ಕೊರೊನಾ ವೈರಸ್‌ ನಿಯಂತ್ರಣದಲ್ಲಿ ಸರ್ಕಾರದ ನಿರ್ಲಕ್ಷತನ ಅಪಾಯಕಾರಿ

ಕೊರೋನಾ ಸೋಂಕಿನಿಂದ ದೇಶಾದ್ಯಂತ ಬಿಕ್ಕಟ್ಟು ನಿರ್ಮಾಣವಾಗಿರುವ  ಸಂದರ್ಭದಲ್ಲಿ ಸರ್ಕಾರಗಳ ನಿರ್ಲಕ್ಷ್ಯ ಮನೋಭಾವ ಅತ್ಯಂತ ಆಘಾತಕಾರಿಯಾಗುತ್ತದೆ.  ಕಳವಳಕಾರಿ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳು ಎಲ್ಲಾ  ಹಂತದಲ್ಲಿಯೂ ಸಮರ್ಪಕವಾಗಿ ನಿರ್ವಹಣೆಯಾಗುತ್ತಿಲ್ಲ. ಅದರಿಂದ ಸೂಕ್ಷ್ಮ ಮತ್ತು ಗಂಭೀರ  ದೂರಗಾಮಿ ಪರಿಣಾಮಗಳು ಉಂಟಾಗುತ್ತಿವೆ ಎಂದು ದಿನಗಳು ಉರುಳಿದಂತೆ ಗೋಚರವಾಗುತ್ತಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಎಚ್.ಕೆ.ಪಾಟೀಲ್ ಆರೋಪಿಸಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಸುದೀರ್ಘ ಪತ್ರ ಬರೆದಿರುವ ಅವರು,  ನಮ್ಮ  ರಾಜ್ಯದಲ್ಲಿ ಒಂದು ಕಡೆ ರೋಗ ತಪಾಸಣೆಯು ಅತ್ಯಂತ ನಿರ್ಲಕ್ಷ್ಯದಿಂದ ಮತ್ತು ಅಸಮರ್ಪಕವಾಗಿ  ನಡೆಯುತ್ತಿದೆ. ರೋಗ ತಪಾಸಣೆ ಈ ಹಂತದಲ್ಲಿ ಬಹಳ ಪ್ರಮುಖವಾದದ್ದು. ನಮ್ಮ ನಿರ್ಲಕ್ಷ್ಯದ  ಪರಮಾವಧಿ ಇಲ್ಲಿಯೇ ಇದೆ. ಇದೀಗ ತಪಾಸಣೆಯಾದ ಶಂಕಿತರ ಸಂಖ್ಯೆ ಮತ್ತು ಸಕಾರಾತ್ಮಕ  ಫಲಿತಾಂಶ ಬಂದ ಸಂಖ್ಯೆಗಳನ್ನು ಸರ್ಕಾರ ಪಾರದರ್ಶಕವಾಗಿ ಬಿಡುಗಡೆ ಮಾಡದೇ ಇರುವುದರಿಂದ  ಆತಂಕ ಮತ್ತಷ್ಟು ಮಡುಗಟ್ಟುತ್ತಿದೆ.

ಈ ಅಂಕಿ-ಸಂಖ್ಯೆಗಳು ಪಾರದರ್ಶಕವಾಗಿ ಜನರ ಗಮನಕ್ಕೆ  ಆಗಾಗ ತರುತ್ತಿದ್ದರೆ ಜನರನ್ನು ಹೆಚ್ಚು ಜಾಗೃತಗೊಳಿಸಲು ಸಾಧ್ಯವಾಗುತ್ತದೆ. ಸರ್ಕಾರದ  ಅಂಕಿ ಸಂಖ್ಯೆಗಳು ಪಾರದರ್ಶಕವಾಗಿದ್ದು ನೈಜತೆಯನ್ನಷ್ಟೆ ಬಿಂಬಿಸುವಂತಿದ್ದರೆ ಅದರಿಂದ  ಜಾಗೃತಿ ಉಂಟಾಗುತ್ತದೆಯೇ ಹೊರತು ಅನವಶ್ಯಕ ಭಯ ಉಂಟಾಗುವುದಿಲ್ಲ. ಅಂಕಿಸಂಖ್ಯೆಗಳನ್ನು  ಮುಚ್ಚಿಡುವುದರಿಂದ ಸುಳ್ಳು ಸುದ್ದಿಗಳು ಹರಿದಾಡಲು ಸಹಾಯಕವಾಗುತ್ತದೆ. ಸರ್ಕಾರ  ವಾಸ್ತವಿಕತೆಯನ್ನು ಅರಿತು ನೈಜ ಪರಿಸ್ಥಿತಿಯನ್ನು ಜನರ ಎದುರಿಗೆ ಇಡಬೇಕು ಎಂದು ಒತ್ತಾಯಿಸಿದ್ದಾರೆ.

ವಿಶ್ವದಾದ್ಯಂತ ಮಹಾಮಾರಿ ಕೊರೋನಾ ವೈರಸ್ (ಕೋವಿಡ್-19)ರಿಂದಾಗಿ ಆತಂಕದ ಕ್ಷಣಗಳು ದಿನೇ  ದಿನೇ ಹೆಚ್ಚಾಗುತ್ತಿವೆ.     ಅದಕ್ಕಾಗಿ ಈ ಹಿನ್ನೆಲೆಯಲ್ಲಿ ದಿನಾಂಕ 24.3.2020 ಮತ್ತು 26.3.2020 ಮತ್ತು  1.4.2020ರಂದು ನಾನು ಬರೆದ ಪತ್ರಗಳನ್ನು ಹಾಗೂ ದಿನಾಂಕ 12.3.2020 ಮತ್ತು 23.3.2020  ರಂದು ವಿಧಾನಸಭೆಯಲ್ಲಿ ನಾನು ಈ ವಿಷಯ ಪ್ರಸ್ತಾಪಿಸಿದಾಗ ಮಾಡಿದ ಹಲವಾರು ಸಲಹೆಗಳು ನೀಡಿದ್ದೆ.    ಇಂದಿನ ಪರಿಸ್ಥಿತಿ ದಿನೇ ದಿನೇ ಬದಲಾಗುತ್ತಿರುವುದರಿಂದ ಮಹಾಮಾರಿಯ ಹರಡುವಿಕೆ  ವ್ಯಾಪಕಗೊಳ್ಳುತ್ತಿರುವುದರಿಂದ ಈ ಪತ್ರೆ ಬರೆಯುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.