ಗೆಲುವಿನ ಉತ್ಸಾಹದಲ್ಲಿ ಮನೀಶ್ ಪಾಂಡೆ ಬಳಗ!

ಆಡಿರುವ ಎರಡೂ ಪಂದ್ಯಗಳನ್ನು ಗೆದ್ದು ಉತ್ಸಾಹದಲ್ಲಿರುವ ಮನೀಶ್ ಪಾಂಡೆ ಬಳಗ ತನ್ನ ಮೂರನೇ ಪಂದ್ಯದಲ್ಲಿ ಇಂದು ಸೌರಾಷ್ಟ್ರ ವಿರುದ್ಧ ಹೋರಾಟವನ್ನು ನಡೆಸಲಿದೆ.

ಈಡನ್ ಗಾರ್ಡನ್ ಅಂಗಳದಲ್ಲಿ ನಡೆಯುವ ಪಂದ್ಯದಲ್ಲಿ ಕರ್ನಾಟಕ ಪಂದ್ಯವನ್ನು ಗೆಲ್ಲುವ ನೆಚ್ಚಿನ ತಂಡ. ಆಡಿರುವ ಎರಡು ಪಂದ್ಯಗಳಲ್ಲಿ ಜಯ ದಾಖಲಿಸಿರುವ ಕರ್ನಾಟಕ ಡಿ ಗುಂಪಿನ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದೆ. ಇನ್ನೂ ಎರಡೂ ಪಂದ್ಯಗಳನ್ನು ಸೋತ ಸೌರಾಷ್ಟ್ರ ಕೊನೆಯ ಸ್ಥಾನದಲ್ಲಿದೆ.

ಕರ್ನಾಟಕ ತಂಡದ ಬ್ಯಾಟಿಂಗ್ ಬಲಾಢ್ಯವಾಗಿದೆ. ಮಾಯಾಂಕ್ ಅಗರ್‌ವಾಲ್ ರನ್‌ಗಳನ್ನು ಕಲೆ ಹಾಕಬಲ್ಲ ಕ್ಷಮತೆ ಹೊಂದಿದ್ದಾರೆ. ಇನ್ನು ಅನುಭವಿ ರಾಬಿನ್ ಉತ್ತಪ್ಪ ಸರ್ವಿಸಸ್ ತಂಡದ ವಿರುದ್ಧ ಅರ್ಧಶತಕ ದಾಖಲಿಸಿದ್ದರು. ಉತ್ತಪ್ಪ ಮೂರನೇ ಪಂದ್ಯದಲ್ಲೂ ರನ್ ಸೇರಿಸುವ ವಿಶ್ವಾಸದಲ್ಲಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ಆರ್ ಸಮರ್ಥ್ ಹಾಗೂ ಮನೀಶ್ ಪಾಂಡೆ ವೇಗವಾಗಿ ರನ್‌ಗಳನ್ನು ಗುಡ್ಡೆ ಹಾಕಬಲ್ಲರು. ಎರಡನೇ ಪಂದ್ಯದಲ್ಲಿ ಭರ್ಜರಿ ಆಟದ ಪ್ರದರ್ಶನ ನೀಡಿದ್ದ ಪವನ್ ದೇಶಪಾಂಡೆ ಹಾಗೂ ಕೆಳ ಕ್ರಮಾಂಕದ ಅನಿರುದ್ಧ ಜೋಶಿ ಅವರ ಮೇಲೆ ವಿಶ್ವಾಸ ಹೆಚ್ಚಿದೆ. ಇವರಿಬ್ಬರೂ ಆಟಗಾರರು ಅರ್ಧಶತಕ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಬೌಲಿಂಗ್‌ನಲ್ಲಿ ಯುವ ಆಟಗಾರರು ತಂಡಕ್ಕೆ ನೆರವಾಗಲಿದ್ದು, ಗೆಲುವಿನ ಆಸೆಯನ್ನು ಮೂಡಿಸಿದ್ದಾರೆ.

ಸೌರಾಷ್ಟ್ರ ಎರಡು ಪಂದ್ಯದಲ್ಲಿ ಮಾಡಿದ ತಪ್ಪಿನಿಂದ ಪಾಠ ಕಲಿತಿದ್ದು, ಈ ಪಂದ್ಯದಲ್ಲಿ ಪುಟಿದೇಳುವ ಲೆಕ್ಕಾಚಾರವನ್ನು ಹಾಕಿಕೊಂಡಿದೆ. ಅಲ್ಲದೆ ಅಂಕದ ಖಾತೆಯನ್ನು ತೆರೆಯುವ ಕನಸು ಕಾಣುತ್ತಿದೆ. ತಂಡದಲ್ಲಿ ಸ್ಟಾರ್ ಆಟಗಾರರು ಇದ್ದು ಸಂಘಟಿತ ಆಟದ ಪ್ರದರ್ಶವನ್ನು ನೀಡಿದಲ್ಲಿ ಜಯದ ಕನಸು ನನಸಾಗುತ್ತದೆ.

Comments are closed.