Fact Check: ಕೊರೋನಾ ವೈರಸ್ ತಗುಲಿ ಸಾವಿರಾರು ಜನ ರಸ್ತೆಯಲ್ಲಿಯೇ ಮೃತಪಟ್ಟರೆ? ಈ ಸುದ್ದಿ ನಿಜವಲ್ಲ

ಸಾವಿರಾರು ಜನ ರಸ್ತೆಯಲ್ಲಿಯೇ ಸತ್ತುಬಿದ್ದಿರುವ ಹಾಗೆ ಕಾಣುವ ಈ ಚಿತ್ರವನ್ನು ನಿಮ್ಮ ಫೇಸ್‌ಬುಕ್ ಅಥವಾ ವಾಟ್ಸಾಪ್‌ನಲ್ಲಿ ನೋಡಿರಬಹುದು. ಕೊರೋನಾ ವೈರಸ್ ತಗುಲಿ ಇಟಲಿಯಲ್ಲಿ ಸಾವಿರಾರು ಜನ ರಸ್ತೆಯಲ್ಲಿಯೇ ಮೃತಪಟ್ಟಿದ್ದಾರೆ ಎಂಬ ಹೆಡ್‌ಲೈನ್ ಕೂಡ ಕೊಟ್ಟಿರಬಹುದು ಅಲ್ಲವೇ? ಬಹಳಷ್ಟು ಜನ ಇದನ್ನು ನಂಬಿಬಿಟ್ಟಿದ್ದಾರೆ.

ಹಲವಾರು ಫೇಸ್‌ಬುಕ್‌ ಪೇಜ್‌ಗಳಲ್ಲಿ ಈ ಸುದ್ದಿ ಓಡಾಡುತ್ತಿದೆ. ಕೊರೊನಾದಿಂದ ದಿನನಿತ್ಯ ಮರಣಹೊಂದುತ್ತಿರುವವರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಬಹಳಷ್ಟು ಜನ ಇದನ್ನು ನಿಜವೆಂದೇ ನಂಬಿದ್ದಾರೆ. ಆದರೆ ಅಪ್ಪಟ ಸುಳ್ಳು ಸುದ್ದಿಯಾಗಿದೆ.

ಇದನ್ನು ಫ್ಯಾಕ್ಟ್ ಚೆಕ್ ನಡೆಸುವ ಸಲುವಾಗಿ ಗೂಗಲ್‌ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಸತ್ಯ ತಿಳಿದುಬಂದಿದೆ. ಅದರಂತೆ ಇದು ಕೊರೋನ ವೈರಸ್‌ನಿಂದ ಸತ್ತ ವ್ಯಕ್ತಿಗಳ ಚಿತ್ರವಲ್ಲ ಎಂದು ಸ್ಪಷ್ಟವಾಗಿದೆ.

ಈ ಚಿತ್ರವನ್ನು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯು 2014 ರಲ್ಲಿಯೇ ಪ್ರಕಟಿಸಿದೆ. ಅವರ ಫೋಟೋ ಪ್ರಬಂಧದ ವರದಿಯ ಪ್ರಕಾರ, “ಫ್ರಾಂಕ್‌ಫರ್ಟ್‌ನಲ್ಲಿರುವ ಕಾಟ್ಜ್‌ಬಾಚ್ ನಾಜಿ ಕಾನ್ಸಂಟ್ರೇಶನ್ ಕ್ಯಾಂಪ್‌ನಲ್ಲಿ” ಸತ್ತ 528 ಸಂತ್ರಸ್ತರನ್ನು ಸ್ಮರಿಸುವ ಸಲುವಾಗಿ ಅಣುಕು ಕಲಾ ಯೋಜನೆಯ ಭಾಗವಾಗಿ ಜನರು ಪಾದಚಾರಿ ವಲಯದಲ್ಲಿ ಮಲಗಿರುವುದಾಗಿದೆ”. ಈ ಚಿತ್ರವನ್ನು ರಾಯಿಟರ್ಸ್ ತೆಗೆದಿದೆ. ಅಲ್ಲಿಗೆ ಇದು ಅಣುಕು ಪ್ರದರ್ಶನವೇ ಹೊರತು ಸತ್ತಿರುವುದಲ್ಲ ಎಂಬುದು ಸ್ಪಷ್ಟವಾಗಿದೆ.

2014 ರಲ್ಲಿ ಹಿಂದೂಸ್ತಾನ್ ಟೈಮ್ಸ್ ಪ್ರಕಟಿಸಿದ್ದ ಚಿತ್ರ

ಯಾವುದೇ ಸುದ್ದಿಯನ್ನು ಫಾರ್ವಾಡ್‌ ಮಾಡುವ ಮುನ್ನ ಪರಿಶೀಲಿಸಿ ನಂತರ ಹಂಚಿಕೊಳ್ಳಿ. ಸುಳ್ಳು ಸುದ್ದಿಗಳ ಜಾಲಕ್ಕೆ ಬೀಳಬೇಡಿ.