ಮೊದಲನೇ ದಿನವೇ ಬಾಕ್ಸ್ ಆಫೀಸ್ ಚಿಂದಿ ಮಾಡಿದ ‘ಪಾಪ್ ಕಾರ್ನ್ ಮಂಕಿ ಟೈಗರ್’

ಒಂದು ಬಾರಿ ನೋಡಿದರೆ ಕಥೆ ಅರ್ಥ ಆಗೋ ಸಿನಿಮಾಗಳ ನಡುವೆ ವಿಭಿನ್ನವಾದ ಸಿನಿಮಾವೊಂದನ್ನ ನಿರ್ದೇಶಕ ಸೂರಿ ಪರಿಚಯಿಸಿದ್ದಾರೆ.

ಅದುವೇ ಇತ್ತೀಚೆಗೆ ತೆರೆ ಕಂಡ ‘ಪಾಪ್ ಕಾರ್ನ್ ಮಂಕಿ ಟೈಗರ್’. ಹೌದು… ಈ ಸಿನಿಮಾ ಈಗಾಗಲೇ ಪ್ರೇಕ್ಷಕರ ಮನದಂಗಳ ತಲುಪಿದ್ದು, ಭಾರೀ ಸದ್ದು ಮಾಡುತ್ತಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಸಿನಿಮಾವನ್ನ ಇನ್ನೊಂದು ಬಾರಿ ನೋಡಿದ್ರೆ ಮಾತ್ರ ಅರ್ಥ ಆಗೋದು ಅಂತಿದ್ದಾರೆ. ಹೇಳಿ ಕೇಳಿ ದುನಿಯಾ ಸೂರಿ ‘ರಾ’ ಮೇಕಿಂಗ್ ನಲ್ಲಿ ಹೆಸರುವಾಸಿ. ಹೀಗಾಗಿ, ‘ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರದಲ್ಲೂ ಕೆಲ ಸನ್ನಿವೇಶಗಳನ್ನು ಸೂರಿ ಹಸಿ ಹಸಿಯಾಗಿಯೇ ತೋರಿಸಿದ್ದಾರೆ.

ಕಳೆದ ಶುಕ್ರವಾರವಷ್ಟೇ ತೆರೆ ಕಂಡ ಸಿನಿಮಾದ ಕಲೆಕ್ಷನ್ ಎಷ್ಟು ಗೊತ್ತಾ..? ‘ಡಾಲಿ’ ಧನಂಜಯ ಅಭಿನಯದ ದುನಿಯಾ ಸೂರಿ ನಿರ್ದೇಶನದ ‘ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರ ಮೊದಲನೇ ದಿನ ಬಾಕ್ಸ್ ಆಫೀಸ್ ನಲ್ಲಿ 2.53 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಹಾಗಂತ ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.

ಕರ್ನಾಟಕ ರಾಜ್ಯಾದ್ಯಂತ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ ಬಂದ ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾ ಹಲವೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ನಿನ್ನೆ ಶನಿವಾರ ಕೂಡ ‘ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿದ್ಯಂತೆ.

ಒಟ್ಟಿನಲ್ಲಿ ರೌಡಿಸಂ ಜೊತೆಗೆ ಸೆಂಟಿಮೆಂಟ್ ಕೂಡ ಮಿಕ್ಸ್ ಆಗಿರುವ ಈ ಚಿತ್ರದಲ್ಲಿ ‘ನಟ ರಾಕ್ಷಸ’ ಧನಂಜಯ ಅವರನ್ನ ಜನ ವಿಭಿನ್ನ ಅಭಿನಯದಲ್ಲಿ ೊಪ್ಪಿಕೊಂಡಿದ್ದು ಮಾತ್ರ ಸುಳ್ಳಲ್ಲ.