ಟ್ಯಾಕ್ಸಿ ಶೇರಿಂಗ್ ಗೆ ನಿಷೇಧ ಹೇರಿದ ಸಾರಿಗೆ ಇಲಾಖೆ!

ಸಿಟಿ ಟ್ಯಾಕ್ಸಿಗಳ ಶೇರಿಂಗ್ ಸೇವೆ ಮೇಲೆ ಸಾರಿಗೆ ಇಲಾಖೆ ಇಂದು ನಿಷೇಧ ಹೇರಿದೆ. ಓಲಾ ಮತ್ತು ಊಬರ್ ಸಂಸ್ಥೆಗಳು ಕಳೆದ ನಾಲ್ಕೈದು ತಿಂಗಳಿಂದ ನಡೆಸುತ್ತಿದ್ದ ಆಪ್ ಆಧಾರಿತ ಟ್ಯಾಕ್ಸಿ ಶೇರಿಂಗ್ ವ್ಯವಸ್ಥೆಯು ಸಾರಿಗೆ ಇಲಾಖೆಯ ನಿಯಮಕ್ಕೆ ವಿರುದ್ಧವಾಗಿದೆ ಎಂದು ಹೇಳಿದ ಸಾರಿಗೆ ಇಲಾಖೆ ಆಯುಕ್ತ ಎಂ.ಕೆ.ಅಯ್ಯಪ್ಪ ಈ ಸೇವೆಗೆ ನಿಷೇಧ ಹೇರಿದ್ದಾಗಿ ತಿಳಿಸಿದ್ದಾರೆ. 

ಸಾರಿಗೆ ಇಲಾಖೆ ಪ್ರಧಾನ ಕಚೇರಿಯಲ್ಲಿ ಇಂದು ಓಲಾ ಮತ್ತು ಊಬರ್  ಕಂಪನಿಯ ಮಾಲೀಕರ ಜತೆ ಚರ್ಚೆ ನಡೆಸಿದ ಅಯ್ಯಪ್ಪ ಅವರು ಈ ನಿರ್ಧಾರ ತಿಳಿಸಿದ್ದಾರೆ. ಟ್ಯಾಕ್ಸಿ ಶೇರಿಂಗ್ ಸೇವೆಯನ್ನು ಬೆಂಗಳೂರಿನ ವಿವಿಧ ಸ್ಥಳಗಳಿಂದ ಪಿಕ್ಅಪ್, ಡ್ರಾಪ್ ಮಾಡುತ್ತಿದ್ದ ಸಂಸ್ಥೆಗಳು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಶೇರಿಂಗ್ ಸೌಲಭ್ಯದ ಅಡಿ ಸೇವೆ ನೀಡುತ್ತಿದ್ದವು. ಮಾರ್ಗದ ಮಧ್ಯೆ ಯಾವುದೇ ವ್ಯಕ್ತಿ ಒಂದು ಕಾರನ್ನು ಇನ್ನೊಬ್ಬರೊಂದಿಗೆ ಶೇರ್ ಮಾಡಿಕೊಳ್ಳುವ ಅವಕಾಶ ಇದರಲ್ಲಿ ಇತ್ತು. ಇದರಿಂದ ಒಂದೇ ಮಾರ್ಗದಲ್ಲಿ ಪ್ರಯಾಣಿಸುವ ಇಬ್ಬರು ಹಾಗೂ ಅದಕ್ಕಿಂತ ಹೆಚ್ಚು ಮಂದಿ ತಮ್ಮ ಹಣ ಉಳಿತಾಯ ಮಾಡಿಕೊಳ್ಳಬಹುದಿತ್ತು. ಸಾಕಷ್ಟು ಕಡಿಮೆ ಅವಧಿಯಲ್ಲಿ ಈ ಸೇವೆ ಅತ್ಯಂತ ಜನಪ್ರಿಯವಾಗಿತ್ತು.

ಆದರೆ ಮಹಿಳೆಯರ ಸುರಕ್ಷೆಗೆ ತೊಂದರೆ ಆಗುತ್ತದೆ. ಯಾವುದೇ ಭದ್ರತೆ ಇರುವುದಿಲ್ಲ. ಅಲ್ಲದೇ ಸಾರಿಗೆ ಇಲಾಖೆ ಮೋಟಾರು ವಾಹನ ಕಾಯ್ದೆಯಲ್ಲಿ ಇದಕ್ಕೆ ಅವಕಾಶ ಇಲ್ಲ. ಶೇರಿಂಗ್ ವ್ಯವಸ್ಥೆಯಿಂದ ಮಹಿಳೆಯರ ಸುರಕ್ಷೆಗೆ ಧಕ್ಕೆ ಉಂಟಾಗುತ್ತದೆ ಎಂದು ಅಯ್ಯಪ್ಪ ಅಭಿಪ್ರಾಯ ಪಟ್ಟಿದ್ದಾರೆ.

