7 ರಿಂದ 9ನೇ ತರಗತಿ ಪರೀಕ್ಷೆಗಳ ಮುಂದೂಡಿಕೆ: ಸುರೇಶ್ ಕುಮಾರ್

ಕೊರೋನಾ ವೈರಾಣು ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟುವುದಕ್ಕೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿರುವ ರಾಜ್ಯ ಸರ್ಕಾರ ಹಲವು ಕ್ರಮಗಳನ್ನು ಜಾರಿ ಮಾಡಿದೆ. ಇಂದು 7ರಿಂದ 9ನೇ ತರಗತಿಯವರೆಗಿನ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಘೋಷಿಸಲಾಗಿದೆ.

ರಾಜ್ಯ ಸರ್ಕಾರವು ಒಂದು ವಾರ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳು, ಸಭೆ, ಸಮಾರಂಭಗಳು, ಮಾಲ್, ಥಿಯೇಟರ್ ಗಳಿಗೆ ಬಂದ್ ಮಾಡಿ ಆದೇಶ ಹೊರಡಿಸಿತ್ತು. ಅದಕ್ಕೂ ಮುನ್ನವೇ ಶಿಕ್ಷಣ ಇಲಾಖೆ 1ರಿಂದ 6ನೇ ತರಗತಿಯವರೆಗಿನ ವಾರ್ಷಿಕ ಪರೀಕ್ಷೆಯನ್ನು ರದ್ದುಗೊಳಿಸಿತ್ತು.

ಅಲ್ಲದೆ. 7 ರಿಂದ 9ನೇ ತರಗತಿಯ ಮಕ್ಕಳಿಗೆ ಪರೀಕ್ಷಾ ಓದಿನ ರಜೆ ಘೋಷಿಸಿ, ಪರೀಕ್ಷೆಗಷ್ಟೇ ಹಾಜರಾಗಬೇಕೆಂದು ತಿಳಿಸಿತ್ತು. ಇದಾದ ನಂತರ ಈ ಮಕ್ಕಳ ಪೋಷಕರು 7 ರಿಂದ 9ನೇ ತರಗತಿ ಮಕ್ಕಳೇನು ಮಕ್ಕಳಲ್ಲವೇ ಅಂದು ಸರ್ಕಾರದ ನಡೆಯನ್ನು ವಿರೋಧಿಸಿದ್ದರು.

ಪೋಷಕರ ತೀವ್ರ ವಿರೋಧದ ನಂತರ, 7ರಿಂದ 9ನೇ ತರಗತಿಯವರೆಗಿನ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಯನ್ನು ಮಾರ್ಚ್ 31ರವರೆಗೆ ಮುಂದೂಡಿ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ಕೊರೋನಾ ವೈರಸ್‌ ಹಿನ್ನಲೆಯಲ್ಲಿ ತೆಲಂಗಾಣ ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಮಾರ್ಚ್‌ 31ರ ವರೆಗೆ ಮುಚ್ಚುವಂತೆ ತೆಲಂಗಾಣ ರಾಜ್ಯ ಸರ್ಕಾರವೂ ಆದೇಶ ನೀಡಿದೆ.