ಸಚಿವ ಪಿಯೂಷ್ ಗೆ ಪ್ರಿಯಾಂಕ್ ಟಾಂಗ್ – ನಿಮ್ಮ ಕಣ್ಣಿಗೆ ಕಲಬುರ್ಗಿ ಕಾಣಿಸ್ತಿದೆಯೇ ಎಂದು ಪ್ರಶ್ನೆ…

ಎನ್.ಆರ್.ಸಿ. ವಿವಾದ ತಾರಕಕ್ಕೇರಿರುವಂತೆಯ ಮುಖಂಡರ ನಡುವಿನ ವಾಕ್ಸಮರವೂ ಜೋರಾಗಿದೆ. ಮೊನ್ನೆ ನಡೆದ ಪೌರತ್ವ ಪರ ಬೃಹತ್ ರಾಲಿಯನ್ನು ಪ್ರಸ್ತಾಪಿಸಿ, ಸುನಾನಿ ರೀತಿಯಲ್ಲಿ ಜನ ಹರಿದು ಬಂದಿದ್ದರೆಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಟ್ವೀಟ್ ಮಾಡಿದ್ದರು. ಕಲಬುರ್ಗಿ ನಿಮ್ಮ ಕಣ್ಣಿಗೆ ಈಗ ಕಾಣಿಸ್ತೇ ಎಂದಿರುವ ಪ್ರಿಯಾಂಕ್ ಖರ್ಗೆ, ಕಲಬುರ್ಗಿ ರೈಲ್ವೆ ವಿಭಾಗೀಯ ಕೇಂದ್ರದ ಕಥೆಯೇನು ಎಂದು ಪ್ರಶ್ನಿಸಿದ್ದಾರೆ.

ಕೇಂದ್ರ ಸಚಿವ ಪಿಯೂಷ್ ಗೋಯಲ್ ಗೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಮೂಲಕ ಟಾಂಗ್ ಕೊಟ್ಟಿದ್ದಾರೆ. ಇತ್ತೀಚೆಗೆ ಕಲಬುರ್ಗಿಯಲ್ಲಿ ಪೌರತ್ವ ಕಾಯ್ದೆ ಪರ ರ್ಯಾಲಿ ನಡೆದಿತ್ತು. ರಾಲಿಯ ಬಗ್ಗೆ ಟ್ವಿಟ್ ಮಾಡಿದ್ದ ಕೇಂದ್ರ ಸಚಿವ ಪಿಯೂಷ್ ಗೋಯಲ್, ಕಲಬುರ್ಗಿಯಲ್ಲಿ ಪೌರತ್ವ ಕಾಯ್ದೆ ಪರ ಮೆರವಣಿಗೆಗೆ ಜನ ಸುನಾಮಿ ರೀತಿಯಲ್ಲಿ ಜನ ಹರಿದು ಬಂದಿದ್ದರು ಎಂದು ಟ್ವೀಟ್ ಮೂಲಕ ಸ್ವಾಗತಿಸಿದ್ದರು.

ಇದಕ್ಕೆ ಮಾಜಿ ಸಚಿವ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಪಿಯೂಷ್ ಗೋಯಲ್ ಅವರೇ ಈಗ ಕಲಬುರ್ಗಿ ನಿಮ್ಮ ಗಮನ ಸೆಳೆಯಿತೇ ಎಂದು ಪ್ರಶ್ನಿಸಿದ್ದಾರೆ. ಕಲಬುರ್ಗಿಗೆ ಮಂಜೂರಾದ ರೈಲ್ವೆ ವಲಯ ಹಾಗೂ ನಿಮ್ಜ್ ಯೋಜನೆಯ ಸದ್ಯದ ಸ್ಥಿತಿ ಸ್ವಲ್ಪ ಹೇಳುತ್ತಿರಾ..? ಎಂದು ಪ್ರಶ್ನಿಸಿದ್ದಾರೆ. ಕೇಂದ್ರ ಸಚಿವರಿಗೆ ಟ್ವೀಟ್ ಮೂಲಕ ಟಾಂಗ್ ಕೊಟ್ಟಿದ್ದಾರೆ.

