ಭಾರತ ಮತ್ತು ಅಮೆರಿಕ ನಡುವಣ ಸಂಬಂಧ ಬಲಪಡಿಸಲು ಮೋದಿ-ಟ್ರಂಪ್ ದೃಢಸಂಕಲ್ಪ

ರಕ್ಷಣೆ, ವ್ಯಾಪಾರ, ಬಂಡವಾಳ ಹೂಡಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತ ಮತ್ತು ಅಮೆರಿಕ ನಡುವಣ ಸಂಬಂಧವನ್ನು ಮತ್ತಷ್ಟು ಬಲಗೊಳಿಸಿ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೃಢಸಂಕಲ್ಪ ಮಾಡಿದ್ದಾರೆ.  ಹಾಗೆಯೇ ಭಯೋತ್ಪಾದನೆ ನಿಗ್ರಹ, ಮಾದಕವಸ್ತು ಕಳ್ಳಸಾಗಣಿಕೆ ತಡೆಗಟ್ಟುವಿಕೆಗಾಗಿ ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಳ್ಳಲು ಭಾರತ ಮತ್ತು ಅಮೆರಿಕ ಅಧಿಕೃತ ನಿಶ್ಚಯ ಮಾಡಿವೆ.

ದೆಹಲಿಯ ಹೈದರಾಬಾದ್ ಹೌಸ್‍ನಲ್ಲಿ ವಿವಿಧ ದ್ವಿಪಕ್ಷೀಯ ವಿಷಯಗಳ ಕುರಿತು ಮೋದಿ ಮತ್ತು ಟ್ರಂಪ್ ಮಹತ್ವದ ಮಾತುಕತೆ ನಡೆಸಿದ ನಂತರ ಉಭಯ ನಾಯಕರು ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.  ರಕ್ಷಣೆ, ಸುರಕ್ಷತೆ, ವ್ಯಾಪಾರ, ಬಂಡವಾಳ ಹೂಡಿಕೆ, ಇಂಧನ ಸೇರಿದಂತೆ ಅನೇಕ ಪ್ರಮುಖ ವಿಷಯಗಳ ಬಗ್ಗೆ ನಾವಿಬ್ಬರ ಗಹನ ಚರ್ಚೆ ನಡೆಸಿದೆವು. ನಮ್ಮ ಮಾತುಕತೆ ವೇಳೆ ಮೂರು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ವಿವಿಧ ವಿಷಯಗಳ ಬಗ್ಗೆ ನಾವು ಪ್ರಮುಖವಾಗಿ ಚರ್ಚೆ ನಡೆಸಿದ್ದೇವೆ. ಭಾರತ ಮತ್ತು ಅಮೆರಿಕ ಸಂಬಂಧವನ್ನು ಮತ್ತಷ್ಟು ಸದೃಢಗೊಳಿಸಿ ಅದನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಬಗ್ಗೆ ಸಂಕಲ್ಪ ಮಾಡಿರುವುದಾಗಿ ಪ್ರಕಟಿಸಿದರು.  ಭಯೋತ್ಪಾದನೆ ನಿಗ್ರಹ, ಧಾರ್ಮಿಕ ಸ್ವಾತಂತ್ರ್ಯ ವಿಷಯ, ಮಾದಕ ವಸ್ತು ಕಳ್ಳಸಾಗಾಣೆ, ಅಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆ, ತಾಲಿಬಾನ್ ಉಗ್ರರೊಂದಿಗೆ ಶಾಂತಿ ಮಾತುಕತೆ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಸಮಗ್ರವಾಗಿ ಚರ್ಚಿಸಿದ್ದಾಗಿ ತಿಳಿಸಿದರು.

ನಾನು ಮತ್ತು ಟ್ರಂಪ್ ಎಂಟು ತಿಂಗಳಲ್ಲೇ ಐದು ಬಾರಿ ಭೇಟಿ ಮಾಡಿದ್ದೇವೆ. ನನ್ನ ಆಹ್ವಾನಕ್ಕೆ ಸ್ಪಂದಿಸಿ ಭಾರತಕ್ಕೆ ಭೇಟಿ ನೀಡಿದ ಅಮೆರಿಕ ಅಧ್ಯಕ್ಷರು ಮತ್ತು ಅವರ ನೇತೃತ್ವದ ನಿಯೋಗಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಮೋದಿ ಹೇಳಿದರು.  ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಟ್ ಟ್ರಂಪ್, ಭಾರತ- ಅಮೆರಿಕ ನಡುವಣ ಸಂಬಂಧ ಮತ್ತಷ್ಟು ಮಹತ್ವದ ಘಟ್ಟ ತಲುಪಿದೆ ಎಂದರು.

