ಪರೀಕ್ಷೆಯ ಪಾಠ, ಫಿಟ್‍ನೆಸ್ ಟೆಸ್ಟ್ ಆಯ್ತು…ಇಸಿ ಮಾಡುವುದು ಹೇಗೆ : ಸದ್ಯದಲ್ಲೇ ವಿಡಿಯೋ ವೈರಲ್

 ಪಿ.ಕೆ. ಮಲ್ಲನಗೌಡರ್

ನಮ್ ಗ್ರಾಪಂ ಆಧ್ಯಕ್ಷ ಗುರೇಂದ್ರ ನಮ್ ಏರಿಯಾದಲ್ಲಿ ಫುಲ್ ಫೇಮಸ್. ಏನೂ ಕೆಲಸ ಮಾಡದಿದ್ದರೂ ಈತನಿಗೆ ಸಿಕ್ಕಾಪಟ್ಟೆ ‘ಫಾಲೋ’ವರ್ಸ್ ಇದ್ದಾರೆ. ಈತನ ಬಣ್ಣದ ಮಾತಿಗೆ, ಪೋಸ್ಟ್‌ಗಳಿಗೆ ‘ಫಾಲ್’ ಆಗಿ ಫೌಲ್(ತಪ್ಪು) ಮಾಡುತ್ತಿರುವ ಪಡ್ಡೆಗಳ ಪಡೆಯೇ ಈತನ ಶಕ್ತಿ. ಪಕ್ಕದ ಪೇಟೆಯ ಕೆಲವು ಪತ್ರಕರ್ತರೂ ಮೇಜ್ ಕೆಳಗೆ ಕೈಹಾಕಿ ಗುರೇಂದ್ರನ ಇಮೇಜ್ ವೃದ್ಧಿಸುತ್ತ ಬಂದಿದ್ದಾರೆ.
ಒಂದಿನ ಕೆಲವು ನಿರುದ್ಯೋಗಿ ಹುಡುಗರು ನರೇಗಾ ಕಾಮಗಾರಿಯ ಅವ್ಯವಹಾರ ಕುರಿತು ಆಕ್ರೋಶ ವ್ಯಕ್ತಪಡಿಸಿದರು. ಗುರೇಂದ್ರನ ಕಾಂಟ್ರಾಕ್ಟರು ಬದಾನಿ ಸಾಕಷ್ಟು ದುಡ್ಡು ಹೊಡೆದಿದ್ದ. ನಕಲಿ ಜಾಬ್ ಕಾರ್ಡ್ ಸೃಷ್ಟಿ ಮಾಡಿ, ನಿರುದ್ಯೋಗಿಗಳಿಗೆ ಕೆಲಸ ಇಲ್ಲದಂತೆ ಮಾಡಿಬಿಟ್ಟಿದ್ದ. ಯಂತ್ರಗಳನ್ನು ಬಳಸಿ ಕೆರೆ ಹೂಳು ಅರ್ಧಂಬರ್ಧ ಎತ್ತಿ, ಪಂಚಾಯತಿ ಬಾಯಿಗೆ ಮಣ್ಣು ಹಾಕಿಬಿಟ್ಟಿದ್ದ.
ಇದನ್ನು ಪ್ರತಿಭಟಿಸುತ್ತಿದ್ದ ಹುಡುಗರನ್ನು ಕರೆಸಿದ ಗುರೇಂದ್ರ, ‘ಏನೀಗ ಕೆಲ್ಸ ಇಲ್ಲನು. ನಮ್ ಪಾರ್ಟಿ ಕೆಲ್ಸ ಮಾಡ್ರಿ. ಅಲ್ಲೇ ಮನ್ಯಾಗ ಕುಂತ ಮಾಡ್ರಿ. ನಾವೊಂದಿಷ್ಟು ವ್ಯಾಟ್ಸಪ್ ಸಂದೇಶ ಕಳಸ್ತೀವಿ. ಅವನ್ನ ಎಲ್ಲರಿಗೂ ಕಳಿಸದ್ರಾತು. ಅದು ಒಂದು ದಂದೆನಾ, ಇನ್ನ 6 ತಿಂಗಳಿಗೆ ಇಲ್ಲೊಂದ್ ಕಾಲ್‍ಸೆಂಟರ್ ಮಾಡಾಣ. ಸಾವಿರ ಹುದ್ದೆ ಸೃಷ್ಟಿ ಆಗ್ತಾವು’ ಎಂದ. ಗುರೇಂದ್ರನ ಸುಳ್ಳಿಗೆ ಕೆಲವರು ತಲೆಯಾಡಿಸಿದರು. ಉದ್ಯೋಗ ಸೃಷ್ಟಿ ಎಂಬ ಮಾಯೆಯ ಪವಾಡ!

