ಹಾಲು ವಿತರಣೆಯಲ್ಲಿ ಅನ್ಯಾಯ: ಆರೋಪ

ಲಾಕ್ ಡೌನ್‌ನಿಂದಾಗಿ ರಾಜ್ಯ ಸರ್ಕಾರ ಸ್ಲಂನಿವಾಸಿ ಕುಟುಂಬಗಳಿಗೆ ಹಾಲು ವಿತರಿಸಲು ಮುಂದಾಗಿರುವುದು ಶ್ಲಾಘನೀಯ ಸಂಗತಿ. ಆದರೆ, ಹಾಲು ವಿತರಿಸುವ ವೇಳೆಯಲ್ಲಿ ಎಲ್ಲ ಕುಟುಂಬಗಳಿಗೆ ಹಾಲು ದೊರೆಯುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕಾದುದು ಸರ್ಕಾರದ ಕರ್ತವ್ಯ ಮತ್ತು ಜವಾಬ್ದಾರಿ ಕೂಡ ಆಗಿದೆ. ಆತುರದಲ್ಲಿ ಹಾಲು ನೀಡುವುದಕ್ಕೆ ಚಾಲನೆ ಕೊಟ್ಟಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೇವಲ ಘೋಷಿತ ಸ್ಲಂಗಳಿಗೆ ಮಾತ್ರ ಹಾಲು ನೀಡುತ್ತಿದ್ದು ಅಘೋಷಿತ ಸ್ಲಂ ಕುಟುಂಬಗಳಿಗೆ ಹಾಲು ದೊರೆಯುತ್ತಿಲ್ಲ. ಕೆಲವು ಸ್ಲಂಗಳು ಪರಿವರ್ತನೆ ಆಗಿ ಬಡಾವಣೆಗಳಾಗಿವೆ. ಸ್ಲಂಗಳ ನಡುವೆ ಬಲಾಢ್ಯ ಕುಟುಂಬಗಳು ಸೇರಿ ಹೋಗಿವೆ. ಹೀಗಾಗಿ ಅರ್ಹ ಕುಟುಂಬಗಳಿಗೆ ಸಿಗಬೇಕಾದ ಹಾಲು ಬೇರೆಯವರ ಪಾಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ರಾಜ್ಯದ ಎಲ್ಲಾ 30 ಜಿಲ್ಲೆಗಳಲ್ಲಿ  ಸರ್ಕಾರವೇ ಘೋಷಿಸಿರುವಂತೆ 2804 ಸ್ಲಂಗಳಿವೆ. ಈ ಸ್ಲಂಗಳಲ್ಲಿ 45 ಲಕ್ಷ ಮಂದಿ ಜನ ವಾಸಿಸುತ್ತಿದ್ದಾರೆ. ಇವರ ಪೈಕಿ 12 ಲಕ್ಷ ಮಂದಿ ಮಕ್ಕಳೇ ಇದ್ದಾರೆಂಬುದು ಗಮನಾರ್ಹ ಸಂಗತಿ. ಘೋಷಿತ ಸ್ಲಂ ನಿವಾಸಿಗಳಿಗೆ ಒಟ್ಟು 7 ಲಕ್ಷ ಲೀಟರ್ ಹಾಲು ವಿತರಿಸುವ ಒಳ್ಳೆಯ ಕೆಲಸಕ್ಕೆ ಸರ್ಕಾರ ಕೈಹಾಕಿದ್ದರೂ ನಿಜವಾಗಿಯೂ ತಲುಪಬೇಕಾದವರಿಗೆ ಹಾಲು ತಲುಪುತ್ತಿಲ್ಲ. ರಾಜ್ಯ ಸರ್ಕಾರ 2011 ಗಣತಿಯನ್ನಾಧರಿಸಿ ಸ್ಲಂ ಕುಟುಂಬಗಳಿಗೆ ಹಾಲು ವಿತರಿಸುತ್ತಿದೆ. ಕಳೆದ 8 ವರ್ಷಗಳಲ್ಲಿ ಸ್ಲಂಗಳ ಸಂಖ್ಯೆ ಹೆಚ್ಚಾಗಿದೆ. ಸಾವಿರಾರು ಬಡ ಕುಟುಂಬಗಳು ಹೊಸದಾಗಿ ಸೇರ್ಪಡೆಯಾಗಿದೆ. ಈ ಕುಟುಂಬಗಳಿಗೆ ಹಾಲು ಸಿಗುತ್ತಿಲ್ಲ. ಅರ್ಹ ಫಲನುಭವಿ ಕುಟುಂಬಗಳು ಸರ್ಕಾರದ ಆಪತ್ಕಾಲದ ಯೋಜನೆಯಿಂದ ವಂಚಿತವಾಗಲಿದ್ದು ಸರ್ಕಾರ ಈ ಬಗ್ಗೆ ಯೋಚಿಸಬೇಕಾಗಿದೆ.

