ಪಾಕ್ ಪರ ಘೋಷಣೆ ಪ್ರಕರಣ : ಸಹಪಾಠಿಗಳ ಬಂಧನದಿಂದ ಹುಬ್ಬಳ್ಳಿ ತೊರೆದ ವಿದ್ಯಾರ್ಥಿಗಳು

ಹುಬ್ಬಳ್ಳಿಯಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳು ಪಾಕಿಸ್ತಾನದ ಪರ ಘೋಷಣೆ ಕೂಗಿದ ತಾಲಿಬ್, ಆಮಿರ್, ಬಸೀತ್‌ ಎನ್ನುವ ಮೂವರು ವಿದ್ಯಾರ್ಥಿಗಳು ಕಂಬಿ ಎಣಿಸುತ್ತಿದ್ದರೆ, ಇತ್ತ ಸಹಪಾಠಿಗಳ‌ ಕೆಂಗಣ್ಣಿಗೆ ಗುರಿಯಾಗುವ ಭಯದಿಂದ ಇನ್ನಿಬ್ಬರು ಕಾಶ್ಮೀರಿ ವಿದ್ಯಾರ್ಥಿಗಳು ಕಾಲೇಜು ತೊರೆದಿದ್ದಾರೆ.

ಕೇಂದ್ರ ಸರ್ಕಾರದ ಕೋಟಾದಲ್ಲಿ ಉಚಿತವಾಗಿ ಕೆಎಲ್‌ಇ ಕಾಲೇಜಿನಲ್ಲಿ ಅಡ್ಮಿಷನ್ ಪಡೆದಿರುವ ಒಟ್ಟು ಏಳು ಕಾಶ್ಮೀರಿ ವಿದ್ಯಾರ್ಥಿಗಳ ಪೈಕಿ ದೇಶದ್ರೋಹದ ಕೇಸ್‌ನಲ್ಲಿ ಮೂವರು ಜೈಲು ಸೇರಿದರೆ, ಇನ್ನಿಬ್ಬರು ವಿದ್ಯಾರ್ಥಿಗಳು ಹಬ್ಬಳ್ಳಿ ತೊರೆದಿದ್ದಾರೆ. ಇವರು ಬೆಂಗಳೂರಿನಲ್ಲಿರುವ ಸಂಬಂಧಿಕರ ಮನೆಗೆ ತೆರಳಿರುವ ಶಂಕೆ ಇದೆ.

ಇನ್ನೂ ಹಾಸ್ಟೇಲ್ ರೂಮ್‌ನಲ್ಲಿ ಪಾಕಿಸ್ತಾನದ ಪರ ಕಿತಾಪತಿ ಮಾಡುತ್ತಿದ್ದ ಆರೋಪಿಗಳ ನಡುವಳಿಕೆಯಿಂದ ಬೇಸತ್ತು‌ ಕನ್ನಡಿಗ ಸಹಪಾಠಿ ರೂಮ್ ಬದಲಾಯಿಸಿದ್ದನು ಎನ್ನುವ ವಿಚಾರ ವಿಚಾರಣೆ ಬಳಿಕ ಬೆಳಕಿಗೆ ಬಂದಿದೆ. ತಾಲಿಬ್, ಆಮಿರ್, ಬಸೀತ್ ಯಾವತ್ತೂ ಪಾಕಿಸ್ತಾನದ ಪರವಾಗಿ ಮಾತಾಡುತ್ತಿದ್ದರು.ಈ ಕುರಿತು ಸಹಪಾಠಿಗಳ‌ ಜೊತೆಗೂ ವಾಗ್ವಾದ ನಡೆಸುತ್ತಿದ್ದರು. ಮೂವರು ಕಾಶ್ಮೀರಿಗಳಿಗೆ ಪಾಠ ಕಲಿಸಲು ವಿಡಿಯೋ ಸಂಗ್ರಹಿಸಿದ ಸಹಪಾಠಿ ಕನ್ನಡಿಗ ಶೇರ್ ಮಾಡಿದ್ದ. ವಿಡಿಯೋ ವೈರಲ್ ಆಗುತ್ತಿದ್ದಂತೆ ಆರೋಪಿಗಳ ಬಂಧನವಾಗಿದೆ.

ಘಟನೆಯ ಕುರಿತು ಕನ್ನಡಿಗ ವಿದ್ಯಾರ್ಥಿಯಿಂದ ಮಾಹಿತಿ ಪಡೆದ ಪೊಲೀಸರಿಗೆ  ಒಂದು ತಿಂಗಳ ಹಿಂದೆ ವಿಡಿಯೋ‌ ಮಾಡಿದ್ದಾಗಿ ಆರೋಪಿಗಳು ಹೇಳಿಕೊಂಡಿದ್ದಾರೆ. ಪರಿಶೀಲನೆಗೆ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಮೊಬೈಲ್ ಕಳುಹಿಸಲಾಗಿದೆ.