ಕೊರೊನ ಬಿಕ್ಕಟ್ಟು ಮತ್ತು ಭೀತಿಗೆ ಪೊಲೀಸರ ಲಾಠಿ ಏಟು ಪರಿಹಾರವೇ?

ಕೊರೊನ ವೈರಾಣು ಭೀತಿ ದೇಶವನ್ನೇ ಬೆಚ್ಚಿ ಬೀಳಿಸಿದೆ. ಇದಕ್ಕೆ ತಡೆ ಹಾಕಲು ಕೇಂದ್ರ ಸರ್ಕಾರ ಹಲವು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಈ ಕ್ರಮಗಳು ಬಹುತೇಕ ಎಲ್ಲ ದೇಶವಾಸಿಗಳಿಗೆ ಹೊಸವು ಮತ್ತು ಧುತ್ತೆಂದು ಮುಂದೆ ಬಂದು ನಿಂತಿವೆ. ಇಂತಹ ವಿಪತ್ತಿನ ಸಮಯದಲ್ಲಿ ಒಬ್ಬರನ್ನೊಬ್ಬರು ದೂರುವ ಅಥವಾ ಭೀತಿಯನ್ನು ಹೆಚ್ಚಿಸುವ ಕ್ರಮ ಸರಿಯಾದುದ್ದಲ್ಲ. ಲೋಪದೋಷಗಳನ್ನು ಮನ್ನಿಸುವ ಆದರೆ ಅವುಗಳನ್ನು ತಿದ್ದಿಕೊಳ್ಳುವುದಕ್ಕೆ ಸಲಹೆ ನೀಡುವ ಮತ್ತು ಅವುಗಳನ್ನು ಮುಕ್ತವಾಗಿ ಸ್ವೀಕರಿಸುವ ಮನಸಸ್ಥಿತಿ ಮುಖ್ಯ. ಜನತೆಗಾಗಲಿ ಪ್ರಭುತ್ವಕ್ಕಾಗಲಿ. ಆದರೆ ದೇಶದಾದ್ಯಂತ ಹಲವು ಕಡೆಗಳಲ್ಲಿ ಪೊಲೀಸರು ಸಾಮಾನ್ಯ ನಾಗರಿಕರ ಮೇಲೆ ಮನಬಂದಂತೆ ಲಾಠಿ ಬೀಸುತ್ತಿರುವುದು ಈ ಬಿಕ್ಕಟ್ಟಿಗೆ ಯಾವುದೇ ಪರಿಹಾರವಾಗದೆ, ಉರಿವ ಬೆಂಕಿಗೆ ತುಪ್ಪ ಸುರಿದಂತೆ ಆಗುತ್ತಿದೆ.

ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ ದೇಶದೆಲ್ಲೆಡೆ ನಿರ್ಬಂಧಗಳನ್ನು ಹೇರಿರುವ ಅಗತ್ಯವನ್ನು ಎಲ್ಲ ನಾಗರಿಕರು ಅರ್ಥ ಮಾಡಿಕೊಳ್ಳಬೇಕಿದೆ. ಇದನ್ನು ಸಮಾಧಾನವಾಗಿ ಅರ್ಥ ಮಾಡಿಸುವ ಕರ್ತವ್ಯ ಎಲ್ಲ ಅಧಿಕಾರಿಗಳದ್ದು ಕೂಡ. ಇದನ್ನು ಬೇಜವಾಬ್ದಾರಿಯಿಂದ ಮುರಿಯುವವರ ಮೇಲೆ ಪೊಲೀಸರು ಶಿಸ್ತು ಕ್ರಮ ತೆಗೆದುಕೊಳ್ಳಬೇಕೆ ಹೊರತು, ನಿಜವಾಗಿಯೂ ಯಾವುದೋ ತುರ್ತಿನ ಮೇಲೆಯೂ ಅಥವಾ ಪರಿಸ್ಥಿತಿಯ ಅರಿವಿಲ್ಲದೆ ಅಥವಾ ಅದರ ಮಾಹಿತಿ ಲಭ್ಯವಾಗದೆ ಬೀದಿಗೆ ಇಳಿಯುವ ಮುಗ್ಧರನ್ನು ಲಾಠಿಯಿಂದ ಚಚ್ಚುವುದರಿಂದ ಕೊರೊನ ವೈರಸ್ ನಿರ್ಮೂಲನೆಗೆ ಯಾವುದೇ ಸಹಾಯ ಆಗುವುದಿಲ್ಲ.

