ತಿರುವಿನಲ್ಲಿ ಬಸ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ರಸ್ತೆ ಪಕ್ಕದ ಗುಂಡಿಗೆ ಬಿದ್ದ ಲಾರಿ…

ರಸ್ತೆ ತಿರುವಿನಲ್ಲಿ ಲಾರಿ ಮತ್ತು KSRTC ಬಸ್ ಮಧ್ಯೆ ಭೀಕರ ಅಪಘಾತ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ರೈಲ್ವೆ ಗೇಟ್ ಬಳಿ ನಡೆದಿದೆ.

ಬಾದಾಮಿಯಿಂದ ಬಾಗಲಕೋಟೆಗೆ ಹೊರಟಿದ್ದ ಕೆಎಸ್ ಆರ್ ಟಿಸಿ ಬಸ್ ಬಾಗಲಕೋಟೆಯಿಂದ ಬಾದಾಮಿಗೆ ಬರುತ್ತಿದ್ದ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದೆ. ತಿರುವಿನಲ್ಲಿ ಬಸ್ ಗೆ ಡಿಕ್ಕಿ ಹೊಡೆದ ಲಾರಿ ಪಲ್ಟಿಯಾಗಿ ರಸ್ತೆ ಪಕ್ಕದ ಗುಂಡಿಗೆ ಬಿದ್ದಿದ್ದರ ಪರಿಣಾಮ ಚಾಲಕ ಸೇರಿ ಬಸ್ ನಲ್ಲಿದ್ದ ೫ ಪ್ರಯಾಣಿಕರಿಗೆ ಗಾಯವಾಗಿದೆ. ಎರಡು ಗಂಟೆ ಕಾಯಾ೯ಚರಣೆ ಬಳಿಕ ಚಾಲಕನನ್ನ ಸ್ಥಳೀಯರು, ಪೊಲೀಸರು ಹೊರ ತೆಗೆದಿದ್ದಾರೆ.

ಪ್ರಕರಣದಲ್ಲಿ ಲಾರಿ ಚಾಲಕನ ಕೈಕಾಲಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇನ್ನುಳಿದ ಗಾಯಾಳುಗಳನ್ನು ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪಘಾತ ಹಿನ್ನೆಲೆ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ನಂತರ ಪೊಲೀಸರು ಟ್ರಾಫಿಕ್ ಕ್ಲಿಯರ್ ಮಾಡಿದ್ದಾರೆ.

ಬಾದಾಮಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.