ಯಾವ ಕಾನೂನಲ್ಲೂ ಅವಕಾಶವಿಲ್ಲ: ಕೇಂದ್ರ ಸರ್ಕಾರದ ಮೋಟಾರು ವಾಹನ ನೀತಿ, ಕಾಯ್ದೆ, ಕಾನೂನು, ರಾಜ್ಯ ಸರ್ಕಾರದ ಕಾನೂನು, ನಿಯಮ, ಕಾಯ್ದೆಯಲ್ಲಾಗಲಿ, ಟ್ಯಾಕ್ಸಿ ನಿಯಮಗಳಲ್ಲಾಗಲಿ “ಟ್ಯಾಕ್ಸಿ ಶೇರಿಂಗ್’ ಅಥವಾ ಕಮರ್ಷಿಯಲ್ ಕಾರ್ ಪುಲ್ಲಿಂಗ್ಗೆ ಅವಕಾಶವಿಲ್ಲ. ನಮ್ಮ ದೇಶದ, ರಾಜ್ಯದ ಯಾವುದೇ ಸಾರಿಗೆ ಇಲಾಖೆ ಕಾನೂನಲ್ಲಿ ಇಲ್ಲದ ಅವಕಾಶದ ಬಳಕೆ ಕಳೆದ ನಾಲ್ಕು ತಿಂಗಳಿಂದ ಆಗುತ್ತಿತ್ತು. ಸಾರಿಗೆ ಇಲಾಖೆ ಅಧಿಕಾರಿಗಳ ಗಮನಕ್ಕೆ ಇದು ಬಂದೂ ಬರದಂತೆ ಇತ್ತು. ಆದರೆ ಇದೀಗ ಈ ಸೇವೆ ಇಲಾಖೆ ನಿಷೇಧ ಹೇರಲು ಮುಂದಾಗಿದೆ ಎಂದು ಮಾಹಿತಿ ಪಡೆದಿದ್ದೇನೆ. ಕಾನೂನಿನಲ್ಲಿ ಇದಕ್ಕೆ ಅವಕಾಶ ಸಿಕ್ಕಾಗ ಮಾತ್ರ ಇಂತ ಸೇವೆ ನೀಡಬಹುದು. ಇಲ್ಲವಾದರೆ ಇದು ಕಾನೂನು ರಿತ್ಯಾ ಅಪರಾಧವಾಗುತ್ತದೆ ಎಂದು ಬೆಂಗಳೂರು ಪ್ರವಾಸಿ ವಾಹನ ಮಾಲೀಕರ ಸಂಘದ ಅಧ್ಯಕ್ಷ ಕೆ. ರಾಧಾಕೃಷ್ಣ ಹೊಳ್ಳ ತಿಳಿಸಿದ್ದಾರೆ.

ಕಾನೂನಿನಲ್ಲಿ ಇದಕ್ಕೆ ಅವಕಾಶ ಸಿಗುವವರೆಗೂ ಈ ಮಾದರಿಯ ವ್ಯಾಪಾರ ನಡೆಸುವುದು ಸರಿಯಲ್ಲ. ಕಾರ್ ಪುಲ್ಲಿಂಗ್, ಟ್ಯಾಕ್ಸಿ ಶೇರಿಂಗ್ ಮಾಡಬಾರದು ಅಂತ ವಾಣಿಜ್ಯ ಬಳಕೆ ವಾಹನಗಳಿಗೆ ನಿಯಮ ಇದೆ. ಒಂದು ಗ್ರಾಹಕರಿಗೆ ಒಂದೇ ವಾಹನ ಅಂತ ಕಟ್ಟಳೆ ಇದೆ. ಕಂಡ ಕಂಡಲ್ಲಿ ಪಿಕ್ ಅಪ್ ಮಾಡುವುದಕ್ಕೆ ಅವಕಾಶ ಇಲ್ಲ. ಒಂದೇ ಕಂಪನಿಯಲ್ಲಿ ಕೆಲಸ ಮಾಡುವವರು, ತಮ್ಮದೇ ಸಹೊದ್ಯೋಗಿಗಳನ್ನು ಶೇರಿಂಗ್ ರೂಪದಲ್ಲಿ ಕರೆದುಕೊಂಡು ಹೋಗಬಹುದು. ಅದು ಗ್ರಾಹಕರ ಮರ್ಜಿ. ಟ್ಯಾಕ್ಸಿ ವಾಹನ ಚಾಲಕರಾಗಲಿ, ಮಾಲೀಕರಾಗಲಿ ಈ ಕಾರ್ಯ ಮಾಡಲು ಅವಕಾಶ ಇಲ್ಲ. ವ್ಯಾಪಾರದ ಉದ್ದೇಶ ಅಥವಾ ದೃಷ್ಟಿಯಿಂದ ಶೇರಿಂಗ್ ಅಥವಾ ಪುಲ್ಲಿಂಗ್ ಮಾಡುವಂತಿಲ್ಲ ಎಂದು ನಿಯಮ ಇದೆ ಎನ್ನುತ್ತಾರೆ.

Comments are closed.