ಪಾಪ್ ಕಾರ್ನ್ ಮಂಕಿ ಟೈಗರ್ ನ ಟ್ರೈಲರ್ಗೆ ಫ್ಯಾನ್ಸ್ ಫಿದಾ : ಶುಭ ಕೋರಿದ ಪುನೀತ್ ರಾಜಕುಮಾರ್

ಸ್ಯಾಂಡಲ್ ವುಡ್ ನಿರ್ದೇಶಕ ಸೂರಿ ನಿರ್ದೇಶನದ ಪಾಪ್ ಕಾರ್ನ್ ಮಂಕಿ ಟೈಗರ್ ನ ಟ್ರೈಲರ್ ಬಿಡುಗಡೆ ಆಗಿದೆ. ಪಿಆರ್ ಕೆ ಯು ಟ್ಯೂಬ್ ನಲ್ಲಿ ಬಿಡುಗಡೆಯಾದ ಚಿತ್ರದ ಟ್ರೈಲರ್ ಇದೀಗ ಎಲ್ಲರ ಗಮನವನ್ನು ತನ್ನತ್ತ ಸೆಳೆಯುತ್ತಿದೆ.

ಈ ಟ್ರೈಲರ್ ಗೆ ದಿನೇ ದಿನೇ ಲೈಕ್ಸ್ ಗಳು ಹೆಚ್ಚಾಗುತ್ತಿವೆ. ಅಲ್ಲದೆ, ಸ್ಯಾಂಡಲ್ ವುಡ್ ಚಿತ್ರನಗರಿ ಗಾಂಧಿನಗರದ ಮಂದಿಯಲ್ಲಿ ಹೊಸ ಅಲೆಯ ಈ ಚಿತ್ರ ಬಹುಮಟ್ಟಿಗೆ ನಿರೀಕ್ಷೆ ಮೂಡಿಸಿದೆ. ಈ ಕುರಿತಂತೆ ಸ್ಯಾಂಡಲ್ ವುಡ್ ನಟ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ.

ಚಿತ್ರದ ಫಸ್ಟ್ ಟೀಸರ್ ಬಿಡುಗಡೆಯಾಗುತ್ತಿದ್ದಂತೆ ಎಲ್ಲೆಡೆ ಪ್ರಶಂಸೆಗಳು ವ್ಯಕ್ತವಾಗುವುದು ಸರ್ವೇ ಸಾಮಾನ್ಯ. ಒಂದೆಡರು ಒಳ್ಳೆಯ ಮಾತುಗಳು, ತುಂಬಾ ನಿರೀಕ್ಷೆ ಹಾಗು ನೋಡುಗರಲ್ಲಿ ಕುತೂಹಲ ಹೆಚ್ಚಿಸುವ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಟ್ರೈಲರ್ ಕೂಡ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದೇ ವೇಳೆ ಸ್ಯಾಂಡಲ್ ವುಡ್ ನಟ ಪುನೀತ್ ರಾಜಕುಮಾರ್ ( ಅಪ್ಪು ) ಕೂಡ ಚಿತ್ರದ ಕುರಿತಂತೆ ಮೆಚ್ಚುಗೆಯ ಮಾತುಗಳನ್ನಾಡಿದ್ದರಿಂದ ಚಿತ್ರದ ಕುರಿತಂತೆ ಇದ್ದ ನಿರೀಕ್ಷೆ ಇದೀಗ ದುಪ್ಪಟ್ಟಾಗಿದೆ.

 

ನಾಯಕ ಡಾಲಿ ಧನಂಜಯ್ ನಟನೆ, ಚರಣ್ ರಾಜ್ ಅವರ ಸಂಗೀತಕ್ಕೂ ಅಪ್ಪು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮಗೆ ಸೂರಿ ಸಾರ್ ಅವರ ಪಿಕ್ಚರ್ ಅಂದ್ರೆ ತುಂಬಾನೇ ಇಷ್ಟ, ಏಕೆಂದರೆ ಅದು ನೈಜತೆಯಿಂದ ಕೂಡಿರುತ್ತದೆ. ಅಲ್ಲದೆ, ಚಿತ್ರದ ಟೀಸರ್ ಕೂಡ ತುಂಬಾ ಚೆನ್ನಾಗಿದೆ. ಚಿತ್ರದ ಬಗ್ಗೆ ತಮಗೆ ತುಂಬಾನೇ ಖುಷಿಯಿದ್ದು, ಟಗರು ಬಳಿಕ ಡಾಲಿ ಹಾಗು ಸೂರಿ ಕಾಂಬಿನೇಷನ್ ನಲ್ಲಿ ಮೂಡಿ ಬಂದ ಎರಡನೇ ಚಿತ್ರ ಇದಾಗಿದೆ. ಹೀಗಾಗಿ ಇದಕ್ಕೆ ತಾವು ಶುಭ ಕೋರುವುದಾಗಿ ಪುನೀತ್ ರಾಜಕುಮಾರ್ ತಿಳಿಸಿದ್ದಾರೆ.

ಚಿತ್ರವನ್ನು ನೋಡಿದ ಅಭಿಮಾನಿಗಳು ಕೂಡ ಡಾಲಿ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಈ ಟ್ರೈಲರ್ ಹಾಗು ಕಥೆಯೇನು ಎಂಬುದನ್ನು ನಿರ್ದೇಶಕ ಸೂರಿ ರಹಸ್ಯವಾಗಿ ಇಟ್ಟಿದ್ದಾರೆ. ಪಿಎಂಟಿಗೆ ಸುರೇಂದ್ರನಾಥ್ ಕಥೆ, ಸೂರಿ – ಅಮೃತ ಭಾರ್ಗವ್ ಸೇರಿ ಸಂಭಾಷಣೆ ಬರೆದಿದ್ದರೆ, ಶೇಖರ್ ಛಾಯಾಗ್ರಹಣಕ್ಕೂ ಅಪ್ಪು ಪೂರ್ಣ ಅಂಕ ನೀಡಿದ್ದಾರೆ. ಕೆ.ಎಂ. ಸುಧೀರ್ ನಿರ್ಮಾಣದ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸುವ ಮುನ್ಸೂಚನೆ ನೀಡಿದೆ.