ಜಸ್ಟೀಸ್‌ ಫಾರ್‌ ಶೋಭಾ: ಪೊಲೀಸ್‌ ಇಲಾಖೆ, ನ್ಯೂಸ್‌ಚಾನಲ್‌ಗಳ ವಿರುದ್ಧ ಸಮರ : ಸಿಗುವುದೇ ನ್ಯಾಯ..?

ಬೆಂಗಳೂರು:  ಕೊಲೆಯಾದ ಯುವತಿಯೋರ್ವಳ ಕುಟುಂಬಸ್ಥರು, ಏಪ್ರಿಲ್‌ 22 ಶನಿವಾರ ಬೆಂಗಳೂರಿನ ಟೌನ್‌ಹಾಲ್‌ ಎದುರು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ತನಿಖೆಯನ್ನ ಪೂರ್ಣಗೊಳಿಸದೇ ಹೇಳಿಕೆ ನೀಡಿರುವ ಪೊಲೀಸ್‌ ಇಲಾಖೆಯ ವಿರುದ್ಧ ಮತ್ತು ಘಟನೆಯನ್ನ ಪರಾಮರ್ಶೆ ಮಾಡದೆ ಕ್ರೈಂ ಎಪಿಸೋಡ್‌ ಪ್ರಸಾರ ಮಾಡಿ ಶೋಭಾಳ ಚಾರಿತ್ರ‍್ಯ ಹರಣ ಮಾಡಿರುವ ನ್ಯೂಸ್‌ ಚಾನೆ‌ಲ್‌ಗಳ ವಿರುದ್ಧ  ಶನಿವಾರ  ಪ್ರತಿಭಟನೆ ನಡೆಯುತ್ತಿದೆ.
 ಹತ್ಯೆಯಾದ ಯುವತಿ ಅಣ್ಣಂದಿರು, ಈ ಹೋರಾಟಕ್ಕೆ ಸಾರ್ವಜನಿಕರಿಗೆ ಕರೆಕೊಟ್ಟಿದ್ದು, ಸದಾ ಸುದ್ದಿ ನೀಡುವ ಸುದ್ದಿ ವಾಹಿನಿಗಳ ವಿರುದ್ಧವೇ ಇವರ ಹೋರಟ ನಡೆಯುತ್ತಿದೆ.  ಅನ್ಯಾಯವಾಗಿ ಕೊಲೆಯಾಗಿಹೋದ ತನ್ನ ತಂಗಿಯ ಚಾರಿತ್ರ‍್ಯ ಹರಣ ಮಾಡಿವೆ ಎಂಬ ಕಾರಣಕ್ಕೆ ನ್ಯೂಸ್‌ಚಾನಲ್‌ಗಳ ಒನ್‌ಸೈಡೆಡ್‌ ನ್ಯೂಸ್‌ ಎಪಿಸೋಡ್‌ಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಇವರು,  ‘ಜಸ್ಟಿಸ್‌ ಫಾರ್‌ ಶೋಭಾ, ಜಸ್ಟಿಸ್ ಫಾರ್‌ ಆಲ್‌’ ಎಂಬ ಹೋರಾಟವನ್ನ ಕೈಗೆತ್ತಿಕೊಂಡಿದ್ದಾರೆ.
