ರಂಗಭೂಮಿ ಕಂಡ ಅದ್ಬುತ ಕನ್ನಡದ ಕಲಾವಿದ ಮೇಕಪ್ ಕೃಷ್ಣ ಇನ್ನಿಲ್ಲ…!

ರಂಗಭೂಮಿ ಕಂಡ ಅದ್ಬುತ ಕನ್ನಡದ ಕಲಾವಿದ ಮೇಕಪ್ ಕೃಷ್ಣ ಇನ್ನಿಲ್ಲ. 1996- 97 ಇರಬೇಕು ಸರಿಯಾಗಿ ಜ್ಞಾಪಕ‌ ಇಲ್ಲ, ಪೇಜರ್ ಕಾಲ‌ ಅದು. ಸ್ನೇಹಿತ ಮೇಕಪ್ ಕೃಷ್ಣ ಪೇಜರ್ ತಗೊಂಡಿದ್ದರು, ಒಂದು ದಿನ ಸ್ಕೂಟರ್ ನಲ್ಲಿ ದೂರದರ್ಶನಕ್ಕೆ ಬರ್ತಾ ಇರುವಾಗ ಪೇಜರ್ ವೈಬ್ರೇಟ್ ಆಗಿದೆ.

ಎಡ ಜೇಬಿನಲ್ಲಿದ್ದ ಕಾರಣ ತನ್ನ ‌ಸ್ಕೂಟರ್ ಪಕ್ಕಕ್ಕೆ ಹಾಕಿ ನನಗೆ ಹಾರ್ಟ್ ಅಟ್ಯಾಕ್ ಆಗಿದೆ ಅಂತ ಅಲ್ಲೇ ಫುಟ್ ಪಾತ್ನಲ್ಲಿ ಮಲಗಿದ್ದಾರೆ ! ಸುಮಾರು ವರ್ಷಗಳ ಕಾಲ ಈ ಸಂದರ್ಭ ನೆನಪಿಸಿಕೊಂಡು ಸ್ನೇಹಿತರೆಲ್ಲ ಕೃಷ್ಣನಿಗೆ ರೇಗುಸ್ತ , ಕೃಷ್ಣನ ಅನುಪಸ್ಥಿತಿಯಲ್ಲಿಯೂ ನೆನೆದು ನಗುತ್ತಿದ್ದವು.

ಇನ್ನೊಂದು ಇದೇ ರೀತಿಯ ಘಟನೆ, ಸಿನಿಮಾ ನೆಗೆಟಿವ್ ಪ್ರೋಸೆಸ್ ನಲ್ಲಿ ವಾಶ್ ಮಾಡುವುದು ಒಂದು ಕ್ರಿಯೆ. ತಾನು ಶೂಟಿಂಗ್ ನಲ್ಲಿರುವಾಗ ನಿರ್ದೇಶಕರು ಈ ನೆಗಟೀವ್ ಮದ್ರಾಸ್ ಗೆ ಕಳುಹಿಸು ಬೇಗ ಅಂತ ಮೇನೆಜರ್ ಹೇಳಿದ್ದಾರೆ, ಅದನ್ನ ಈ ಕೃಷ್ಣನೂ ಕೇಳಿಸಿಕೊಂಡು ಇದೇನು ವಾಶ್ ಮಾಡೋಕೆ ಮದ್ರಾಸ್ ಕಳಿಸೋದ ! ದಡ್ಡರು ಇವರು ಅಂತ ಸೀಲ್ ಮಾಡಿದ್ದ ನೆಗೆಟಿವ್ ಬಾಕ್ಸ್ ಓಪನ್ ಮಾಡಿ ರಿನ್ ಸೋಪಿನಿಂದ ವಾಶ್ ಮಾಡಿದ್ದು !

ಇಷ್ಟೆಲ್ಲಾ ಮುಗ್ದತೆ ಹಿನ್ನೆಲೆಯಿದ್ದ ಮೇಕಪ್ ಕೃಷ್ಣ ಕೇವಲ ಮೇಕಪ್ ಮಾಡೋಕೆ ಸೀಮಿತವಾಗದೆ ವರ್ಷ ಕ್ರಿಯೇಷನ್ಸ ಹೆಸರಲ್ಲಿ ಪ್ರೊಡಕ್ಷನ್ ಕಂಪನಿ ಮಾಡಿ ಹಲವಾರು ಧಾರವಾಹಿ ನಿರ್ಮಾಣ ಮಾಡಿದ್ದರು. ಡಾ ರಾಜಕುಮಾರ ರವರ ಕುರಿತ ಧಾರಾವಾಹಿ ಅತ್ಯಂತ ಯಶಸ್ವಿ ಕೂಡ ಪಡೆದಿತ್ತು. ಹಲವಾರು ರಂಗಭೂಮಿ ಚಟುವಟಿಕೆಗಳಲ್ಲಿಯೂ ಕ್ರಿಯಾಶೀಲರಾಗಿದ್ದ ಕೃಷ್ಣ, ರಂಗ ನಿರಂತರ ಎಂಬ ಪತ್ರಿಕೆಯನ್ನೂ ಮಾಡಿದ್ದರು.