ಕೊನೆಯ ಏಕದಿನ ಪಂದ್ಯ- ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಟೀಮ್ ಇಂಡಿಯಾ ಜಯಭೇರಿ

ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 7 ವಿಕೆಟ್ ಜಯ ಸಾಧಿಸಿದ ಭಾರತ ಸರಣಿಯನ್ನು 2-1 ಪಂದ್ಯಗಳ ಅಂತರದಿಂದ ಗೆದ್ದುಕೊಂಡಿದೆ.

ಈ ನಿರ್ಣಾಯಕ ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡು ಭರ್ಜರಿ ರನ್ ಕಲೆ ಹಾಕಿತು. 286 ರನ್‌ಗಳಿಸಿದ ಆಸ್ಟ್ರೇಲಿಯಾ ತಂಡ ತನ್ನ 9 ವಿಕೆಟ್ ಕಳೆದುಕೊಂಡಿತು. ಈ ಮೂಲಕ ಟೀಮ್ ಇಂಡಿಯಾ ಗೆಲ್ಲಲು ಸವಾಲಿನ ಗುರಿ ನೀಡಿತ್ತು. ಆಸ್ಟ್ರೇಲಿಯಾ ಪರವಾಗಿ ಸ್ಟೀವ್ ಸ್ಮಿತ್ ಶತಕದ ಆಟವನ್ನು ಆಡಿ ಆಸ್ಟ್ರೇಲಿಯಾಗೆ ಆಸರೆಯಾದರು. ಸ್ಮಿತ್ 132ಎಸೆತಗಳನ್ನು ಎದುರಿಸಿ ಭರ್ಜರಿ 131 ರನ್ ಬಾರಿಸಿದ್ದಾರೆ. ಸ್ಮಿತ್ ಇನ್ನಿಂಗ್ಸ್‌ನಲ್ಲಿ ಒಂದು ಸಿಕ್ಸ್ ಮತ್ತು 14 ಬೌಂಡರಿಗಳು ಇತ್ತು.

ಸ್ಮಿತ್‌ಗೆ ಈ ಪಂದ್ಯದಲ್ಲೂ ಎರಡನೇ ಅಂತಾರಾಷ್ಟ್ರೀಯ ಪಂದ್ಯ ಆಡುತ್ತಿರುವ ಮಾರ್ನಸ್ ಲ್ಯಾಬ್ಯುಷ್ಯಾಗ್ನೆ ಉತ್ತಮ ಸಾಥ್ ನೀಡಿದರು. ಈ ಪಂದ್ಯದಲ್ಲಿ ಮಾರ್ನಸ್ ಅರ್ಧ ಶತಕವನ್ನು ಸಿಡಿಸಿದರು. ಉಳಿದಂತೆ ಯಾವ ಆಟಗಾರನಿಂದಲೂ ಹೇಳಿಕೊಳ್ಳುವಂತಾ ಪ್ರದರ್ಶನ ಮೂಡಿಬಂದಿಲ್ಲ. ಟೀಮ್ ಇಂಡಿಯಾ ಪರವಾಗಿ ವೇಗಿ ಮೊಹಮದ್ ಶಮಿ ನಾಲ್ಕು ವಿಕೆಟ್ ಪಡೆದರೆ ರವೀಂದ್ರ ಜಡೇಜಾ 2 ವಿಕೆಟ್ ಕಿತ್ತರು. ನವ್‌ದೀಪ್ ಸೈನಿ ಮತ್ತು ಕುಲ್ದೀಪ್ ಯಾದವ್ ತಲಾ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ರೋಹಿತ್ ಶರ್ಮಾ 119 ರನ್ ಗಳಿಸಿದರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 89 ರನ್ ಗಳಿಸಿ ಅಂತಿಮ ಹಂತದಲ್ಲಿ ವಿಕೆಟ್ ಕಳೆದುಕೊಂಡರು. ಆಸ್ಟ್ರೇಲಿಯಾ ಪರವಾಗಿ ಬೌಲರ್‌ಗಳು ಕೇವಲ ಮೂರು ವಿಕೆಟ್‌ ಪಡೆಯಲಷ್ಟೇ ಶಕ್ತರಾದರು. ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆಲ್ಲಬೇಕಾದರೆ ಈ ಪಂದ್ಯವನ್ನು ಟೀಮ್ ಇಂಡಿಯಾ ಗೆಲ್ಲಲೇ ಬೇಕಾಗಿತ್ತು. ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಟೀಮ್ ಇಂಡಿಯಾ ಬ್ಯಾಟಿಂಗ್‌ ಪಡೆ ಆಸ್ಟ್ರೇಲಿಯಾವನ್ನು ಮಣಿಸುವಲ್ಲಿ ಯಶಸ್ವಿಯಾಯಿತು. ಇನ್ನೂ 15 ಎಸೆತಗಳು ಬಾಕಿ ಇರುವಂತೆಯೇ ಟೀಮ್ ಇಂಡಿಯಾ ಜಯಭೇರಿ ಮೊಳಗಿಸಿತು.