ಕೊಲೆಯಾದ ಯುವತಿಯ ಹೆಸರು ಶೋಭಾ ಎಂದಾಗಿದ್ದು, ಮದುವೆಯಾಗು ಎಂದು ಒತ್ತಾಯಿಸಿದ ಗಿರೀಶ್‌ ಎಂಬಾತನೇ, ಆಕೆ ಇಲ್ಲ ಎಂದಳು ಎಂಬ ಕಾರಣಕ್ಕೆ ಚಾಕುವಿನಿಂದ ಇರಿದು ಆಕೆಯನ್ನ ಕೊಲೆ ಮಾಡಿದ್ದ. ಈ ಘಟನೆ ನಡೆದಿದ್ದು, ಇದೇ ತಿಂಗಳ 11ರಂದು, ಬೆಂಗಳೂರಿನ ದೀಪಾಂಜಲಿ ನಗರದಲ್ಲಿ. ಬ್ಯಾಟರಾಯನ ಪುರ ಪೊಲೀಸ್‌ ಠಾಣಾಯಲ್ಲಿ ಕೊಲೆ ಪ್ರಕರಣ ದಾಖಲಾಗುತ್ತಿದ್ದಂತೆ, ನಾಲ್ಕಾರು ಗಂಟೆಯ ವಿಚಾರಣೆಯ ನಂತರ, ಅನೈತಿಕ ಸಂಬಂಧ ಮತ್ತು ಮದುವೆಗೆ ನಿರಾಕರಣೆಯೇ ಕೊಲೆಗೆ ಕಾರಣ ಎಂದು ಪೊಲೀಸರು ಹೇಳಿಬಿಟ್ಟರು. ಪೊಲೀಸ್‌ ಹೇಳಿಕೆಯನ್ನ ಇಟ್ಟುಕೊಂಡ ಟಿ.ವಿ ವರದಿಗಾರರು, ಸುದ್ದಿಮನೆಯಲ್ಲಿ ಕುಳಿತುಕೊಂಡು ಅರ್ಧ ಗಂಟೆಯ ಕ್ರೈಂ ಎಪಿಸೋಡ್‌ಗಳನ್ನೇ ಸಿದ್ಧಗೊಳಿಸಿ ಟೆಲಿಕಾಸ್ಟ್‌ ಮಾಡಿಬಿಟ್ಟಿದ್ದಾರೆ. ಕನ್ನಡದ ನ್ಯೂಸ್‌ ಚಾನಲ್‌ಗಳಾದ, ಸುವರ್ಣಾ ನ್ಯೂಸ್, ಪ್ರಜಾ ಟಿ.ವಿ, ಸಮಯ ನ್ಯೂಸ್, ಪಬ್ಲಿಕ್ ಟಿ.ವಿಗಳಲ್ಲಿ ಪ್ರಮುಖವಾಗಿ ಈ ಕೊಲೆ ಪ್ರಕರಣದ ಕ್ರೈ ಎಪಿಸೋಡ್‌ ಪ್ರಸಾರವಾಗಿದೆ. ಈ ಎಲ್ಲ ಚಾನೆಲ್‌ಗಳು ಇದೊಂದು ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ನಡೆದ ಕೊಲೆ ಎಂದೇ ಬಿಂಬಿಸಿದ್ದಾರೆ. ಪೊಲೀಸ್‌ ಹೇಳಿಕೆಗೆ ಆಧಾರಿಸಿ ಪ್ರಸಾರವಾದ ಎಪಿಸೋಡ್‌ಗಳಲ್ಲಿ ಶೋಭಾಳನ್ನೇ ತಪ್ಪಿತಸ್ತೆ ಎಂಬಂತೆ ತೋರಿಸಲಾಗಿದ್ದು, ಹತ್ಯೆಗೈದ ಗಿರೀಶ್‌ಗೂ  ಶೋಭಾಳಿಗೂ ಅಕ್ರಮ ಸಂಬಂಧ ಇತ್ತು ಎಂದು ಈ ಎಲ್ಲ ನ್ಯೂಸ್‌ಚಾನಲ್‌ಗಳು ಜಗಜ್ಜಾಹೀರು ಮಾಡಿಬಿಟ್ಟವು.
