ಏನೇ ಹಾರಾಡಿದರೂ ರಾಜ್ಯದ ಒಂದಿಂಚು ಭೂಮಿಯನ್ನೂ ಕಿತ್ತುಕೊಳ್ಳೋಕ್ಕಾಗಲ್ಲ -ಸಿಎಂ

ಬೆಳಗಾವಿ ವಿಚಾರವಾಗಿ ಮತ್ತೆ ಕ್ಯಾತೆ ತೆಗೆದಿರುವ ಶಿವಸೇನೆಯ ಕ್ರಮವನ್ನು ಖಂಡಿಸಿರುವ ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ಏನೇ ಹಾರಾಡಿದರೂ ರಾಜ್ಯದ ಒಂದಿಂಚು ಭೂಮಿಯನ್ನೂ ಕಿತ್ತುಕೊಳ್ಳೋಕ್ಕಾಗಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಗಡಿ ವಿಚಾರದಲ್ಲಿ ಶಿವಸೇನೆ ಅನಗತ್ಯ ಗೊಂದಲ ಸೃಷ್ಟಿಸುವ ಕೆಲಸ ಮಾಡಿದೆ. ಇದಕ್ಕೆ ನಾವು ಸರಿಯಾದ ಉತ್ತರ ಕೊಡುತ್ತೇವೆ. ಗಡಿ ಭಾಗದ ಕನ್ನಡಿಗರು ಆತಂಕಕ್ಕೆ ಒಳಗಾಗಬಾರದು. ಶಾಂತಿ ಕಾಪಾಡಬೇಕು. ಗಡಿ ವಿಚಾರದಲ್ಲಿ ಮಹಾಜನ್ ವರದಿಯೇ ಅಂತಿಮ ಎಂದು ಬಿಎಸ್ವೈ ಹೇಳಿದ್ದಾರೆ.

ಬೆಳಗಾವಿ ಗಡಿ ವಿಚಾರದಲ್ಲಿ ಯಾರೋ ಏನೋ ಹೇಳಿದ್ದಾರೆ ಎಂದು ಆತಂಕಪಡುವ ಅಗತ್ಯವಿಲ್ಲ. ನಮ್ಮ ಒಂದಿಂಚು ಭೂಮಿ ಸಹ ಯಾರೂ ಪಡೆಯಲು ಸಾಧ್ಯವಿಲ್ಲ. ಜನ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ಸಿಎಂ ಮನವಿ ಮಾಡಿದ್ದಾರೆ.

ಬೆಳಗಾವಿಯಲ್ಲಿ ಯಾರೂ ಸಹ ನಾಡದ್ರೋಹದ ಕೆಲಸ ಮಾಡಬೇಡಿ. ಗಡಿ ವಿಚಾರದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ, ಯಾರಿಗೂ ಅವಕಾಶ ನೀಡಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಕನ್ನಡ ಬಾವುಟ ಸುಟ್ಟು ಕನ್ನಡಿಗರನ್ನು ಕೆಣಕುವ ಪ್ಯತ್ನವನ್ನು ಶಿವಸೇಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪ ಈ ಎಚ್ಚರಿಕೆ ನೀಡಿದ್ದಾರೆ.