ಜಾಗತಿಕ ತೈಲಬೆಲೆ ಕುಸಿತ; ಮೋದಿಗೆ ಟಾಂಗ್‌ ಕೊಟ್ಟ ರಾಹುಲ್‌ಗಾಂಧಿ

ಮಧ್ಯ ಪ್ರದೇಶದಲ್ಲಿ ಆಪರೇಷನ್ ರಂಗ್‌ಪಂಚಮಿ ಹೆಸರಿನಲ್ಲಿ ಕಮಲ್‌ ನಾಥ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರವನ್ನು ಉರುಳಿಸುವುದರಲಲ್ಲಿ ಬಿಜೆಪಿ ನಿರತವಾಗಿದೆ. ಜ್ಯೋತಿರಾಧಿತ್ಯ ಸಿಂಧಿಯಾ ಜೊತೆಗೆ 21 ಕಾಂಗ್ರೆಸ್‌ ಶಾಸಕರು ರಾಜೀನಾಮೆ ನೀಡಿದ್ದಾರೆ. ಶಾಸಕರ ರಾಜೀನಾಮೆಯನ್ನು ಸ್ಪೀಕರ್‌ ಎನ್‌ಪಿ ಪ್ರಜಾಪತಿ ಅಂಗೀಕರಿಸಿದರೆ ಕರ್ನಾಟಕದ ರೀತಿಯಲ್ಲೇ ಮಧ್ಯಪ್ರದೇಶದಲ್ಲಿಯೂ ರಾಜಕೀಯ ನಾಟಕ ನಡೆಯಲಿದೆ.

ಮಧ್ಯಪ್ರದೇಶದಲ್ಲಿ ಸರ್ಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್‌ ಶತಾಯಗತಾಯ ಹರಸಾಹಸ ಒಡುತ್ತಿದೆ.

ಇಂದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ಬೆಲೆಗಳಲ್ಲಿ 35% ಕುಸಿತಕಂಡಿದೆ. ಇದನ್ನ ಬಳಸಿಕೊಂಡು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪ್ರಧಾನಿ ಮೋದಿಯವರನ್ನು ಚೇಡಿಸಿದ್ದಾರೆ.

ಇಂದು ಬೆಳಗ್ಗೆ ಟ್ವೀಟ್‌ ಮಾಡಿರುವ ರಾಹುಲ್‌ ಗಾಂಧಿ “@PMOIndia, ನೀವು ಮಧ್ಯ ಪ್ರದೇಶ ಚುನಾಯಿತ ಕಾಂಗ್ರೆಸ್‌ ಸರ್ಕಾರವನ್ನು ಅಸ್ಥಿರಗೊಳಿಸವು ಕಾರ್ಯದಲ್ಲಿ ನರತರಾಗಿದ್ದಿರಿ, ಈ ಸಂದರ್ಭದಲ್ಲೇ ಜಾಗತಿಕ ತೈಲ ಬೆಲೆ 35% ಕುಸಿತ ಕಂಡಿರುವುದನ್ನು ನೀವು ಗಮನಿಸಿರುವುದಿಲ್ಲ. ಪೆಟ್ರೋಲ್‌ ಬೆಲೆಯನ್ನು 60 ರೂ.ಗಳಿಗಿಂತ ಕಡಿಮೆಗೊಳಿಸಿ ಭಾರತೀಯರಿಗೆ ಉಪಯುಕ್ತವಾಗುವಂತೆ ಮಾಡಬಹುದೇ? ಇದರಿಂದ ಸ್ಥಗಿತಗೊಂಡಿರುವ ಆರ್ಥಿಕತೆ ಹೆಚ್ಚಿಸಲು ಸಹಾಯವಾಗುತ್ತದೆ” ಎಂದು ಟ್ವೀಟ್‌ ಮಾಡಿದ್ದಾರೆ.

OPEC+ ಮೈತ್ರಿಕೂಟದ ವಿಘಟನೆಯಿಂದಾಗಿ ಸೌದಿ ಅರೇಬಿಯಾ ಮತ್ತು ರಷ್ಯಾ ನಡುವೆ ಬೆಲೆ ಸಂಘರ್ಷ ಶುರುವಾಗಿದೆ. ಇದರಿಂದಾಗಿ ಈ ವಾರದ ಆರಂಭದಲ್ಲಿ ತೈಲ ಮಾರುಕಟ್ಟೆಗಳು ಶೇ.30 ಕ್ಕಿಂತಲೂ ಹೆಚ್ಚು ಕುಸಿದವು. ಜಾಗತಿಕ ತೈಲ ಮಾನದಂಡ ಒಂದು ಬ್ಯಾರೆಲ್‌ಗೆ 31.02 ಡಾಲರ್‌ ಮೌಲ್ಯಕ್ಕೆ ಕುಸಿದಿದೆ.

ಇದರ ಪರಿಣಾಮವಾಗಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಮಂಗಳವಾರ ಪರಿಷ್ಕರಿಸಲಾಗಿದೆ. ತೈಲ ಮಾರುಕಟ್ಟೆ ಕಂಪನಿಗಳ ಅಂತಾರಾಷ್ಟ್ರೀಯ ಬೆಂಚ್‌ಮಾರ್ಕ್‌ 15 ದಿನಗಳ ಸರಾಸರಿ ದರವನ್ನು ಪರಿಗಣನೆಗೆ ತೆಗೆದುಕೊಳ್ಳುವುದರಿಂದ ಕಚ್ಚಾ ತೈಲ ಬೆಲೆಯ ಕುಸಿತವು ಪೆಟ್ರೋಲ್‌-ಡಿಸೆಲ್‌ ಬೆಲೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.