ಬೆಂಗಳೂರು ನಗರದಲ್ಲಿ 800 ಘೋಷಿತ ಅಂದರೆ ಅಧಿಕೃತ ಸ್ಲಂಗಳಿವೆ. ಅಘೋಷಿತ ಸ್ಲಂಗಳು 200 ಇವೆ. ಅಂದರೆ ಸರ್ಕಾರ ಘೋಷಿಸಿರುವ ಅರ್ಧದಷ್ಟು ಸ್ಲಂಗಳು ಬೆಂಗಳೂರಿನಲ್ಲಿಯೇ ಇವೆ. ಬೆಂಗಳೂರು ಒಂದಕ್ಕೆ 25 ಸಾವಿರ ಲೀಟರ್ ಹಾಲು ವಿತರಿಸಲಾಗುತ್ತಿದೆ. ಇದು ಅರೆಕಾಸಿನ ಮಜ್ಜಿಗೆಯಂತಾಗಿದೆ. 2011 ನಂತರ ಹೊಸ ಕುಟುಂಬಗಳು ವಲಸೆ ಬಂದು ಸೇರ್ಪಡೆಯಾಗಿವೆ. ಚಿಕ್ಕಚಿಕ್ಕ ಕುಟೀರಗಳಲ್ಲಿ, ಡೇರೆಗಳಲ್ಲಿ ವಾಸಿಸುವ ಈ ಕುಟುಂಬಗಳು ಮೂಲಭೂತ ಸೌಕರ್ಯಗಳಿಲ್ಲದೆ ಸಮಸ್ಯೆಗಳನ್ನು ಎದುರಿಸುತ್ತಿವೆ. ಒಂದೊಂದು ಕುಟುಂಬದಲ್ಲಿ 6-7 ಮಂದಿ ಇದ್ದು ಮಕ್ಕಳ ಸಂಖ್ಯೆ ಅಧಿಕವಾಗಿದೆ. ಬೆಂಗಳೂರಿನಂಥ ನಗರದಲ್ಲಿ ಸ್ಲಂಗಳಲ್ಲಿ ಬಂದು ಸೇರಿಕೊಂಡಿರುವ ಬಲಾಢ್ಯರಿಂದಾಗಿ ಅವು ಬಡಾವಣೆಗಳಾಗಿ ಪರಿವರ್ತನೆಯಾಗಿವೆ. ಅಲ್ಲಿ ವಾಸಿಸುತ್ತಿದ್ದ ಸ್ಲಂ ನಿವಾಸಿ ಕುಟುಂಬಗಳು ಬೇರೆ ಕಡೆಗೆ ಹೋಗಿದ್ದು ಅರ್ಹ ಕುಟುಂಬಗಳಿಗೆ ಸಿಗಬೇಕಾದ ಸೌಲಭ್ಯಗಳ ಲಾಭ ಬಲಾಢ್ಯರು ಪಡೆಯುವಂತಹ ಸ್ಥಿತಿ ನಿರ್ಮಾಣವಾಗಿದೆ.

