ಕೋಮು ಸಾಮರಸ್ಯದ ಸಂದೇಶ ಸಾರಲು ಸೈಕಲ್‌ ಯಾತ್ರೆ!

ಸಂಘಪರಿವಾರದ ಧರ್ಮ ರಾಜಕಾರಣಕ್ಕಾಗಿ ಇಡೀ ದೇಶವೇ ಕೋಮು ದಳ್ಳುರಿಯ ಬೇಗುದಿಗೆ ಸಿಲುಕಿಕೊಂಡಿದೆ. ದೇಶದ ಸೌಹರ್ದ-ಸಹಬಾಳ್ವೆಯ ಪರಂಪರೆಯನ್ನೇ ನಾಶಮಾಡಿ, ದ್ವೇಶದ ವಿಷವನ್ನು ಯುವಜನರ ಮನಸ್ಸಿಗೆ ಉಣಬಡಿಸಲಾಗುತ್ತಿದೆ. ಇಂತಹ ಕೋಮು ಪಿಪಾಶುಗಳಿಂದ ದೇಶವನ್ನು ರಕ್ಷಿಸಲು, ಸೌಹಾರ್ದ ಮನಸ್ಸುಗಳನ್ನು ಬೆಸೆಯಲು ಹಲವು ವಿಚಾರ ಧಾರೆಗಳ ಹೋರಾಟಗಾರರು ಶ್ರಮಿಸುತ್ತಲೇ ಇದ್ದಾರೆ. ಯಾವ ವಿಚಾರವನ್ನೂ ಓದಿರದ, ತಿಳಿದಿರದ ಸಾಮಾನ್ಯರೂ ಸಹಬಾಳ್ವೆಯ ಬದುಕಿಗಾಗಿ ಶ್ರಮಿಸುತ್ತಿದ್ದಾರೆ. ಸುತ್ತಲಿನ  ಬಹು ಜನಾಂಗದ ಜನರೊಂದಿಗೆ ಬೆರೆತು ಪ್ರೀತಿಯನ್ನು ಹಂಚುತ್ತಿದ್ದಾರೆ.

ಕೋಮುವಾದಿ, ಮನುವಾದಿ ಸಂಘಪರಿವಾರ ಸಂಚಿನ ವಿಷ ವರ್ತುಲದಿಂದಾಗುತ್ತಿರುವ ಕೋಮುಗಲಬೆಗಳು, ಹಿಂಸೆಗಳ ವಿರೋಧಿಸಿ ಹಿಂದೂ-ಮುಸ್ಲೀಂಮರ ನಡುವೆ ಕೋಮುಸೌಹಾರ್ದತೆ ಬೆಳೆಸುವ ಉದ್ದೇಶದಿಂದ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ ಬೆಂಗಳೂರಿನ ಶಿವಾಜಿನಗರದ ಮೊಹಮದ್ ಹಬೀಬ್ ಖಾನ್.

ಶಿವಾಜಿನಗರದಲ್ಲಿ ಹಳೇ ಬೈಕ್‌, ಕಾರುಗಳ ಉಪಕರಣಗಳ ವ್ಯಾಪಾರ ಮಾಡುವ 42 ವರ್ಷದ ಮೊಹಮದ್ ಬೆಂಗಳೂರಿನಿಂದ ಮೆಕ್ಕಾಗೆ ಸೈಕಲ್ ಯಾತ್ರೆ ಕೈಗೊಂಡಿದ್ದಾರೆ. ಸೈಕಲ್‌ನ ಮುಂಭಾಗದಲ್ಲಿ ಬೆಂಗಳೂರು ಟು ಹೈಜ್‌ ಬೈ ಸೈಕಲ್‌ ಬೋರ್ಡ್‌ ಹಾಕಿಕೊಂಡು, ಭಾರತ ರಾಷ್ಟ್ರಧ್ವಜವನ್ನು ಸೈಕಲ್‌ಗೆ ಕಟ್ಟಿಕೊಂಡು ಯಾತ್ರೆ ಹೊರಟಿರುವ ಹಬೀಬ್‌ ಖಾನ್‌ ‘ದೇಶವ್ಯಾಪಿ ಹರಡುತ್ತಿರುವ ಕೋಮು ಅಸಹಿಷ್ಣುತೆಯನ್ನು ತೊಡೆತು, ಹಿಂದೂ ಮುಸ್ಲೀಮರಲ್ಲಿ ಸೌಹಾರ್ದತೆಯನ್ನು ಬೆಳೆಸಬೇಕು.” ಅದಕ್ಕಾಗಿ ಈ ಸೈಕಲ್‌ ಯಾತ್ರೆ ಕೈಗೊಂಡಿದ್ದೇನೆಂದು ಹೇಳಿದ್ದಾರೆ.

