ಎಚ್‌ಡಿಕೆ ವಿರುದ್ಧ ಭೂ ಕಬಳಿಕೆ ಆರೋಪ : ಮರುಕಳಿಸುವಂತೆ ಎಸ್ ಆರ್ ಹಿರೇಮಠ‌ ಆಗ್ರಹ

ಮಾಜಿ‌ ಸಿಎಂ ಎಚ್‌ಡಿ ಕುಮಾರಸ್ವಾಮಿ ಮತ್ತು ಕುಟುಂಬ ಸದಸ್ಯರ ವಿರುದ್ಧ ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ ಎಸ್ ಆರ್ ಹಿರೇಮಠ ಭೂ ಕಬಳಿಕೆ ಗಂಭೀರ ಆರೋಪ ಮಾಡಿದ್ದಾರೆ.

ಹಾವೇರಿಯ ಸುದ್ದಿಗೋಷ್ಠಿಯಲ್ಲಿ 500 ಕೋಟಿ ಬೆಲೆ ಬಾಳುವ ಭೂ ಕಬಳಿಕೆ ದಾಖಲೆಗಳನ್ನು ಹಿರೇಮಠ ಅವರು ಬಿಡುಗಡೆ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಅವರು ತಮ್ಮ ರಾಜಕೀಯ ಪ್ರಭಾವದಿಂದ ಬಡವರು, ದಲಿತರ ಭೂಮಿಯನ್ನು ತಮ್ಮ ವಶದಲ್ಲಿಟ್ಟುಕೊಂಡಿದ್ದಾರೆ.

ಮಾಜಿ ಸಿಎಂ ಎಚ್.ಡಿ.‌ ಕುಮಾರಸ್ವಾಮಿ, ದೇವೆಗೌಡರ ಪತ್ನಿಯ ಸಹೋದರಿ ಸಾವಿತ್ರಮ್ಮ, ಸಂಬಂಧಿ ಡಿ.ಸಿ. ತಮ್ಮಣ್ಣ ಹಾಗೂ ತಮ್ಮಣ್ಣ ಸೋದರ ನಂಜುಡಯ್ಯರಿಂದ ರಾಮನಗರ ಜಿಲ್ಲೆಯ ಕೇತಿಗಾನಹಳ್ಳಿಯಲ್ಲಿ ಗೋಮಾಳ ಸೇರಿದಂತೆ 200 ಎಕರೆ ಭೂ ಕಬಳಿಕೆ ಮಾಡಿದ್ದಾರೆ.

ಈ ಬಗ್ಗೆ 2014 ರ ಆಗಸ್ಟ್ 5ರಂದು ಕರ್ನಾಟಕ ಲೋಕಾಯುಕ್ತರು ಆದೇಶ ಮಾಡಿದ್ದರು. ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಆದೇಶಿಸಿದ್ದರು. ನಾಲ್ಕು ತಿಂಗಳೊಳಗೆ ಕ್ರಮ ಕೈಗೊಳ್ಳಲು ಆದೇಶಿಸಿದ್ದರು. ಕಬಳಿಕೆಯಾದ ಭೂಮಿ ಸರ್ಕಾರದ ವಶಕ್ಕೆ ಪಡೆದು, ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಆದೇಶಿಸಿದ್ದರು. ಕ್ರಮಕೈಗೊಂಡ ಬಗ್ಗೆ ಲೋಕಾಯುಕ್ತ ರಿಜಿಸ್ಟ್ರಾರ್ ಗೆ ವರದಿ ನೀಡಲು ಸೂಚಿಸಿತ್ತು. ಈ ಬಗ್ಗೆ ಸರಕಾರ ಮತ್ತು ಅಧಿಕಾರಿಗಳು ತೆಪ್ಪಗೆ ಕುಳುತ್ತಿದ್ದರು. ಈ ಬಗ್ಗೆ ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿದ್ದೇವೆ. ಹೈಕೋರ್ಟ್‌ನಲ್ಲಿ ವಿಚಾರಣೆಗೂ ಬಂದಿದೆ.

ಹೈಕೋರ್ಟ್ ಮೂರು ತಿಂಗಳೊಳಗಾಗಿ ಸರಕಾರ ಈ ಬಗ್ಗೆ ಅನುಷ್ಠಾನ ಮಾಡಬೇಕು ಎಂದು ಆದೇಶಿಸಿದೆ. ಸರ್ಕಾರದ ಭೂಮಿ‌ ಸರ್ಕಾರಕ್ಕೆ ಮರಳಿ‌ ಬರಬೇಕು.ಕಬಳಿಸಿದವರು ಹಾಗೂ ಕಬಳಿಸಲು ಅನುಕೂಲ ಮಾಡಿದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಕ್ರಮ ತೆಗೆದುಕೊಳ್ಳಲು ದೂರಿನಲ್ಲಿ ಸಲ್ಲಿಸಿದ್ದೇವೆ. ಮಾಜಿ ಪ್ರಧಾನಿಗಳು ಅವರ ಕುಟುಂಬ ಆತ್ಮಾವಲೋಕನ ಮಾಡಿಕೊಳ್ಳಬೇಕು. ಜನರ ಕ್ಷಮೆಯಾಚಿಸಿ, ಭೂಮಿ ಮರಳಿ ನೀಡಬೇಕು ಎಂದು ಎಸ್ ಆರ್ ಹಿರೇಮಠ‌ ಆಗ್ರಹಿಸಿದ್ದಾರೆ.