‘ಊರಾಗಿನ ಹುಡ್ರು, ಹೆಣ್ಮಕ್ಕಳು ಕೆಲ್ಸ ಇಲ್ಲದ ಗುಳೆ ಹೊಂಟಾರ. ಏನ್ ಮಾಡಾಕ್ ಹತ್ತೀರಿ ನೀವೆಲ್ಲ’ ಎಂದು ಗ್ರಾಪಂ ಸಭೆಯಲ್ಲಿ ಕೇಳಿದರೆ, ‘ಏಯ್, ಗುಳೆ ಹೋಗಬೇಕು. ಅಲ್ಲಿ ಸಿಟಿಗಳನ್ನು ಅವ್ರು ಸ್ಮಾರ್ಟ್ ಮಾಡಬೇಕು. ಅಲ್ಲೇ ಆರಾಮು ಇರ್ತಾರ ಬಿಡಿ’ ಎಂದು ಬಾಯಿ ಮುಚ್ಚಿಸಿದ. ಪಕ್ಕದ ಪೇಟೆಯ ಪತ್ರಕರ್ತರು ಪಕೋಡಾ ತಿನ್ನುತ್ತ ಸುಪರ್ ಐಡಿಯಾ ಎಂದು ಗೀಚಿ ಒಗೆದರು-ಧನ್ಯತಾ ಭಾವದಿಂದ!
ಫೆಬ್ರುವರಿಯಲ್ಲಿ ಹೊಸದೊಂದು ಆಟ ಶುರು ಮಾಡಿದ್ದ ಗುರೇಂದ್ರ. ಎಸ್‍ಎಸ್‍ಎಲ್‍ಸಿ ಮಕ್ಕಳನ್ನೆಲ್ಲ ದಿನಾ ಸಂಜೆ ಗುಡ್ಡೆ ಹಾಕಿಕೊಂಡು ಪರೀಕ್ಷೆ ಹೇಗೆ ಬರೆಯಬೇಕು ಎಂದು ಟೀಚಿಂಗ್ ಶುರು ಮಾಡಿದ್ದ. ತಲೆ ಕೆಟ್ಟ ಸಿಟಿ ಕೇಬಲ್‍ನವರು ಇದನ್ನು ಲೈವ್ ಕೊಟ್ಟಿದ್ದರು. ಕುಹಕಿಗಳು ಮಾತ್ರ, ಇಂವಾ ಏನ್ ಟೀಚಿಂಗ್ ಮಾಡ್ತಾನೋ, ಚೀಟಿ ಇಟ್ಟುಕೊಂಡು ಪರೀಕ್ಷೆ ಪಾಸಾದಾಂವ’ ಎಂದರು. ಕೆಲವರು ಟೀಚಿಂಗ್ ಮತ್ತು ಚೀಟಿಂಗ್ ಎರಡೂ ಗುರ್ಯಾಗ ಒಂದಾ ಬಿಡಲೇ ಎಂದರು.

ಹೀಗೆ ಪಾಠ ಮಾಡುವಾಗ, ಒಬ್ಬ ಹುಡುಗ ಕೇಳಿದ, ‘ಗುರಣ್ಣ, ಈಗ ಮುಂದ್ಲ ಹುಡುಗ ಚೊಲೊತ್ಯನಗ ಪೇಪರ್ ಬರಿತಿರಾನ್ತ. ನಾವೇನ್ ಮಾಡುದು?’
