ಮತ್ತೆ ಐಟಿ ನೋಟೀಸ್ : ನನಗೆ ಸ್ವಲ್ಪ ಉಸಿರಾಡಲು ಬಿಡಿ ಎಂದು ಡಿಕೆಶಿ ಮನವಿ

ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ ಎನ್ನಲಾಗಿದ್ದು, ಈ ಸಂಬಂಧ ಚುನಾವಣಾ ಪ್ರಚಾರ ಕೊನೆಗೊಳಿಸಿರುವ ಡಿ.ಕೆ.ಶಿವಕುಮಾರ್ ಇಂದು ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ ಎನ್ನಲಾಗಿದ್ದು, ಮೂರು ದಿವಸಗಳ ಕಾಲ ತಮಗೆ ನೀಡಿರುವ ನೊಟೀಸ್‌ಗೆ ಸಂಬಂಧಪಟ್ಟಂತೆ ತಮ್ಮ ವಕೀಲರ ಜೊತೆಗೆ ಮಾತನಾಡಲಿದ್ದಾರೆ ಎನ್ನಲಾಗಿದೆ.

ಇನ್ನು ಐಟಿ ದಾಳಿಯ ಬಳಿಕ ಅಂತಿಮ ವರದಿ (ಫೈನಲ್ ರಿಪೋರ್ಟ್) ತಯಾರು ಮಾಡಲಾಗುತ್ತದೆ. ಈ ವರದಿಯನ್ನು ಅಧಿಕಾರಿಗಳು ಅಸೆಸ್ಸಿಂಗ್ ಡಿಪಾರ್ಟ್ ಮೆಂಟ್ ಗೆ ಕಳುಹಿಸಿದ ಬಳಿ, ಯಾ ವ್ಯಕ್ತಿ ಐಟಿ ದಾಳಿಗೆ ಒಳಗಾಗಿ ಇರುತ್ತಾರೋ ಅವರು ತಮ್ಮ ಆದಾಯವನ್ನು ಘೋಷಿಸಿಕೊಳ್ಳಲು ಒಂದು ವರ್ಷದ ಕಾಲಾವಕಾಶ ನೀಡಲಾಗುತ್ತದೆ. ಅದೇ ರೀತಿ ಡಿಕೆ ಶಿವಕುಮಾರ್ ಅವರಿಗೆ ನೀಡಲಾಗಿದ್ದ ಅವಧಿ ಡಿಸೆಂಬರ್ 31ಕ್ಕೆ ಕೊನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಕುಟುಂಬಸ್ಥರಿಗೆ ಐಟಿ ಇಲಾಖೆ ನೋಟಿಸ್ ನೀಡಿದೆ ಎನ್ನಲಾಗುತ್ತಿದೆ. ಈ ತಿಂಗಳ ಕೊನೆಯೊಳಗೆ ಅಂತಿಮ ಹೇಳಿಕೆ (ಫೈನಲ್ ಸ್ಟೇಟ್‍ಮೆಂಟ್) ದಾಖಲು ಮಾಡಬೇಕು ಎಂದು ಐಟಿ ಇಲಾಖೆ ನೋಟಿಸ್ ನಲ್ಲಿ ಸೂಚಿಸಿದೆ.

ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಮಾಜಿ ಸಚಿವ ಡಿ.ಕೆ. ಶಿವಕುಮಾರ್, ನನಗೆ ಸ್ವಲ್ಪ ಉಸಿರಾಡಲು ಬಿಡಿ ಅಂದಿದ್ದೆ‌. ಆದರೆ ಕೂಡಲೆ ಬನ್ನಿ ಅಂತಾ ಹೇಳಿದ್ದಾರೆ. ಅಸೆಸ್ಮೆಂಟ್ ಎಲ್ಲಾ ನೋಡಬೇಕಾಗಿದೆ, ಈಗ ಹೊರಟಿದ್ದೀನಿ. ಇರಲಿ ಕಾನೂನು ಅವರ ಕೈಲಿದೆ. ಏನು ಬೇಕಾದರೂ ಮಾಡಬಹುದು. ಕಾಗವಾಡ ಚುನಾವಣಾ ಪ್ರಚಾರಕ್ಕೆ ಅನುಮತಿ ಕೊಟ್ಟಿಲ್ಲ. ಅಧಿಕಾರ ಅವರದ್ದಿದೆ, ಹೇಗೆ ಬೇಕು ಹಾಗೆ ಮಾಡಲಿ. ದುಡ್ಡಿನ ಮೇಲೆಯೇ ರಾಜಕಾರಣ ನಡೆಯಲ್ಲ. ಮತದಾರರು ಬಿಜೆಪಿ ಬಳಿ ನೋಟ್ ಇಸ್ಕೊಂಡು, ಅನರ್ಹರ ವಿರುದ್ಧ ಓಟ್ ಹಾಕ್ತಾರೆ ಎಂದಿದ್ದಾರೆ.

 

Leave a Reply