Election 2019 : ಪ್ರಧಾನಿ ಮೋದಿಯ ಚುನಾವಣಾ ಪ್ರಚಾರದ ಕವರೇಜ್‌ಗಾಗಿ ನಮೋ ಟಿವಿ

ಚುನಾವಣಾ ಪ್ರಚಾರಕ್ಕೆ ಮುಖ್ಯವಾಹಿನಿ ಮಾಧ್ಯಮಗಳನ್ನಷ್ಟೇ ನಂಬಿ ಕೂರದ ಬಿಜೆಪಿ ಸಾಮಾಜಿಕ ಮಾಧ್ಯಮಗಳ ಬಳಕೆಯಲ್ಲಿ ಎತ್ತಿದ ಕೈ. ಇದೀಗ ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಪ್ರಚಾರದ ಕವರೇಜ್‌ಗಾಗಿ ನಮೋ ಟಿವಿ ಎಂಬ ಪ್ರತ್ಯೇಕ ಚಾನೆಲ್ ಒಂದನ್ನು ಆರಂಭಿಸಿದೆ.

ಈ ಚಾನೆಲ್ ಮೋದಿಯ ರಾಲಿಗಳ ನೇರ ಪ್ರಸಾರ ನೀಡಲಿದೆ. ಜತೆಗೆ ಅವರ ವಿವಿಧ ಭಾಷಣಗಳು, ಹಳೆಯ ಭಾಷಣಗಳ ಮರುಪ್ರಸಾರವನ್ನೂ ನಡೆಸಲಿದೆ.

ಸಾರ್ವತ್ರಿಕ ಚುನಾವಣೆಯ ಮೊದಲ ಹಂತದ ಮತದಾನ ಆರಂಭಕ್ಕೆ ಇನ್ನೇನು ಹದಿನೈದು ದಿನಗಳಿದೆ ಎನ್ನುವಷ್ಟರಲ್ಲಿ ಬಿಜೆಪಿ ಈ ನಮೋ ಟಿವಿಯ ಆರಂಭವನ್ನು ಘೋಷಿಸಿದೆ. ಸಿಟಿ, ಏರ್‌ಟೆಲ್, ಡಿಶ್ ಟಿವಿ, ಟಾಟಾ ಸ್ಕೈ, ಡಿ2ಎಚ್‌ನಂತಹ ಎಲ್ಲಾ ಪ್ರಮುಖ ಡಿಟಿಎಚ್ ವೇದಿಕೆಗಳಲ್ಲಿ ಈ ಚಾನೆಲ್ ಲಭ್ಯ ಇರಲಿದೆ. ಇದು ರಿಯಲ್ ಟೈಮ್ ಕವರ್ ನೀಡಲಿದೆ ಎಂದು ಬಿಜೆಪಿ ಹೇಳಿಕೊಂಡಿದೆ.

ಪ್ರಧಾನಿ ಮೋದಿ ಕೂಡಾ ನಮೋ ಟಿವಿಯಲ್ಲಿ ತಮ್ಮ ಕಾರ್ಯಕ್ರಮ ನೋಡುವಂತೆ ಜನರನ್ನು ಆಹ್ವಾನಿಸಿದ್ದು, ಭಾನುವಾರ ಸಂಜೆ 5 ಗಂಟೆಗೆ ದೇಶದ ವಿವಿಧ ಭಾಗಗಳ ಚೌಕಿದಾರ್‌ಗಳ ಜತೆ ಸಂವಾದ ಕಾರ್ಯಕ್ರಮ ನಡೆಸಲಿದ್ದೇನೆ. ಈ ಕಾರ್ಯಕ್ರಮ ತಪ್ಪಿಸಬೇಡಿ. ನಮೋ ಆಪ್ ಅಥವಾ ನಮೋ ಟಿವಿಯಲ್ಲಿ ನೋಡಿ ಎಂದು ಹೇಳಿದ್ದಾರೆ.

ಈ ಚಾನೆಲ್‌ನ ಲೋಗೋದಲ್ಲಿ ಮೋದಿಯ ಭಾವಚಿತ್ರವಿದೆ. ರಾಲಿಗಳು, ಭಾಷಣಗಳ ಲೈವ್ ಕವರೇಜ್ ಬರುತ್ತಿದ್ದರೆ, ಕೆಳಗಡೆ ಸ್ಕ್ರಾಲ್‌ನಲ್ಲಿ ಭಾಷಣದ ಹೈಲೈಟ್ ಮುದ್ರಿತವಾಗಿ ಬರಲಿದೆ. ಮೋದಿ ಸರ್ಕಾರದ ಅವಧಿಯ ವಿವಿಧ ನೀತಿಗಳು ಹಾಗೂ ಯೋಜನೆಗಳ ಜಾಹೀರಾತುಗಳೂ ಈ ಚಾನೆಲ್‌ನಲ್ಲಿ ಪ್ರಸಾರವಾಗಲಿದೆ.

Leave a Reply