ಗುರೇಂದ್ರ: ಅಂವಾ ಬರೆದಿದ್ದು ತೋರ್ಸು ಅನ್ನಬೇಕು. ನಮ್ ಗುರುಗಳಿದ್ರು, ಗೋಲ್‍ಮಾಲ್ಕರ್ ಅಂತ. ಅವರು ಬರೆದಿಟ್ಟ ಬುಕ್ಕೊಳ್ಗ ಇದ್ದಿದ್ದನ್ನ ನಾವು ಹೇಳ್ತಾನ ಇರ್ತೀವಿ. ಹಂಗ ನೀನು ಮುಂದ್ಲಾವಂದು ನೋಡಿ ಬರಕೊ. ನಾವು ಹಿಂದ್ಲಾವ್ರದು ನೋಡಿ ಮುಂದ ಹೊಂಟಿವಿ, ಅಷ್ಟ ಡಿಫರನ್ಸು’ ಎಂದ. ತಳಬುಡ ತಿಳಿಯದ ಮಕ್ಕಳು ಸುಮ್ಮನೇ ಚಪ್ಪಾಳೆ ಹೊಡ್ದವು.
ನಮ್ಮೂರ ಹುಡುಗ ವೀರಪ್ಪ ಕೊಳ್ಳಿ ಧಾರವಾಡದ ಕ್ರೀಡಾ ಹಾಸ್ಟೇಲಿನಲ್ಲಿದ್ದು ಒಳ್ಳೆ ಕಬಡ್ಡಿ ಆಟಗಾರ. ಮೊನ್ನೆ ಊರಿಗೆ ಬಂದಾಗ, ‘ಗುರಣ್ಣ ಮಾಮ, ನನ್ನ ಬಾಡಿ ನೋಡೋ. ಎದಕು ಬಗ್ಗಂಗಿಲ್ಲ. ನೀನು ಹಿಂಗಾಂಗ ನೋಡೋಣ’ ಎಂದು ತಮಾಷೆ ಮಾಡಿದ್ದ. ಪಂಚಾಯತಿ ಕೆಲಸ ಎಲ್ಲ ಮರೆತಿದ್ದ ಗುರೇಂದ್ರ, ‘ಲೇ ವೀರ, ನೋಡ್ತೀರು, ನೀ ಇನ್ನಮ್ಮೆ ಬರೊದ್ರೊಳಗ ಹ್ಯಂಗ್ ಆಗಿರ್ತೀನಿ ನೋಡು’ ಎಂದು ಸವಾಲು ಸ್ವೀಕರಿಸಿಬಿಟ್ಟಿದ್ದ.
ಒಂದು ವಾರ ಆಯ್ತು, ಏನೂ ನ್ಯೂಸ್ ಇಲ್ಲ. ಪಕ್ಕದ ಪಟ್ಟಣ ಸೇರಿ ಜಿಮ್‍ನಲ್ಲಿ ಕಸರತ್ತು ನಡೆಸಿದ್ದ. ಒಮ್ಮೇಲೆ ವಿಪರೀತ ಜಿಮ್ ಮಾಡಿದ್ದಕ್ಕೆ ಮೂಲವ್ಯಾಧಿ ಉಲ್ಬಣಗೊಂಡು ಆಸ್ಪತ್ರೆ ಸೇರಿದ್ದನಂತೆ. ತಾನು ಜಿಮ್ ಮಾಡುತ್ತಿರುವ ವಿಡಿಯೋ ಮಾಡಿಕೊಂಡು ಊರಿಗೆ ಬಂದ ಗುರೇಂದ್ರ. ಅದೇ ಹೊತ್ತಿಗೆ ಊರಿಗೆ ಬಂದಿದ್ದ ವೀರಪ್ಪ ಕೊಳ್ಳಿಗೆ ಅದನ್ನು ತೋರಿಸಿ ಹಹಹಹಾ ಎಂದು ಕೇಕೆ ಹಾಕಿದ್ದ. ಆದರೆ ಮೂಲವ್ಯಾಧಿ ಹೆಚ್ಚಾಗಿದ್ದನ್ನು ಮುಚ್ಚಿಟ್ಟಿದ್ದ.

