ಭಾರತ ಉಳಿಸಿ ಮಹಾ ರ್‍ಯಾಲಿ : ಮೋದಿ ವಿರುದ್ಧ ಪ್ರಿಯಾಂಕ ಗಾಂಧಿ ಟೀಕಾಪ್ರಹಾರ..

ನವದೆಹಲಿಯಲ್ಲಿ ನಡೆಯುತ್ತಿರುವ ಭಾರತ ಉಳಿಸಿ ಮಹಾ ರ್‍ಯಾಲಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ಪಕ್ಷದ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

ಬಿಜೆಪಿಯ ಪ್ರಸಿದ್ಧ ಘೋಷಣೆ ‘ಮೋದಿ ಹೈ, ತೋ ಮಮ್ಕಿನ್ ಹೈ’ ಹೇಳಿಕೆ ಉಲ್ಲೇಖಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ಇಂದು ಕೆಜಿ ಈರುಳ್ಳಿ ಆಗಿದೆ, 45 ವರ್ಷಗಳಲ್ಲಿ ಅತಿ ಹೆಚ್ಚು ನಿರುದ್ಯೋಗ ದರ ದಾಖಲಾಗಿದೆ, 15,000 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ನವರತ್ನ ಕಂಪನಿಗಳು ಭಿಕಾರಿಯಾಗಿವೆ, 4 ಕೋಟಿ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ, ರೈಲ್ವೇ ಇಲಾಖೆ ನಷ್ಟಹೊಂದಿದೆ, ಹಲವು ಸಾರ್ವಜನಿಕ ಕಂಪನಿಗಳು ಮಾರಾಟವಾಗಿವೆ, ಸಂವಿಧಾನವನ್ನು ಉಲ್ಲಂಘಿಸುವ ಸಿಎಎ ಕಾನೂನು ಬಂದಿದೆ, ಅಂದರೆ ಮೋದಿ ಇದ್ದಲ್ಲಿ ಇದೆಲ್ಲವೂ ಸಾಧ್ಯ ಎಂದು ವ್ಯಂಗ್ಯವಾಡಿದ್ದಾರೆ.

ಇಂತಹ ಸಂದರ್ಭದಲ್ಲಿ ಜನರು ಈಗ ಧ್ವನಿ ಎತ್ತದಿದ್ದರೆ ಅಂಬೇಡ್ಕರ್‌ರವರು ಕೊಟ್ಟ ಕ್ರಾಂತಿ ಸಂವಿಧಾನವು ನಾಶವಾಗಲಿದೆ ಎಂದ ಅವರು, ಸರ್ಕಾರದ ವಿರುದ್ಧ ಎಲ್ಲರೂ ಒಗ್ಗಟ್ಟಿನಿಂದ ನಿಲ್ಲುವಂತೆ ಮನವಿ ಮಾಡಿದರು.

ಅಹಿಂಸೆ, ವೈಚಾರಿಕತೆ ಮತ್ತು ಪ್ರೇಮದಿಂದ ಹುಟ್ಟಿದ ದೇಶ ನಮ್ಮದು. ಸ್ವಾಂತತ್ರ್ಯ ಚಳವಳಿಯ ಕೊಡುಗೆ ನಮ್ಮ ದೇಶವಾಗಿದೆ. ಈ ದೇಶ ಎಲ್ಲರಿಗೂ ಸೇರಿದೆ. ಆದರೆ ಆಳುವ ಸರ್ಕಾರದ ಜನವಿರೋಧಿ ಸಿದ್ಧಾಂತದಿಂದಾಗಿ ನಮ್ಮ ದೇಶಕ್ಕೆ ಅಪಾಯ ಬಂದೊದಗಿದೆ ಎಂದು ಅವರು ಹೇಳಿದರು.

ಜಿಡಿಪಿ ಪಾತಾಳಕ್ಕೆ ಕುಸಿದಿದೆ, ನಿರುದ್ಯೋಗ ಹೆಚ್ಚುತ್ತಿದೆ, ವಾಹನಗಳ, ದಿನಬಳಕೆಯ ವಸ್ತುಗಳ ಮಾರಾಟ ನಿಂತಿದೆ. ಸಣ್ಣ ವ್ಯಾಪಾರಿಗಳು ಜಿಎಸ್‌ಟಿಯಿಂದ ನೊಂದಿದ್ದಾರೆ. ನಮ್ಮ ಕಣ್ಣೆದುರೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ವಿಭಜನಕಾರಿ ಆಡಳಿತದಿಂದ ದೇಶ ಹಾಳಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪಿ.ಚಿದಂಬರಂ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೂಡ ಇದ್ದಾರೆ.

Leave a Reply

Your email address will not be published.