ಬೆಂಗಳೂರಿನಿಂದ ತುಮಕುರು, ದಾವಣಗೆರೆ, ಹುಬ್ಬಳಿ, ಬೆಳಗಾವಿ ಮೂಲಕ ಮುಂಬೈಗೆ ತೆರಳಿ, ಅಲ್ಲಿದ್ದ ಹಡಗು ಅಥವಾ ವಿಮಾನದ ಮೂಲಕ ದುಬೈ ತಲುಪಿ, ಅಲ್ಲಿದ್ದ ಮತ್ತೆ ಮೆಕ್ಕಾಗಿ ಸೈಕಲ್‌ನಲ್ಲಿ ಯಾತ್ರೆ ಮಾಡಲಿದ್ದಾರೆ. ಬೆಂಗಳೂರಿನಿಂದ ಮುಂಬೈಗೆ 984 ಕಿ.ಮೀ ಮತ್ತು ದುಬೈನಿಂದ ಮೆಕ್ಕಾಗೆ 1852 ಕಿ.ಮೀ ಸೈಕಲ್‌ ಯಾತ್ರೆ ಮಾಡಲಿರುವ ಹಬೀಬ್‌ ಖಾನ್ ಬೆಂಗಳೂರಿಗೆ ಹಿಂದಿರುಗಲು ಒಟ್ಟು 4770 ಕಿ.ಮೀ ಸೈಕಲ್‌ ಯಾತ್ರೆ ಮಾಡಲಿದ್ದಾರೆ.

ಸೈಕಲ್‌ ಯಾತ್ರೆಯಲ್ಲಿ ದಾರಿಯುದ್ದಕ್ಕೂ ಸಿಗುವ ಜನರಿಗೆ ತಮ್ಮ ಉದ್ದೇಶವನ್ನು ತಿಳಿಸುತ್ತಾ, ಜನರೊಂದಿಗೆ ಚರ್ಚಿಸುತ್ತಾ ಸಾಗುತ್ತಿದ್ದಾರೆ ಹಬೀಬ್‌ ಖಾನ್‌. ದಾರಿಯಲ್ಲಿ ಸಿಗುವ ಹಿಂದೂ-ಮುಸ್ಲೀಂ ಸೋದರರು ತನ್ನೊಂದಿಗೆ ಪ್ರೀತಿಯಿಂದ ಮಾತನಾಡಿಸುತ್ತಾರೆ. ಸಿಕ್ಕವರಿಗೆಲ್ಲಾ ಹಿಂದೂ-ಮುಸ್ಲೀಮರೆಲ್ಲಾ ಒಗ್ಗಟ್ಟಾಗಬೇಕು, ದ್ವೇಷವನ್ನು ಮರೆತು, ಪ್ರೀತಿಯನ್ನು ಹಂಚಬೇಕು ಎಂದು ಸಂದೇಶ ನೀಡುತ್ತಿದ್ದಾರೆ. ಸಾಮರಸ್ಯದ ಸಂಬಂಧಕ್ಕಾಗಿ ಸೈಕಲ್‌ ತುಳಿಯುತ್ತಿರುವ ಹಬೀಬ್‌ ಖಾನ್‌ ಉದ್ದೇಶದಂತೆ ಕೋಮುವಾದಿ ಶಕ್ತಿಗಳ ಹಿಂಸೋನ್ಮಾದಕ್ಕೆ ತುತ್ತಾಗುತ್ತಿರುವ ಜನರು ದ್ವೇಷವನ್ನು ಮರೆತು ಪ್ರೀತಿಯನ್ನು ಹಂಚುವಂತಾಗಲಿ…