ರಕ್ಷಣಾ ಕ್ಷೇತ್ರದಲ್ಲಿ ಮೂರು ಶತಕೋಟಿ ಡಾಲರ್ ವೆಚ್ಚದ ವ್ಯವಹಾರಕ್ಕಾಗಿ ಉಭಯ ದೇಶಗಳ ನಡುವೆ ಮಹತ್ವದ ಒಡಂಬಡಿಕೆಯಾಗಿದೆ. ಭಾರತಕ್ಕೆ 24 ಎಂಎಚ್-ಸಿಹ್ಯಾಕ್ ಮತ್ತು ಅಪಾಚೆ ಯುದ್ದ ಹೆಲಿಕಾಪ್ಟರ್‍ಗಳನ್ನು ನೀಡಲು ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಅಮೆರಿಕದ ಲಾಕ್‍ಹೀಡ್ ಮಾರ್ಟಿನ್ ಗ್ರೂಪ್ ಭಾರತಕ್ಕಾಗಿ ಈ ಅತ್ಯಾಧುನಿಕ ಹೆಲಿಕಾಪ್ಟರ್‍ಗಳನ್ನು ಒದಗಿಸಲಿದೆ ಎಂದು ಟ್ರಂಪ್ ಘೋಷಿಸಿದರು.

ಅದೇ ರೀತಿ ಈಗ ಉಭಯ ದೇಶಗಳಲ್ಲಿರುವ ರಕ್ಷಣಾ ಸಹಕಾರ ಸಂಬಂಧಗಳನ್ನು ಮತ್ತಷ್ಟು ವಿತರಿಸಲು ನಾವಿಬ್ಬರು ತೀರ್ಮಾನಿಸಿದ್ದೇವೆ. ರಕ್ಷಣಾ ಕ್ಷೇತ್ರಕ್ಕೆ ಉಭಯ ರಾಷ್ಟ್ರಗಳ ನಡುವೆ ಹೆಚ್ಚಿನ ಸಹಯೋಗಕ್ಕೆ ಆವು ಬದ್ದರಾಗಿದ್ದೇವೆ ಎಂದು ತಿಳಿಸಿದರು . ನನ್ನ ಮತ್ತು ಮೋದಿ ಅವರ ಆಪ್ತ ಗೆಳೆತನದಿಂದಾಗಿ ಉಭಯ ದೇಶಗಳ ನಡುವೆ ಸಂಬಂಧ ಇಂದು ಮತ್ತಷ್ಟು ಇಚ್ಛ್ರಾಯ ಸ್ಥಿತಿ ತಲುಪಿದೆ ಎಂದರು.

ಪಿಡುಗಾಗಿ ಪರಿಣಮಿಸಿರುವ ಭಯೋತ್ಪಾದನೆ ನಿಗ್ರಹಕ್ಕೆ ಜಂಟಿ ಹೋರಾಟ ನಡೆಸಲು ಭಾರತ ಮತ್ತು ಅಮೆರಿಕ ದೃಢ ನಿಶ್ಚಯ ಮಾಡಿದ್ದು, ಇಸ್ಲಾಮಿಕ್ ಉಗ್ರರ ವಿರುದ್ಧ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಟ್ರಂಪ್ ಹೇಳಿದರು. ಒಂದು ದೊಡ್ಡ ವ್ಯಾಪಾರ ಒಪ್ಪಂದಕ್ಕೆ ನಾವಿಬ್ಬರು ನಿರ್ಧರಿಸಿದ್ದೇವೆ. ಮುಕ್ತ ಮತ್ತು ಪಾರದರ್ಶಕ ವಾಣಿಜ್ಯ ಸಂಬಂಧಕ್ಕೆ ಇದು ನಾಂದಿಯಾಗಲಿದೆ ಎಂದು ತಿಳಿಸಿದರು.

ಹೆಚ್ಚುತ್ತಿರುವ ಮಾದಕವಸ್ತುಗಳ ಕಳ್ಳಸಾಗಣೆ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ನಮ್ಮ ಮಾತುಕತೆ ವೇಳೆ ನಿರ್ಧರಿಸಲಾಗಿದೆ. ಅದೇ ರೀತಿ ಆರೋಗ್ಯ ರಕ್ಷಣೆ, ರಕ್ಷಣೆ ಮತ್ತು ಸುರಕ್ಷತೆಯ ಉಪಕರಣಗಳ ವಿನಿಮಯ ಮತ್ತಿತರ ವಿಷಯಗಳ ಬಗ್ಗೆಯೂ ನಾವು ಚರ್ಚಿಸಿ ತೀರ್ಮಾನ ಕೈಗೊಂಡಿರುವುದಾಗಿ ಹೇಳಿದರು.  ನನ್ನ ಭಾರತ ಭೇಟಿ ಅತ್ಯಂತ ಅವಿಸ್ಮರಣೀಯವಾದದ್ದು. ನನಗೆ ಭಾರೀ ಜನಸ್ತೋಮದ ಸ್ವಾಗತ ನೀಡಿರುವ ದೇಶದ ಜನತೆಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ಮೇಲಿನ ಪ್ರಿತಿಯಿಂದ ಆತ್ಮೀಯತೆಯಿಂದ ಭಾರತಕ್ಕೆ ಆಗಮಿಸಿ ಸತ್ಕರಿಸಿದ ಮೋದಿ ಅವರಿಗೆ ನಾನು ಅಭಾರಿಯಾಗಿದ್ದೇನೆ ಎಂದರು.