ಶ್ರೀಮತಿ ಗಾಂಧಿ, ಇಟಲಿ ಮಹಿಳೆಯ ಪುತ್ರ ಎಂದಿದ್ದಾನೆ ಆಗಸ್ಟಾ ಡೀಲ್ ಮಧ್ಯವರ್ತಿ ಮೈಕೆಲ್: ಇಡಿ

3,600 ಕೋಟಿ ರೂ. ಮೌಲ್ಯದ ಆಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣದ ಆರೋಪಿ, ಮಧ್ಯವರ್ತಿ ಕ್ರಿಶ್ಟಿಯನ್ ಮೈಕೆಲ್ ವಿಚಾರಣೆ ವೇಳೆ ಶ್ರೀಮತಿ ಗಾಂಧಿ ಹಾಗೂ ಇಟಲಿ ಮಹಿಳೆಯ ಮಗ ಎಂದು ಹೇಳಿಕೆ ನೀಡಿದ್ದಾನೆ ಎಂದು ಜಾರಿ ನಿರ್ದೇಶನಾಲಯ ದೆಹಲಿಯಲ್ಲಿ ಕೋರ್ಟ್‌ಗೆ ಹೇಳಿದೆ.
ಮೈಕೆಲ್ ಯಾವ ಸಂದರ್ಭದಲ್ಲಿ ಈ ಹೆಸರು ಬಾಯಿಬಿಟ್ಟಿದ್ದಾನೆ ಎಂಬ ಬಗ್ಗೆ ತನಿಖಾ ಸಂಸ್ಥೆ ಹೇಳಿಲ್ಲವಾದರೂ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿರುವುದಂತೂ ಸ್ಪಷ್ಟವಾಗಿದೆ.
ಈ ತಿಂಗಳ ಆರಂಭದಲ್ಲಿ ದುಬೈ ಗಡೀಪಾರು ನಡೆಸುತ್ತಿದ್ದಂತೆ, ವಿವಿಐಪಿ ಕಾಪ್ಟರ್ ಖರೀದಿ ಪ್ರಕರಣ ಸಂಬಂಧ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಕ್ರಿಶ್ಟಿಯಾನ್ ಮೈಕೆಲ್‌ನನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಏಳು ದಿನಗಳ ಕಾಲ ತನ್ನ ವಶದಲ್ಲಿರಿಸಿಕೊಂಡು ವಿಚಾರಣೆ ನಡೆಸಿದ ಬಳಿಕ ಇಡಿ ದೆಹಲಿಯ ಪಾಟಿಯಾಲ ಹೌಸ್ ಕೋರ್ಟ್‌ ಮುಂದೆ ಶನಿವಾರ ಹಾಜರುಪಡಿಸಿತ್ತು.
“ಮೈಕೆಲ್ ಹಾಗೂ ಇತರೆ ವ್ಯಕ್ತಿಗಳ ನಡುವಿನ ಸಂಭಾಷಣೆ ವೇಳೆ ಹೇಳಲಾದ ಆರ್ ಎಂದು ಸೂಚಿಸಲಾದ ದೊಡ್ಡ ವ್ಯಕ್ತಿ ಯಾರು ಎಂಬುದನ್ನು ನಾವು ಭೇದಿಸಬೇಕಿದೆ” ಎಂದು ಜಾರಿ ನಿರ್ದೇಶನಾಲಯ ಕೋರ್ಟ್‌ಗೆ ಹೇಳಿಕೊಂಡಿದೆ.
ಮೈಕೆಲ್ ತನ್ನ ವಕೀಲರಿಗೆ ಕೈ ಕುಲುಕುವ ವೇಳೆ ರಹಸ್ಯವಾಗಿ ಚೀಟಿಯೊಂದನ್ನು ಹಸ್ತಾಂತರಿಸಿದ್ದಾನೆ. ಆ ಕಾಗದವನ್ನು ಪರೀಕ್ಷಿಸಿದಾಗ, ಅದರಲ್ಲಿ ಸೋನಿಯಾ ಗಾಂಧಿಗೆ ಸಂಬಂಧಿಸಿದ ಪ್ರಶ್ನೆಗಳು ಇದ್ದವು. ಮೈಕೆಲ್‌ಗೆ ಆ ವಕೀಲನ ಜತೆಗಿನ ಸಂಪರ್ಕಕ್ಕೆ ಅವಕಾಶ ನೀಡಬಾರದು ಎಂದು ಇಡಿ ಮನವಿ ಮಾಡಿತು. ಇದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್, ಆ ವಕೀಲ ದೀರ್ಘ ಕಾಲ ಮಾತನಾಡುವಂತಿಲ್ಲ.. ಮುಂಜಾನೆ ಮತ್ತು ಸಂಜೆ 15 ನಿಮಿಷಗಳ ಕಾಲ ಮಾತ್ರ ಭೇಟಿಯಾಗಬಹುದು. ಆದರೆ ಮೂರು ಅಡಿಗಳ ಅಂತರ ಕಾಪಾಡಬೇಕು ಎಂದು ಸೂಚಿಸಿತು.
ಕೊನೆಗೆ ಇಡಿ 8 ದಿನಗಳ ಕಾಲ ಮೈಕೆಲ್‌ನ ಕಸ್ಟಡಿ ವಿಸ್ತರಿಸುವಂತೆ ಕೇಳಿಕೊಂಡಿತು. ಆದರೆ ಕೋರ್ಟ್ 7 ದಿನಗಳ ಕಾಲ ಇಡಿ ಕಸ್ಟಡಿಯನ್ನು ವಿಸ್ತರಿಸಿತು.

Leave a Reply