ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ನಮ್ಮ ಗುರಿ: ಡಿಕೆಶಿ

ನಾನು ಪಕ್ಷದ ಅಧ್ಯಕ್ಷನಾಗಿರುವುದರ ಬಗ್ಗೆ ಪಕ್ಷದ ನಾಯಕರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಎಂ.ಬಿ.ಪಾಟೀಲ್‌ ಸೇರಿದಂತೆ ಎಲ್ಲಾ ನಾಯಕರೂ ನಾನು ಅಧ್ಯಕ್ಷನಾಗಬೇಕೆಂದು ಸೂಚಿಸಿದ್ದಾರೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಡಿ ಕೆ ಶಿವಕುಮಾರ್‌ ತಿಳಿಸಿದರು.

ಎಂ.ಬಿ.ಪಾಟೀಲ್‌ ನಿವಾಸದಲ್ಲಿ ಮಾತನಾಡಿದ ಅವರು, ದಿನೇಶ್‌ ಗುಂಡೂರಾವ್‌ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದ ಬಳಿಕ ರಾಜ್ಯಕ್ಕೆ ಹೈಕಮಾಂಡ್‌ನಿಂದ ವೀಕ್ಷಕರು ಬಂದಿದ್ದರು. ಆ ಸಂದರ್ಭದಲ್ಲಿ ನನಗೇ ಗೊತ್ತಿಲ್ಲದೆ, ಎಂ.ಬಿ.ಪಾಟೀಲ್‌ ಸೇರಿದಂತೆ ಶೇ.99ರಷ್ಟು ನಾಯಕರು ನಾನು ಕೆಪಿಸಿಸಿ ಅಧ್ಯಕ್ಷ ಆಗಬೇಕು ಎಂದು ಸೂಚಿಸಿದ್ದಾರೆ ಎಂದರು ಹೇಳಿದರು.

ಪಕ್ಷದಲ್ಲಿ ಯಾವುದೇ ಸ್ಪರ್ಧೆ, ಭಿನ್ನಾಭಿಪ್ರಾಯವಿಲ್ಲ. ಯಾರೋ ಮಾಹಿತಿ ನೀಡಿದ್ದಾರೆ ಎಂದು ಮಾಧ್ಯಮ ಸ್ನೇಹಿತರು ಏನೇನೂ ಸೃಷ್ಠಿ ಮಾಡಿದ್ದೀರಿ, ಪಾಪ. ಈ ಊಹಾಪೋಹಾಗಳಿಗೆ ಸೂಕ್ತ ಕಾಲದಲ್ಲಿ ತೆರೆ ಎಳೆಯಬೇಕು ಎಂಬುದು ನಮ್ಮ ಉದ್ದೇಶ. ಈ ಕಾರಣಕ್ಕಾಗಿಯೇ ಎಂ.ಬಿ.ಪಾಟೀಲರ ಜೊತೆಯಾಗಿ ಮಾತನಾಡುತ್ತಿದ್ದೇನೆ ಎಂದರು.

ಕಾಂಗ್ರೆಸ್‌ನಲ್ಲಿ ಯಾವುದೇ ವ್ಯಕ್ತಿಗತ ವಿಚಾರವಿಲ್ಲ. ಸಿದ್ದಾಂತದ ಆಧಾರದ ಮೇಲೆ ನಾವು ಪಕ್ಷದಲ್ಲಿ ದುಡಿಯುತ್ತಿದ್ದೇವೆ. ದಿನೇಶ್‌ ಗುಂಡೂರಾವ್‌ ಅವರ ತಂದೆ ಇದ್ದಾಗ ನಾನು ಶಾಸಕನಾಗಿದ್ದೆ. ಆ ನಂತರ ಅವರು ಶಾಸಕರಾಗಿ ದೊಡ್ಡ ಜವಾಬ್ದಾರಿ ಅಲಂಕರಿಸಿದ್ದಾರೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ರಾಜ್ಯದಲ್ಲಿ ಪಕ್ಷವನ್ನು ಗಟ್ಟಿಗೊಳಿಸುತ್ತೇವೆ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತಂದು, ಜನರ ಭಾವನೆಗೆ ತಕ್ಕಂತೆ ರಾಜ್ಯವನ್ನು ಅಭಿವೃದ್ಧಿಯತ್ತ ನಡೆಸುವುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದ್ದಾರೆ.