ದೇಣಿಗೆ ಸಂಗ್ರಹಕ್ಕೆ ಮುಂದಾದ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಝಾ

ಕೊರೊನಾವೈರಸ್‌ನಿಂದ ಸಂಕಷ್ಟಕ್ಕೆ ಒಳಗಾಗಲಿರುವ ದಿನಗೂಲಿ ನೌಕರರಿಗೆ ಸಹಾಯ ನೀಡಲು ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಝಾ ಮುಂದಾಗಿದ್ದಾರೆ. ಮಾರಕ ಸೋಂಕು ಹಬ್ಬುವುದನ್ನು ತಡೆಗಟ್ಟಲು ಭಾರತದಲ್ಲಿ ಸುಮಾರು ತಿಂಗಳ ಕಾಲ ಲಾಕ್‌ ಡೌನ್‌ ವಿಧಿಸಲಾಗಿದೆ. ಹೀಗಾಗಿ ತೊಂದರೆಗೆ ಈಡಾಗುವ ಮಂದಿಗೆ ಸಹಾಯ ಹಸ್ತ ಚಾಚಲು ಸಾನಿಯಾ ನಿರ್ಧರಿಸಿದ್ದಾರೆ.

ಆತಂಕಕಾರಿಯಾಗಿ ಹರಡುತ್ತಿರುವ ಕೋವಿಡ್-19 ಸೋಂಕಿಗೆ ವಿಶ್ವದಾದ್ಯಂತ ಸುಮಾರು 16,000 ಮಂದಿ ಸಾವನ್ನಪ್ಪಿದ್ದಾರೆ. ಹೀಗಾಗಿಯೇ ಭಾರತದಲ್ಲಿ ಸುಮಾರು 21 ದಿನಕ್ಕೂ ಹೆಚ್ಚು ಕಾಲ ನಿಷೇಧ ಜಾರಿಗೊಳಿಸಲಾಗಿದೆ. ಈ ಲಾಕ್‌ಡೌನ್ ವೇಳೆ ದಿನ ಸಂಬಳಕ್ಕಾಗಿ ದುಡಿಯುವ ಜನರಿಗೆ ಸಹಜವಾಗೇ ಸಮಸ್ಯೆಯಾಗಲಿದೆ.

ಭಾರತದಲ್ಲೂ ಸುಮಾರು 500ಕ್ಕೂ ಹೆಚ್ಚು ಮಂದಿ ಕೊರೊನಾವೈರಸ್ ಸೋಂಕಿಗೆ ತುತ್ತಾಗಿದ್ದಾರೆ. ಇದರಲ್ಲಿ ಸುಮಾರು 10 ಮಂದಿ ಈಗಾಗಲೇ ಸಾವನ್ನಪ್ಪಿದ್ದಾರೆ. ಇದಕ್ಕಾಗಿಯೇ ಲಾಕ್‌ಡೌನ್ ಜಾರಿಗೊಂಡಿದೆ. ಆದರೆ ಈ ವೇಳೆ ತೊಂದರೆ ಅನುಭವಿಸುವ ಬಡ ಕುಟುಂಬಗಳಿಗೆ ಕುಟುಂಬ ನಿರ್ವಹಿಸಲು ಸಹಾಯ ನೀಡಲು ಸಾನಿಯಾ ಯೋಚಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಶೇರ್ ಮಾಡಿಕೊಂಡಿರುವ ಸಾನಿಯಾ, ಸಫಾ ಸಂಸ್ಥೆಗೆ ಬೆಂಬಲ ನೀಡಿ, ದೇಣಿಗೆ ನೀಡಿ ಎಂದು ಕೋರಿಕೊಂಡಿದ್ದಾರೆ. ‘ಇಂಥ ಕಷ್ಟದ ಸಂದರ್ಭದಲ್ಲಿ ಎಲ್ಲರೂ ಮನೆಯಲ್ಲೇ ಇರಬೇಕಾಗಿದೆ. ನಾವೇನೋ ಅದೃಷ್ಟವಂತರು. ಆದರೆ ಬಡತನದಲ್ಲಿರುವ ಸಾವಿರಾರು ಮಂದಿ ದೇಶದಲ್ಲಿದ್ದಾರೆ. ನಮ್ಮಿಂದ ಕೈಲಾದಷ್ಟು ಅವರಿಗೆ ಸಹಾಯ ನೀಡೋಣ,’ ಎಂದು ಸಾನಿಯಾ ಹೇಳಿದ್ದಾರೆ.