ಕರಿಕಬ್ಬು ಗ್ರಾಮ : ಸಂಕ್ರಾಂತಿ ಹಬ್ಬಕ್ಕೆ ಈ ಊರಿನ ಕಬ್ಬು ತುಂಬಾನೇ ಫೇಮಸ್!

ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿ. ಎಳ್ಳು ಬೆಲ್ಲದ ಜೊತೆಗೆ ಕಬ್ಬನ್ನು ಸವಿಯುವ ಹಬ್ಬ. ಈ ಸಂಕ್ರಾಂತಿ ಹಬ್ಬ ಬಂತು ಅಂದ್ರೆ ಕಬ್ಬಿಗೆ ಎಲ್ಲಿಲದ ಬೇಡಿಕೆ. ಅದರಲ್ಲೂ ಕರಿ ಕಬ್ಬಿಗೆ ತುಂಬಾ ಬೇಡಿಕೆ ಇದೆ. ರಾಜ್ಯದ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬಿಳಿ ಕಬ್ಬು ಬೆಳೆಯುತ್ತಿದ್ದರೂ ಸಹ, ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಮಾತ್ರ ಬಹುತೇಕರ ಆಯ್ಕೆ ಮಾತ್ರ ಈ ಕರಿ ಕಬ್ಬು. ಆದ್ರೆ ಈ ರೀತಿಯ ಕರಿ ಕಬ್ಬು ಬೆಳೆಯುವ ರೈತರು ಮತ್ತು ಗ್ರಾಮಗಳು ಮಾತ್ರ ರಾಜ್ಯದಲ್ಲಿ ಅತೀ ವಿರಳ. ಆದ್ರೆ ಬೊಂಬೆನಾಡಿನ ಈ ಗ್ರಾಮವನ್ನ ಮಾತ್ರ ಕರಿ ಕಬ್ಬು ಗ್ರಾಮ ಎಂದೇ ಹೆಸರು ಪಡೆದಿದೆ. ಈ ಕುರಿತ ವರದಿ ಇಲ್ಲಿದೆ ನೋಡಿ..

ಹೌದು… ರಾಮನಗರ ಜಿಲ್ಲೆಯ ಬೊಂಬೆನಗರಿ ಖ್ಯಾತಿಯ ಚನ್ನಪಟ್ಟಣ ತಾಲೂಕಿನ ಪಟ್ಲು ಅಂದ್ರೆ ಕರಿಕಬ್ಬು ಗ್ರಾಮವೆಂದೇ ಫೇಮಸ್ಸ್. ಜೊತೆಗೆ ಪಕ್ಕದ ತಿಟ್ಟಮಾರನಹಳ್ಳಿ, ಚಿಕ್ಕನದೊಡ್ಡಿ ಗ್ರಾಮದ ರೈತರು ಕೂಡ ನಂಬಿಕೊಂಡಿರುವುದು ಈ ಕರಿಕಬ್ಬು ಬೇಸಾಯವನ್ನೇ. ಇಡೀ ರಾಮನಗರ ಜಿಲ್ಲೆಯಲ್ಲಿ ಕರಿ ಕಬ್ಬನ್ನು ಬೆಳೆಯುವ ಗ್ರಾಮಗಳು ಎಂಬ ಹಿರಿಮೆಯನ್ನು ಈ ಗ್ರಾಮಗಳು ಹೊಂದಿವೆ. ಈ ಗ್ರಾಮಗಳ ಕರಿ ಕಬ್ಬಿಗೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಬಹು ಬೇಡಿಕೆ ಇದೆ. ಈ ಕಬ್ಬಿನ ಬೇಡಿಕೆ ರಾಜ್ಯವನ್ನೂ ದಾಟಿ, ನೆರೆಯ ಕೇರಳ, ತಮಿಳುನಾಡು, ಗುಜರಾತ್ ರಾಜ್ಯಗಳಿಗೂ ಇಲ್ಲಿನ ಕಬ್ಬು ರಫ್ತಾಗುತ್ತದೆ. ಈ ಗ್ರಾಮಗಳ ಬಹುತೇಕ ರೈತರು ಕರಿ ಕಬ್ಬಿನ ವ್ಯವಸಾಯವನ್ನೇ ನೆಚ್ಚಿಕೊಂಡಿದ್ದಾರೆ. ಸುಮಾರು ೪೦-೫೦ ಎಕರೆಗೂ ಹೆಚ್ಚು ಪ್ರದೇಶಗಳಲ್ಲಿ ಈ ಕಬ್ಬನ್ನು ವಾಣಿಜ್ಯ ಬೆಳೆಯಾಗಿ ಗ್ರಾಮಸ್ಥರು ಬೆಳೆದಿದ್ದು ರೈತರು ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದಾರೆ. ಆದ್ರೆ ಈ ಭಾರೀ ಕರಿ ಕಬ್ಬಿನ ಬೆಳೆಯಲ್ಲಿ ವ್ಯತ್ಯಯವಾಗಿದ್ದು, ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ಪ್ರೋತ್ಸಾಹ ಧನವನ್ನು ನೀಡಿದ್ರೆ, ರೈತರಿಗೆ ಅನುಕೂಲವಾಗಲಿದೆ ಎಂದು ಸರ್ಕಾರಕ್ಕೆ ಬೇಡಿಕೆಯನ್ನು ಇಟ್ಟಿದ್ದಾರೆ.

