ಭಾರತ ಪಂದ್ಯಕ್ಕೂ ಮುನ್ನ ದಕ್ಷಿಣ ಆಫ್ರಿಕಾ ತಂಡಕ್ಕೆ ದೊಡ್ಡ ಆಘಾತ..!

ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಐಸಿಸಿ ಪುರುಷರ ವಿಶ್ವಕಪ್ ಸರಣಿಯಲ್ಲಿ ಆಡಿದ ಮೊದಲೆರಡು ಪಂದ್ಯಗಳನ್ನು ಸೋತಿರುವ ದಕ್ಷಿಣ ಆಫ್ರಿಕಾ ತಂಡ, ಬುಧವಾರ ಭಾರತದ ವಿರುದ್ಧ ಕಾದಾಟ ನಡೆಸಲಿದೆ. ಆದರೆ, ಈ ಪಂದ್ಯಕ್ಕೂ ಮುನ್ನ ಹರಿಣಗಳ ಪಡೆಗೆ ದೊಡ್ಡ ಪೆಟ್ಟು ಬಿದ್ದಿದ್ದು, ಅನುಭವಿ ವೇಗಿ ಡೇಲ್ ಸ್ಟೇಯ್ನ್ ಗಾಯದಿಂದ ಚೇತರಿಸಿಕೊಳ್ಳದ ಕಾರಣದಿಂದ ವಿಶ್ವಕಪ್ ನಿಂದ ಹೊರ ನಡೆದಿದ್ದಾರೆ.
ವಿಶ್ವದ ಅಪಾಯಕಾರಿ ಬೌಲರ್ ಗಳಲ್ಲಿ ಒಬ್ಬರಾಗಿರುವ ಡೇಲ್ ಸ್ಟೇಯ್ನ್ ಪ್ರಸಕ್ತ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ, ದಕ್ಷಿಣ ಆಫ್ರಿಕಾ ಪರ ಅಖಾಡಕ್ಕೆ ಇಳಿಯುವ ಕನಸು ಕಂಡಿದ್ದರು. ಆದರೆ ಇವರ ಕನಸಿಗೆ ಗಾಯ ಬರೆ ಎಳೆದಿದೆ. ಐಪಿಎಲ್ ನಲ್ಲೂ ಗಾಯದ ಸಮಸ್ಯೆಯಿಂದ ಹಿಂದೆ ಸರಿದಿದ್ದ ಸ್ಟೇಯ್ನ್, ವಿಶ್ವಕಪ್ ಮಹಾ ಸಮರದಿಂದಲೂ ದೂರ ಉಳಿದಿದ್ದಾರೆ.
ಡೇಲ್ ಸ್ಟೇಯ್ನ್ ಅವರು ದಕ್ಷಿಣ ಆಫ್ರಿಕಾ ಪರ ಅತಿ ಹೆಚ್ಚು ವಿಕೆಟ್ ಪಡೆದ ಐದನೇ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ. ಐಪಿಎಲ್ ನಿಂದಲೂ ಸ್ಟೇಯ್ನ್ ಗಾಯದ ಸಮಸ್ಯೆಯಿಂದ ಹೊರ ನಡೆದಿದ್ದರು. ಇಂಗ್ಲೆಂಡ್ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯ ಮೊದಲೆರಡು ಪಂದ್ಯಗಳಿಂದ ಇವರು ದೂರ ಸರಿದಿದ್ದರು. ಡೇಲ್ ಸ್ಟೇಯ್ನ್ ಅವರ ಬದಲಿಗೆ ಬ್ಯೂರಾನ್ ಹೆಂಡ್ರಿಕ್ಸ್ ಅವರಿಗೆ ಅವಕಾಶ ನೀಡಲಾಗಿದೆ.
2016ರಲ್ಲಿ ಶಸ್ತ್ರ ಚಿಕಿತ್ಸೆಗೆ ವಳಗಾಗಿದ್ದ ಸ್ಟೇಯ್ನ್ ಚೇತರಿಸಿಕೊಳ್ಳಲು ಸಮಯಾವಕಾಶ ಪಡೆದರೂ, ಚೇತರಿಕೆ ಕಾಣಲಿಲ್ಲ. ಗಾಯ ಪದೆ ಪದೆ ಕಾಡುತ್ತಿದ್ದ ಹಿನ್ನೆಲೆಯಲ್ಲಿ ಇವರು ವಿಶ್ವಕಪ್ ಮಹಾಸಮರದಿಂದ ಹೊರ ನಡೆದಿದ್ದಾರೆ.

Leave a Reply