ಸ್ಲಂ ಜನರು, ಅಲೆಮಾರಿಗಳು ಹಂದಿಜೋಗಿ ಕುಟುಂಬಗಳ ನಡುವೆ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಸ್ಲಂ ಜನಾಂದೋಲನ ಸಂಚಾಲಕ ಎ. ನರಸಿಂಹಮೂರ್ತಿ ಹೇಳುವಂತೆ ರಾಜ್ಯದಲ್ಲಿ 1500 ಸ್ಲಂಗಳನ್ನು ಸರ್ಕಾರ ಘೋಷಣೆ ಮಾಡುವುದು ಬಾಕಿ ಇದೆ. ಈ ಸ್ಲಂಗಳಲ್ಲಿ ಸುಮಾರು 55 ಲಕ್ಷ ಜನ ವಾಸ ಮಾಡುತ್ತಿದ್ದಾರೆ. ಅವರಲ್ಲಿ 20 ರಿಂದ 22 ಲಕ್ಷ ಮಂದಿ ಮಕ್ಕಳಿದ್ದಾರೆ. 18 ಲಕ್ಷ ಮಂದಿ ಯುವಜನರು ಇದ್ದಾರೆ. ಈಗ ಸರ್ಕಾರದ ಆಪತ್ಕಾಲದ ಹಾಲು ವಿತರಣೆ ಯೋಜನೆಯ ಲಾಭ ಈ ಅಘೋಷಿತ ಸ್ಲಂ ಜನರಿಗೆ ಸಿಗುತ್ತಿಲ್ಲ. ಸರ್ಕಾರ ಒಂದು ಕುಟುಂಬಕ್ಕೆ ಒಂದು ಲೀಟರ್ ವಿತರಿಸುವುದಾಗಿ ಹೇಳಿತ್ತು. ತಲುಪಬೇಕಾದವರಿಗೆ ತಲುಪದ ಹಿನ್ನೆಲೆಯಲ್ಲಿ ಎಲ್ಲರಿಗೂ ದೊರೆಯಲಿ ಎಂಬ ಉದ್ದೇಶದಿಂದ ಪ್ರತಿ ಕುಟುಂಬಕ್ಕೆ ಅರ್ಧ ಲೀಟರ್ ಹಾಲು ವಿತರಿಸುವಂತೆ ಮನವಿ ಮಾಡಿದ್ದೇವೆ. ಸರ್ಕಾರ ಹಾಲು ವಿತರಣೆ ಮಾಡುವುದರಲ್ಲಿ ಅನ್ಯಾಯವಾಗುತ್ತಿದೆ. ಅರ್ಹ ಕುಟುಂಬಗಳು ಈ ತಾತ್ಕಾಲಿಕ ಯೋಜನೆಯಿಂದ ವಂಚಿತವಾಗಿವೆ ಎಂದು ನಾನುಗೌರಿ.ಕಾಂಗೆ ತಿಳಿಸಿದರು.

ಪ್ರತಿಯೊಂದು ಜಿಲ್ಲೆಯಲ್ಲಿಯೂ ಸ್ಲಂಗಳು ನಿರ್ಮಾಣವಾಗಿವೆ. ವಲಸೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಕೆಲಸ ಅರಸಿಕೊಂಡು ಬಂದಿರುವ ಕುಟುಂಬಗಳು ಸ್ಲಂ ಪ್ರದೇಶದಲ್ಲಿ ಹಂಚಿಕೊಂಡು ಸೌರ್ಹಾತೆಯಿಂದ ಬದುಕುತ್ತಿವೆ. ಒಗ್ಗೂಡಿ ಸಹಬಾಳ್ವೆ ನಡೆಸುವ ಸ್ಲಂ ನಿವಾಸಿಗಳಿಗೆ ಕನಿಷ್ಠ ಸೌಲಭ್ಯಗಳು ದೊರೆಯುತ್ತಿಲ್ಲ. ಕುಡಿಯುವ ನೀರು ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಅಘೋಷಿತ ಸ್ಲಂಗಳಲ್ಲಿರುವ ಕುಟುಂಬಗಳು ಹಾಲು ಪಡೆಯಲು ಸಾಧ್ಯವಾಗಿಲ್ಲ. ಹಾಲು, ದಿನಸಿ ಎಲ್ಲರಿಗೂ ಸಿಗುವಂತೆ ಸರ್ಕಾರ ನೋಡಿಕೊಳ್ಳಬೇಕು. ಅಪೌಷ್ಠಿಕತೆಯಲ್ಲಿ ಬಳಲುತ್ತಿರುವ ಮಕ್ಕಳು ಪೌಷ್ಟಿಕತೆಯಿಂದ ಬೆಳೆಯಲು ಅನುವಾಗುವಂತೆ ಸರ್ಕಾರ ನಿಗಾ ವಹಿಸಿದರೆ ಹೆಚ್ಚು ಅನುಕೂಲವಾಗುತ್ತದೆ. ಸರ್ಕಾರ ಇತ್ತ ಗಮನಹರಿಸಬೇಕು.