ನೆನ್ನೆಯಿಂದ ಟ್ವಿಟ್ಟರ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ, ತಮ್ಮ ಅಗತ್ಯ ತುರ್ತುಗಳಿಗೆ ಸಣ್ಣ ಅವಧಿಗೆ ಆಚೆ ಬಂದವರ ಮೇಲೆ ಅಥವಾ ಆನ್ಲೈನ್ ಆರ್ಡರ್ ಗಳನನ್ನು ಪೂರೈಸಲು ಓಡಾಡುತ್ತಿದ್ದ ವ್ಯಕ್ತಿಗಳ ಮೇಲೆ ಪೊಲೀಸರು ಅಧಿಕಾರ ದುರುಪಯೋಗ ಮಾಡಿರುವ ದೂರುಗಳು ವಿಡಿಯೋಗಳು ಯತೇಚ್ಚವಾಗಿ ಕಾಣಿಸಿಕೊಳ್ಳುತ್ತಿವೆ. ಕಾನೂನು ಸುವ್ಯವಸ್ಥೆ ಕಾಪಾಡುವ ಮತ್ತು ಕೊರೊನ ಸಂಬಂಧಿತ ಹಲವು ಕೆಲಸಗಳಲ್ಲಿ ನಿರತವಾಗಿರುವ ಪೋಲಿಸ್ ಇಲಾಖೆಗೆ ಈ ದೂರುಗಳ ಬಗ್ಗೆ ಮತ್ತೆ ತನಿಖೆ ನಡೆಸುವ ಹೆಚ್ಚುವರಿ ಕೆಲಸ ಅಗತ್ಯವಿರಲಿಲ್ಲವೇನೋ. ಅಲ್ಲದೆ ಕಾನೂನು ಸುವ್ಯವಸ್ಥೆ ಕಾಪಾಡುವ ಪೋಲಿಸ್ ಇಲಾಖೆ ಮತ್ತು ನಾಗರಿಕರ ನಡುವಿನ ನಂಬಿಕೆಯ ಪ್ರಶ್ನೆ ಕೂಡ ಇದಾಗಿದೆ. ಜಗತ್ತಿನ ಯಾವುದೇ ವಿಪತ್ತಿನ ವಿರುದ್ಧ ಹೋರಾಡಲು ಪರಸ್ಪರ ನಂಬಿಕೆ ಸರಹಾರ ಅತಿ ಮುಖ್ಯ. ಅದು ದೇಶ ದೇಶಗಳ ನಡುವೆ ಆಗಲಿ, ರಾಜ್ಯಗಳ ನಡುವೆ ಆಗಲಿ ಅಥವಾ ನಾಗರಿಕರು ಮತ್ತು ಸರ್ಕಾರಗಳ ನಡುವೆ ಆಗಲಿ.

ಈ ಸಮಯದಲ್ಲಿ ಸರ್ಕಾರಗಳು ಕೂಡ ಗೊಂದಲಕ್ಕೆ ಒಳಗಾಗಿವೆ. ಹಲವು ಬಾರಿ ತಾವೇ ಹಾಕಿದ ನಿಯಮಗಳನ್ನು ದಿನದಿನಕ್ಕೆ ಮತ್ತೆ ಮತ್ತೆ ಬದಲಾಯಿಸಿವೆ. ಇದು ಜನರಿಗೂ ಗೊಂದಲವನ್ನು ಮೂಡಿಸಿರಲಿಕ್ಕೆ ಸಾಕು. ಈಗ ಹೊರಗೆ ಓಡಾಡಲು ಪೋಲಿಸರಿಂದ ಪಾಸ್ ಪಡೆಯುವ ಅಗತ್ಯವಿದೆ ಎಂದು ಘೋಷಿಸಲಾಗಿದೆ. ಈ ಎಲ್ಲಾ ಕ್ರಮಗಳನ್ನು ಬಹುತೇಕ ನಾಗರಿಕರು ಒಪ್ಪಿ ಸ್ವೀಕರಿಸಿದ್ದಾರೆ,

ವೈದ್ಯರು, ತುರ್ತು ಸೇವೆಗಳಲ್ಲಿ ನಿರತರಾಗಿರುವವರು, ಪತ್ರಕರ್ತರು, ನಾಗರಿಕರ ಆಹಾರ ತರಕಾರಿ ಪೂರೈಕೆಗಾಗಿ ಕೆಲಸ ಮಾಡುತ್ತಿರುವ ಸಿಬ್ಬಂದಿ, ಸರಿಯಾದ ಮಾಹಿತಿ ಇಲ್ಲದೆ ಇರುವ ಎಷ್ಟೋ ಲಕ್ಷಾಂತರ ವ್ಯಕ್ತಿಗಳು ಕೆಲವೊಮ್ಮೆ ಬೀದಿಗೆ ಇಳಿಯುವ ಅಗತ್ಯ ಇದ್ದೆ ಇರುತ್ತದೆ. ಅಂತಹ ಸಮಯದಲ್ಲಿ ಅಧಿಕಾರಿಗಳು ಸಂಯಮದಿಂದ ವರ್ತಿಸಿ ಕುಂದುಕೊರತೆಗಳನ್ನು ವಿಚಾರಿಸಿ, ಸರಿಯಾದ ಮಾಹಿತಿಯನ್ನು ಒದಗಿಸಿ ವರ್ತಿಸಬೇಕಾಗುತ್ತದೆ.  ನಿಜವಾಗಿ ನಿಯಮ ಮುರಿದ್ದರಷ್ಟೇ ಕಾನೂನಿನಲ್ಲಿ ಅವಕಾಶ ಇದ್ದ ಕ್ರಮ ತೆಗೆದುಕೊಳ್ಳಬೇಕು.