‘ನನಗೂ ಐಎಂಎ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ’ ತುರ್ತು ಸುದ್ದಿಗೋಷ್ಠಿಯಲ್ಲಿ ಬೇಗ್‌ ಸ್ಪಷ್ಟ

ಐಎಂಎ ವಂಚನೆ ಪ್ರಕರಣವನ್ನು ಎಸ್‌ಐಟಿ ಬದಲಾಗಿ ಸಿಬಿಐ ತನಿಖೆಗೆ ಕೊಡಿ ಎಂದು ಶಿವಾಜಿ ನಗರ ಕಾಂಗ್ರೆಸ್‌ ಶಾಸಕ, ಮಾಜಿ ಸಚಿವ ರೋಷನ್‌ ಬೇಗ್‌ ಒತ್ತಾಯಿಸಿದ್ದಾರೆ.

ಬುಧವಾರ ದೆಹಲಿಯಿಂದ ಆಗಮಿಸಿ ತುರ್ತು ಸುದ್ದಿಗೋಷ್ಠಿ ನಡೆಸಿದ ಬೇಗ್‌ ಅವರು ಪ್ರಕರಣವನ್ನು ಸರಕಾರ ಎಸ್‌ಐಟಿ ತನಿಖೆಗೆ ನೀಡಿದೆ ಅದನ್ನು ನಾನು ಸ್ವಾಗತಿಸುತ್ತೇನೆ,ಆದರೆ ಈ ಹಗರಣವನ್ನು ಸಿಬಿಐಗೆ ನೀಡಲಿ ಎಂದು ಮನವಿ ಮಾಡಿದರು.

ಐಎಂಎ ಮೂಲಕ ಬಹಳ ಜನರಿಗೆ ಮೋಸವಾಗಿದೆ. ಬೆಳಗಾಂನಲ್ಲೂ ಹಗರಣ ಮಾಡಲಾಗಿದೆ. ವಂಚಕರ ಪೈಕಿ ಕೆಲವರು ಜಾಮೀನಿನಲ್ಲಿದ್ದಾರೆ. ಹೂಡಿಕೆ ದಾರರು ಯಾರಿದ್ದಾರೆ ಅವರಿಗೆ ಹಣ ಕೊಡಿಸಿ ಎಂದು ಮನವಿ ಮಾಡಿದರು.

ಮನ್ಸೂರ್‌ ಖಾನ್‌ ಎಲ್ಲಿ ಹೋದ ಎನ್ನುವುದು ಮೊಬೈಲ್‌ನಲ್ಲಿ ಗೊತ್ತಾಗುತ್ತದೆ, ಯಾರ್ಯಾರ ಹತ್ತಿರ ಮಾತನಾಡಿದ ಎನ್ನುವುದನ್ನು ಪತ್ತೆ ಹಚ್ಚಿ ಎಂದರು. ಸಿಬಿಐಗೆ ಕೊಟ್ಟರೆ ತಕ್ಷಣ ರೆಡ್‌ ಅಲರ್ಟ್‌ ನೊಟೀಸ್‌ ಜಾರಿ ಮಾಡುತ್ತಾರೆ. ಹೀಗಾಗಿ ಹಗರಣವನ್ನುಸಿಬಿಐಗೆ ನೀಡಬೇಕು ಎಂದರು.

ನಾನು ನಮ್ಮ ಪಕ್ಷದ ಕೆಲ ನಾಯಕರ ಮೇಲೆ ಆರೋಪ ಮಾಡಿದ ತಕ್ಷಣ ದಿಢೀರ್‌ ಈ ಬೆಳವಣಿಗೆ ನಡೆದಿದೆ. ಇದು ಕಾಕತಾಳೀಯ, ನಾನು ಯಾವ ನಾಯಕರ ಪಾತ್ರ ಇದೆ ಎಂದು ಹೆಸರು ಹೇಳುವುದಿಲ್ಲ ಎಂದರು.