ಶನಿವಾರ ನ್ಯಾಯದ ಹೋರಾಟಕ್ಕೆ ಕರೆ ಕೊಟ್ಟಿರುವ ಶೋಭಾ ಅಣ್ಣ, ಸಾರ್ವಜನಿಕರಿಗೊಂದು ಬಹಿರಂಗ ಪತ್ರವನ್ನೂ ಬರೆದಿದ್ದಾರೆ. ಆ ಪತ್ರದಲ್ಲಿ ನಡೆದ ಘಟನಾವಳಿಗಳನ್ನೆಲ್ಲ ವಿವರಿಸಿ, ನಿರಪರಾಧಿ ತನ್ನ ತಂಗಿಗಾಗಿ ನ್ಯಾಯ ಕೇಳಿದ್ದಲ್ಲದೇ, ಸುಳ್ಳು ಸುಳ್ಳಾಗಿ ಸುದ್ದಿ ಬಿತ್ತರಿಸಿದ ವಾಹಿನಿಗಳ ವಿರುದ್ಧ ಸಮರ ಸಾರಿದ್ದಾರೆ. ಮತ್ತು ಇದೇ ಪತ್ರದಲ್ಲಿ ಪ್ರಮುಖವಾಗಿ 7 ಹಕ್ಕೊತ್ತಾಯಗಳನ್ನ ಮಂಡಿಸಿದ್ದಾರೆ.
ಶೋಭಾ ಕುಟುಂಬದ ಹಕ್ಕೊತ್ತಾಯಗಳು ಹೀಗಿವೆ –
1. ಸುವರ್ಣಾ ನ್ಯೂಸ್, ಪ್ರಜಾ ಟಿ.ವಿ, ಸಮಯ ನ್ಯೂಸ್, ಪಬ್ಲಿಕ್ ಟಿ.ವಿ, ಹಾಗು ಮುಂತಾದ ಮಾಧ್ಯಮದವರು ಪ್ರಸಾರ ಮಾಡಿರುವ ಕಾರ್ಯಕ್ರಮಗಳನ್ನು ಹಿಂಪಡೆಯ ಬೇಕು. ನಮ್ಮ ಕುಟುಂಬದವರಿಗೆ ಸಾರ್ವಜನಿಕವಾಗಿ ಕ್ಷಮಾಪಣೆ ಕೇಳಬೇಕು.
2.ಮಾನ್ಯ ಮುಖ್ಯ ಮಂತ್ರಿಗಳು ಶೋಭಾಳ ಹತ್ಯೆಯ ಬಗ್ಗೆ ಹೇಳಿಕೆಯನ್ನು ನೀಡಿ, ಉಪ ಪೋಲೀಸ್ ಆಯುಕ್ತರಾದ ಅನುಚೇತರವರ ಹೇಳಿಕೆ ಬಗ್ಗೆ ಮೌನ ಮುರಿಯಲಿ.
3.ಉಪ ಪೋಲೀಸ್ ಆಯುಕ್ತಾರದ ಅನುಚೇತರವರು ಸಾರ್ವಜನಿಕವಾಗಿ ನಮ್ಮ ಕುಟುಂಬದವರಿಗೆ ಕ್ಷಮಾಪಣೆ ಕೇಳಬೇಕು.
4.ಮಹಿಳೆಯರಿಗೆ ಸುರಕ್ಷತೆ ನೀಡಲು ಸಿ.ಸಿ.ಟಿ.ವಿ ಕ್ಯಾಮೆರಾಗಳು ಬೇಕಿಲ್ಲ. ಸರ್ಕಾರಗಳಿಂದ ರಸ್ತೆ, ಫುಟ್ಪಾಥ್, ಕೆಲಸದ ಜಾಗಗಳಲ್ಲಿ ಮತ್ತು ಮನೆಯ ಸುತ್ತಾಮುತ್ತಲು ಸರಕ್ಷತೆಯಿದೆ ಎಂಬ ಆಶ್ವಾಸನೆ ಬೇಕು. ನಗರಗಳು ಮಹಿಳೆಯರಿಗೆ ಸುರಕ್ಷವಾಗಿದೆ ಎಂಬ ಭಾವನೆ ಬರಬೇಕು.
5.ಮಹಿಳೆಯರ ವಿರುದ್ಧ ದೌರ್ಜನ್ಯ ಮಾಡುವ ಗಂಡಸರನ್ನು ಶಿಕ್ಷಿಸಬೇಕು. ಮಾಧ್ಯಮದವರು ಹಾಗು ಪೋಲೀಸರು ಅವರುಗಳನ್ನು ಪ್ರೋತ್ಸಾಹಿಸುವುದನ್ನು ನಿಲ್ಲಿಸಬೇಕು.