ಕಲಬುರ್ಗಿ ಸಂಸದನಿಗೂ ಟ್ವೀಟ್ ಮೂಲಕ ಟಾಂಗ್ ಕೊಟ್ಟ ಪ್ರಿಯಾಂಕ್ ಖರ್ಗೆ, ಈ ರೈಲ್ವೆ ವಿಭಾಗೀಯ ಕೇಂದ್ರ ಮತ್ತು ನಿಮ್ಜ್ ಯೋಜನೆಗಳ ಬಗ್ಗೆ ಸಂಸದ ಉಮೇಶ ಜಾಧವ್ ಅವರಿಗೂ ಮಾಹಿತಿ ಇಲ್ಲ ಎಂದು ಕಾಣುತ್ತದೆ ಎಂದು ಕುಟುಕಿದ್ದಾರೆ.

ಮೋದಿ ವೈಫಲ್ಯದಿಂದ ರಾಜ್ಯದ ಅನುದಾನಕ್ಕೆ ಕತ್ತರಿ – ಪ್ರಿಯಾಂಕ್
ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಆರ್ಥಿಕ ನೀತಿ ಮತ್ತು ದುರಾಡಳಿತದ ಪರಿಣಾಮ ಕರ್ನಾಟಕಕ್ಕೆ ಬರಬೇಕಿದ್ದ ಅನುದಾನಕ್ಕೆ ಕತ್ತರಿ ಬಿದ್ದಿದೆ ಎಂದು ಪ್ರಿಯಾಂಕ್ ಖರ್ಗೆ ಟೀಟ್ ಮೂಲಕ ಕಿಡಿಕಾರಿದ್ದಾರೆ. ವಸತಿ ಯೋಜನೆಗಳಿಗೆ 1 ಸಾವಿರ ಕೋಟಿ, ಮಹಿಳಾ ಕಲ್ಯಾಣ ಯೋಜನೆಗಳಿಗೆ 1,786 ಕೋಟಿ, ಶೈಕ್ಷಣಿಕ ಯೋಜನೆಗಳಿಗೆ 267 ಕೋಟಿ, ಯುವಜನ ಸಬಲೀಕರಣ ಯೋಜನೆಗಳಿಗೆ 474 ಕೋಟಿ ರೂಪಾಯಿ ಹಣವನ್ನು ನೀಡದೆ ಕೇಂದ್ರ ಸರ್ಕಾರ ಸತಾಯಿಸುತ್ತಿದೆ ಎಂದು ಕೇಂದ್ರದ ಮೇಲೆ ಹರಿಹಾಯ್ದಿದ್ದಾರೆ.

ರಾಜ್ಯದ ಜಿ.ಎಸ್.ಟಿ. ಪಾಲಿನ ತೆರಿಗೆಯಲ್ಲಿಯೂ ಕೇಂದ್ರ ಸರ್ಕಾರ ಸುಮಾರು 7000 ಕೋಟಿ ರೂಪಾಯಿ ನೀಡದೇ ಸತಾಯಿಸುತ್ತಿದೆ. ಹೀಗೆಯೇ ಮುಂದುವರೆದರೆ ಕರ್ನಾಟಕದ ಪರಿಸ್ಥಿತಿ ಏನಾಗಲಿದೆ. ಸುಭಿಕ್ಷೆಯ ನಾಡೆನಿಸಿಕೊಂಡ ನಮ್ಮ ದೇಶ ಬಿಜೆಪಿ ಆಡಳಿತದಲ್ಲಿ ಅಧೋಗತಿಗೆ ತಲುಪಿರೋದು ಆತಂಕಕಾರಿ ಎಂದು ಪ್ರಿಯಾಂಕ್ ಖರ್ಗೆ ಇದೇ ಸಂದರ್ಭದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.