ಇನ್ನು ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಮಾತ್ರ ಬಹುತೇಕ ಕರಿ ಕಬ್ಬನ್ನು ಬೆಳೆಯಲಾಗುತ್ತದೆ. ಸಂಕ್ರಾಂತಿ ಹಬ್ಬದ ವೇಳೆ ಎಳ್ಳು ಬೆಲ್ಲದ ಜೊತೆಗೆ ಈ ಕರಿ ಕಬ್ಬಿನ ಒಂದು ತುಂಡನ್ನ ನೀಡುವುದು ಹಾಗೂ ಈ ಹಬ್ಬದ ಸಂದರ್ಭದಲ್ಲಿ ಒಂದು ಗೇಣು ಕರಿ ಕಬ್ಬು ತಿಂದರೆ ನೆಮ್ಮದಿ ಎಂಬ ವಾಡಿಕೆ ಕೂಡ ಜನರಲ್ಲಿ ಇದೆ. ಒಂದು ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯಲು ಸುಮಾರು ೫೦ ರಿಂದ ೬೦ ಸಾವಿರ ಖರ್ಚಾಗುತ್ತದೆ. ೧.೫೦ ಲಕ್ಷಗಳಿಗೂ ಹೆಚ್ಚು ಲಾಭ ದೊರೆಯುತ್ತದೆ ಎಂಬುದು ಕಬ್ಬು ಬೆಳೆಗಾರರ ಮಾತು. ಸಂಕ್ರಾಂತಿ ಸಮಯದಲ್ಲಿ ಮಾತ್ರ ಈ ಕಬ್ಬು ಚೆನ್ನಾಗಿ ಬರುತ್ತದೆ. ಹೀಗಾಗಿ ಸಂಕ್ರಾಂತಿ ಸಮಯದಲ್ಲಿ ಈ ಕಬ್ಬಿಗೆ ಎಲ್ಲಿಲ್ಲದ ಬೇಡಿಕೆ ಇದೆ.

ಒಟ್ಟಾರೆ ವರ್ಷಕ್ಕೊಮ್ಮೆ ವಿಶೇಷವಾಗಿ ಬೆಳೆಯುವ ಈ ಕರಿ ಕಬ್ಬನ್ನು ಈ ಗ್ರಾಮಗಳ ಜನರು ಬಹಳ ಶ್ರಮಪಟ್ಟು ಬೆಳೆಸುತ್ತಾರೆ. ವಿದ್ಯುತ್ ಹಾಗೂ ನೀರಿನ ಕೊರತೆ ನಡುವೆಯು ಈ ಭಾಗದ ರೈತರು ಈ ಕರಿ ಕಬ್ಬನ್ನ ಬೆಳೆದು ಬೇರೆ ರೈತರಿಗೆ ಮಾದರಿಯಾಗಿದ್ದಾರೆ. ಆದರೆ ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ಈ ಕರಿ ಕಬ್ಬು ಬೆಳೆಯುವ ರೈತರಿಗೆ ಪ್ರೋತ್ಸಾಹ ಧನವನ್ನು ನೀಡಿ ಬೆಂಬಲಿಸಲಿ ಎಂಬುದು ಈ ಭಾಗದ ರೈತರ ಅಭಿಪ್ರಾಯವಾಗಿದೆ.