ಗುಜರಾತ್‌ನಲ್ಲಿ ನಡೆದ 17ರಲ್ಲಿ 3 ಎನ್‌ಕೌಂಟರ್‌ಗಳು ನಕಲಿ : ನ್ಯಾ.ಬೇಡಿ ಆಯೋಗ

2002-2006ರ ಅವಧಿಯಲ್ಲಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆ ಗುಜರಾತ್‌ನಲ್ಲಿ ನಡೆದಿದ್ದ ಎನ್‌ಕೌಂಟರ್‌ಗಳು ಮುಸ್ಲಿಂ ತೀವ್ರವಾದಿಗಳನ್ನು ಗುರಿಯಾಗಿಸಲಾಗಿತ್ತು ಎಂಬ ಆರೋಪವನ್ನು ನ್ಯಾ.ಎಚ್.ಎಸ್.ಬೇಡಿ ಆಯೋಗ ನಿರಾಕರಿಸಿದೆ. ಸುಪ್ರೀಂ ಕೋರ್ಟ್ ನೇಮಿಸಿದ ಈ ಆಯೋಗವು ತನ್ನ ಅಂತಿಮ ವರದಿ ನೀಡಿದೆ.

ನಕಲಿ ಎನ್‌ಕೌಂಟರ್‌ ಮೂಲಕ ಮುಸ್ಲಿಂ ತೀವ್ರವಾದಿಗಳನ್ನು ಆಯ್ಕೆ ಮಾಡಿಕೊಂಡು ಕೊಲ್ಲಲು ರಾಜ್ಯ ಸರ್ಕಾರ ಮೌಖಿಕ ಸೂಚನೆ ನೀಡಿತ್ತು ಎಂಬುದಾಗಿ ಗುಜರಾತ್‌ನ ಮಾಜಿ ಡಿಜಿಪಿ ಆರ್‌ಬಿ ಶ್ರೀಕುಮಾರ್ ಅವರು ಮಾಡಿದ್ದ ಆರೋಪವನ್ನು ಈ ವರದಿಯು ತಿರಸ್ಕರಿಸಿದೆ.
ಶ್ರೀಕುಮಾರ್ ಅವರು 2002ರ ಗೋಧ್ರಾ ಘಟನೆಯ ವೇಳೆ ಗುಜರಾತ್‌ನಲ್ಲಿ ಶಸ್ತ್ರಾಸ್ತ್ರ ಘಟಕದ ಹೆಚ್ಚುವರಿ ಡಿಜಿಪಿಯಾಗಿದ್ದರು. ಎರಡು ಬಾರಿ ಅವರು ಆಯೋಗದ ಮುಂದೆ ಹಾಜರಾಗಿ ತಮ್ಮ ಹೇಳಿಕೆಗಳನ್ನು ದಾಖಲಿಸಿದ್ದರು.

ಮುಸ್ಲಿಮರನ್ನು ಕೊಲ್ಲುವಂತೆ ನನಗೆ ನೀಡಲಾದ ಮೌಖಿಕ ಆದೇಶವನ್ನು ನಾನು ಪಾಲಿಸಲಿಲ್ಲ. ಹಾಗಾಗಿ ನನಗೆ ಬಡ್ತಿ ನಿರಾಕರಿಸಿಲಾಯಿತು ಎಂದು ಶ್ರೀಕುಮಾರ್ ಹೇಳಿದ್ದರು. ಆದರೆ ಶ್ರೀಕುಮಾರ್ ಅವರ ಆರೋಪಗಳಿಗೆ ಪುಷ್ಟಿ ನೀಡುವ ಯಾವುದೇ ಪೂರಕ ಸಾಕ್ಷ್ಯಗಳಿಲ್ಲ ಎಂದು ಬೇಡಿ ಆಯೋಗ ಹೇಳಿದೆ.

ಆಯೋಗ ತನಿಖೆ ನಡೆಸಿದ 17 ಎನ್‌ಕೌಂಟರ್‌ಗಳ ಪೈಕಿ 14 ಪ್ರಕರಣಗಳಲ್ಲಿ ಗುಜರಾತ್ ಪೊಲಿಸರಿಗೆ ಕ್ಲೀನ್‌ಚಿಟ್ ನೀಡಲಾಗಿದೆ. 3 ಎನ್‌ಕೌಂಟರ್ ನಕಲಿಯಾಗಿದ್ದು ಕೊಲೆ ಆರೋಪ ಎದುರಿಸುತ್ತಿರುವ ಪೊಲೀಸರ ವಿಚಾರಣೆಗೆ ಶಿಫಾರಸು ಮಾಡಿದೆ. ಈ ಎನ್‌ಕೌಂಟರ್‌ಗಳಲ್ಲಿ ಕಾಸಿಮ್ ಜಾಫರ್, ಸಮೀರ್‌ ಖಾನ್ ಹಾಗೂ ಹಾಜಿ ಇಸ್ಮಾಯಿಲ್ ಮೃತರಾಗಿದ್ದರು.

Leave a Reply