6.ಎಲ್ಲಾ ಮಾಧ್ಯಮದವರು ಅವರಿಗೆ ಬದ್ಧವಾದ ರಾಷ್ಟ್ರೀಯ ಪ್ರಸಾರ ಸಂಘದ ಕೋಡ್ ಆಫ್ ಕಾಂಡಕ್ಟನ್ನು ಪಾಲಿಸಬೇಕು
7.ಪೋಲೀಸರು ಶೋಭಾಳ ಹತ್ಯೆಯ ತನಿಖೆಯನ್ನು ವೇಗವಾಗಿ ಮತ್ತು ದಕ್ಷೆತೆಯಲ್ಲಿ ನಡೆಸಿ, ನನ್ನ ತಂಗಿಗೆ ನ್ಯಾಯ ದೊರಕಿಸಿಕೊಡಬೇಕು.
ಕುಟುಂಬ ಪ್ರಕಾರ ಆದದ್ದೇನು…?
ಕೊಲೆಯಾದ ಯುವತಿ ಶೋಭಾ ವಿದ್ಯಾವಂತೆ. ದೀಪಾಂಜಲಿ ನಗರದಲ್ಲಿರುವ ತನ್ನ ವಠಾರದ ಮಕ್ಕಳಿಗೆ ಟ್ಯೂಶನ್‌ ಹೇಳಿ ಬದುಕು ಕಟ್ಟಿಕೊಂಡ ಸರಳ ಸ್ವಭಾವದ ಯುವತಿಯ ಹಿಂದಿಬಿದ್ದಿದ್ದ ಅದೇ ವಠಾರದ ಗಿರೀಶ್‌, ಸಾಕಷ್ಟು ಬಾರಿ ತನ್ನ ಮದುವೆಯಾಗುವಂತೆ ಶೋಭಾಳನ್ನ ಕೇಳಿದ್ದ. ಈಗಾಗಲೇ ಮದುವೆಯಾಗಿ 2 ಮಕ್ಕಳಿರುವ ಆತ, ಶೋಭಾಳನ್ನ ಬಯಸಿದ್ದ.  ಮದುವೆಯಾಗಲು ಅವನೆಷ್ಟೇ ಕೇಳಿದರೂ ಶೋಭಾ ಉತ್ತರ ಇಲ್ಲ ಎಂದೇ ಆಗಿತ್ತು. ಅಪ್ಪ ಅಮ್ಮ ಇಲ್ಲದ ಶೋಭಾ ಅಣ್ಣಂದಿರೊಂದಿಗೆ ಬದುಕುತ್ತಿದ್ದು, ಇತ್ತೀಚೆಗೆ ಅಣ್ಣಂದಿರು ಶೋಭಾ ಮದುವೆಗಾಗಿ ಬೇರೆ ಸಂಬಂಧ ಹುಡುಕಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ರೊಚ್ಚಿಗೆದ್ದ ಗಿರೀಶ್‌ ಶೋಭಾಳನ್ನ ಕೊಂದೇ ಬಿಟ್ಟಿದ್ದಾನೆ.  ಆಕೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸುವಾಗ, ಅಡ್ಡಬಂದ ಪಕ್ಕದ ಮನೆಯ ಮಹಿಳೆಯ ಮೇಲೆಯೂ ದಾಳಿ ಮಾಡಿದ್ದಾನೆ. ಅಸ್ವಸ್ಥರಾದ ಇಬ್ಬರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದರೂ, ತೀವ್ರ ಗಾಯಗೊಂಡಿದ್ದ ಶೋಭಾಳನ್ನ ಉಳಿಸಿಕೊಳ್ಳುವುದು ಸಾಧ್ಯವಾಗಲಿಲ್ಲ.

Comments are closed.