ಮನ್ಸೂರ್‌ ಖಾನ್‌ ಸಾವಿರ ಕೋಟಿ ರೂಪಾಯಿ ಹಣವನ್ನು ಕಂಪೆನಿಯಿಂದ ತನ್ನ ವೈಯಕ್ತಿಕ ಖಾತೆಗೆ ವರ್ಗಾವಣೆ ಮಾಡಿದ್ದಾನೆ ಹಾಗಾಗಿ ತಕ್ಷಣ ಅದನ್ನು ಜಪ್ತಿ ಮಾಡಿ ಹಣವನ್ನು ಹೊಡಿಕೆದಾರರಿಗೆ ಕೊಡುವ ಕೆಲಸವಾಗಲಿ ಎಂದರು.

ಮನ್ಸೂರ್‌ ಖಾನ್‌ ಆಡಿಯೋಗೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ಕಲಿತ ಉರ್ದು ಶಾಲೆಗೆ ಅವರು ಹಣ ಸಹಾಯ ನೀಡಿದ್ದಾರೆ. ಮನ್ಸೂರ್‌ ಖಾನ್‌ ಜೊತೆ ನಾನು ಯಾವುದೇ ಸಂಬಂಧ ಹೊಂದಿಲ್ಲ ಎಂದು ಒತ್ತಿ ಹೇಳಿದರು.

ಮನ್ಸೂರ್‌ ಬಳಿ ನಾನಾಗಲಿ, ನನ್ನ ಮಗನಾಗಲಿ, ಸ್ನೇಹಿತರಾಗಲಿ ಯಾರೂ ಸಾಲವನ್ನು ಪಡೆದಿಲ್ಲ ಎಂದರು. ನಾನು ಯಾರಿಗೂ ಪತ್ರ ನೀಡಿಲ್ಲ, ಐಎಂಎಗೆ ಹಣ ನೀಡಿ ಎಂದು ಹೇಳಿರಲಿಲ್ಲ, ನನಗೂ ಕಂಪೆನಿ ಮೇಲೆ ಅನುಮಾನ ಇರಲಿಲ್ಲ ಎಂದರು.

ನಾನು ಹೋರಾಟ ಮಾಡಿ 200 ಕೋಟಿ ರೂಪಾಯಿ ವೆಚ್ಚದಲ್ಲಿ ಬೌರಿಂಗ್‌ ಮೆಡಿಕಲ್‌ ಕಾಲೇಜ್‌ ಕಟ್ಟಿಸುವ ಕೆಲಸ ಮಾಡಿದ್ದೇನೆ ಎಂದರು. ನಾನು ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಗೃಹಸಚಿವರನ್ನುಭೇಟಿ ಮಾಡಿ ಸಿಬಿಐ ತನಿಖೆಗೆ ಮನವಿ ಮಾಡುತ್ತೇನೆ ಎಂದರು

ನಾಪತ್ತೆಗೂ ಮುನ್ನ ಮನ್ಸೂರ್‌ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್‌ ಆಗಿದ್ದು, ಅದರಲ್ಲಿ ಶಿವಾಜಿನಗರ ಶಾಸಕ 400 ಕೋಟಿ ರೂ. ಪಡೆದು ಹಣ ವಾಪಸ್‌ ನೀಡಲಿಲ್ಲ ಎಂದು ಆರೋಪಿಸಿದ್ದಾರೆ. ಜತೆಗೆ ರಾಜಕಾರಣಿಗಳು, ಕೇಂದ್ರ ಮತ್ತು ರಾಜ್ಯ ಸರಕಾರದ ಅಧಿಕಾರಿಗಳಿಗೆ ಲಂಚ ಕೊಟ್ಟು ಸಾಕಾಗಿದೆ. ಇದು ನನ್ನ ಕೊನೆಯ ಸಂದೇಶವಾಗಬಹುದು ಎಂದು ಹೇಳಲಾಗಿತ್ತು. ಇದು ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ರಾಜಕೀಯ ತಿರುವನ್ನ ಪಡೆದುಕೊಂಡಿತ್ತು.

Leave a Reply