ಊರ ಹಿರಿಯರು, ಇಂವಾ ಪಂಚಾಯ್ತಿ ಕೆಲ್ಸ ಮಾಡಾದು ಬಿಟ್ಟು, ಪಾಠ ಹೇಳಾದೂ, ಉಠಾಬೈಸಿ ತೆಗೆಯೋದು, ಏನ್ ಹುಚ್ಚತನ ಇದು’ ಎಂದು ಬೇಸರಿಸಿಕೊಂಡರು. ಪಿಡಿಒನ ಮುತುವರ್ಜಿಯಿಂದಾಗಿ ಊರಲ್ಲಿ ಒಂದ್ ಎಪ್ಪತ್ತು ಪೈಖ್ಯಾನಿ ತಲಿ ಎತ್ತಿದವು. ಇನ್ನು ಕೆಲವರು ನಮ್ಗ ಪೈಖ್ಯಾನಿನೇ ಬೇಡ ಎಂದರು. ‘ಗುರೇಂದ್ರ ಸರ್, ಹೆಂಗಾದ್ರೂ ಗುರಿ ತಲುಪಬೇಕು. ಎಲ್ಲ ಮನೆಗೂ ಪೈಖ್ಯಾನಿ ಕಟ್ಟಿಸಿ ಸ್ವಚ್ಛ ಭಾರತ್ ಎಂದು ಒಂದು ಫಂಕ್ಷನ್ ಮಾಡ್ರಿ. ಫುಲ್ ಫೇಮಸ್ ಆಗ್ತೀರಿ’ ಎಂದ.
ಒಳ್ಳೆ ಐಡಿಯಾ ಎನಿಸಿತು ಗುರೇಂದ್ರನಿಗೆ. ‘ಒಲ್ಲೆ ಅನ್ನೋರಿಗೆ ತಿಳಿಸಿ ಹ್ಯಂಗ್ ಹೇಳೋದ್ ಪಿಡಿಒ’ ಎಂದ. ‘ಗುರೇಂದ್ರಣ್ಣ, ವಲ್ಲ್ಯಾ ಅನ್ನೋರ ಮನ ಒಲಿಸ್ಬೇಕು. ಈಗ ಕಟ್ಟಿಸಿಕೊಂಡವರಿಗೆ ಹ್ಯಾಗ ಬಳಸಬೇಕು ಅಂತಾ ತಿಳುವಳಿಕೆ ನೀಡಿ. ಅದಕ್ಕ ಒಂದ್ ಐಡಿಯಾ ಐತ್ರಿ. ಪಾಠ ಹೇಳಿದಂಗ, ಜಿಮ್ ಮಾಡಿದಂಗ, ಇಸಿ ಮಾಡುವುದು ಹೇಗೆ ಅಂತಾ ಒಂದು ವಿಡಿಯೋ ಮಾಡಿ ಎಲ್ಲರಿಗೆ ತೋರಿಸಿ. ಸಾಂಕ್ರಾಮಿಕ ರೋಗ ಬರಲ್ಲ, ಊರು ಸ್ವಚ್ಛ ಇರತೈತಿ ಅನ್ರಿ. ಇಷ್ಟಾದ್ರೂ ಒಲ್ಲೆ ಅಂದ್ರ ಇನ್ನೊಮ್ಮೆ ಆ ವಿಡಿಯೋ ನೋಡಬೇಕು ಅನ್ರಿ. ಅವಾಗ ದಾರಿಗೆ ಬರ್ತಾರ ನೋಡ್ರಿ’ ಎಂದ.
‘ವೆರಿ ಗುಡ್ ಐಡಿಯಾ ಪಿಡಿಒ. ನಾಳನೆ ಶುರು ಮಾಡೋಣ. ನೀನೆ ವಿಡಿಯೋ ಮಾಡುವಂತಿ’ ಎಂದವನೇ ಏನೋ ಸಾಧಿಸಲು ರೆಡಿಯಾಗಿಬಿಟ್ಟ.
ಪಿಡಿಒ ಮೊಬೈಲಿನಿಂದ ಹಾಡೊಂದು ಕೇಳಿ ಬಂತು:
ಸ್ವಚ್ಛ ಭಾರತ, ಅಚ್ಛಾ ಭಾರತ, ಸಚ್ಛಾ ಭಾರತ
ಪಂಚಾಯ್ತಿ ಖಜಾನೆ ಸೋರುತ ಸೋರುತ
ನಾವೆಲ್ಲ ಹೀರುತ ಹೀರುತ
ಅಭಿವೃದ್ಧಿಯ ಚಂಡಮಾರುತ ಚಂಡಮಾರುತ…

Leave a Reply