುಗಳ ಜತೆಗೆ ಇದು ಹೆಚ್ಚುವರಿಯಾಗಿ ಸೇರ್ಪಡೆಯಾಗಲಿದೆ.

Leave a Reply