ವೈವಿಧ್ಯಮಯ ಭಾರತದಲ್ಲಿ ಏಕತೆ ರೂಪಿಸಿದ ರಾಮಾಯಣ

ಅಕ್ಟೋಬರ್ 27ರ ಮಂಗಳವಾರ ಮಹರ್ಷಿ ವಾಲ್ಮೀಕಿ ಜಯಂತಿ. ಕರ್ನಾಟಕ ಸರ್ಕಾರ ಸರ್ಕಾರಿ ವೆಚ್ಚದಲ್ಲಿ ವಾಲ್ಮೀಕಿ ಜಯಂತಿಯನ್ನು ಆಚರಣೆ ಮಾಡುತ್ತದೆ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಆಯಾ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ವಾಲ್ಮೀಕಿ ಜಯಂತಿ ಆಚರಿಸಲಾಗುತ್ತದೆ. ವಾಲ್ಮೀಕಿ ಜಯಂತಿ ಹಿನ್ನೆಲೆಯಲ್ಲಿ ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಯ ಪಿ.ಕೌಸಲ್ಯ ಅವರು ಸಂಗ್ರಹಣೆ ಮಾಡಿರುವ ಲೇಖನ ಇಲ್ಲಿದೆ…..

ಕೂಜಂತಂ ರಾಮ ರಾಮೇತಿ ಮಧುರ ಮಧುರಾಕ್ಷರಮ್
ಅರುಹ್ಯ ಕರವಿತಾಶಾಖಾಂ ವಂದೇ ವಾಲ್ಮೀಕಿ ಕೋಕಿಲಂ
ಈ ಸುಂದರವಾದ ರೂಪಕ ಅಲಂಕಾರದಿಂದ ಕೂಡಿದ ವಾಲ್ಮೀಕಿ ಮುನಿಯನ್ನು ವಂದಿಸುವ, ನಮಸ್ಕರಿಸುವ ಶ್ಲೋಕವು ಬುಧಕೌಶಿಕ ಮುನಿಯು ರಚಿಸಿರುವ ಶ್ರೀರಾಮ ರಕ್ಷಾಸ್ತೋತ್ರದಲ್ಲಿದೆ. (ಕಾವ್ಯವೆಂಬ ಮರದ ಮೇಲೆ ಕುಳಿತು, ರಾಮ ರಾಮಾ ಎಂದು ಕೂಜಂತಮ್ ಹಕ್ಕಿಯ ಇಂಪಾದ ಧ್ವನಿ ಹಾಡುತ್ತಿರುವ ವಾಲ್ಮೀಕಿ ಎಂಬ ಕೋಗಿಲೆಗೆ ವಂದೇ ನಮಸ್ಕಾರ)

ವಾಲ್ಮೀಕಿಯ ಜೀವನದ ಕುರಿತು ಬಹಳಷ್ಟು ದಂತಕಥೆಗಳಿದ್ದು, ಅದರ ಒಂದು ಉಪಕಥೆಯ ಪ್ರಕಾರ ವಾಲ್ಮೀಕಿ ಋಷಿಯಾಗುವ ಮೊದಲು ರತ್ನಾಕರನೆಂಬ ಡಕಾಯಿತನಾಗಿದ್ದನು. ಕಾಡಿನ ಮಾರ್ಗ ಮಧ್ಯದಲ್ಲಿ ಸಂಚರಿಸುವ ಪ್ರಯಾಣಿಕರನ್ನು ದೋಚಿ ಜೀವನ ಮಾಡುತ್ತಿದ್ದನು. ನಾರದ ಋಷಿಗಳು ಒಮ್ಮೆ ಕಾಡಿನಲ್ಲಿ ಹೋಗುತ್ತಿದ್ದಾಗ ರತ್ನನು ಅವರನ್ನು ದರೋಡೆ ಮಾಡಲೆತ್ನಿಸುತ್ತಾನೆ.

ಆಗ ನಾರದನನಿಗೂ ರತ್ನನಿಗೂ ಸಂವಾದವಾಗಿ ನಿನ್ನ ಈ ಪಾಪದಲ್ಲಿ ನಿಮ್ಮ ಕುಟುಂಬದವರು ಭಾಗಿಯಾಗುವರೇ? ಕೇಳು ಹೋಗು ಎಂದಾಗ ರತ್ನನ ತಂದೆ, ತಾಯಿ ಕಡೆಗೆ ಹೆಂಡತಿಯೂ ಸಹ ರತ್ನನ ಪಾಪದಲ್ಲಿ ನಾವ್ಯಾರು ಭಾಗಿಗಳಾಗುವುದಿಲ್ಲ ಎಂದು ತಿಳಿಸುತ್ತಾರೆ. ರತ್ನನು ನಾರದನಲ್ಲಿಗೆ ಬಂದು ತಿಳಿಸಿ ದುಖಿಃತನಾಗುತ್ತಾನೆ. ನಾರದನು ಮಾಡಿದ ಉಪದೇಶದಿಂದ ರತ್ನನಿಗೆ ಜ್ಞಾನೋದಯವಾಗುತ್ತದೆ.

Featured2

ವಾಲ್ಮೀಕಿ ಮಹರ್ಷಿಗಳು ಪ್ರಚೇತಮುನಿಯ ಮಗ ಹೀಗಾಗಿ ಅವರಿಗೆ ಪ್ರಾಚೇತಸ ಹೆಸರಿದ್ದು, ಪರಮಾತ್ಮನನ್ನು ಕುರಿತು ಬಹಳ ವರ್ಷಗಳ ಕಾಲ ತಪಸ್ಸನ್ನು ಮಾಡುತ್ತಿದ್ದಾಗ ಅವರ ಸುತ್ತ ಹುತ್ತ ಬೆಳೆದಿತ್ತು. ಸಂಸ್ಕೃತದಲ್ಲಿ ವಲ್ಮೀಕ ಎಂದರೆ ಹುತ್ತ. ಈ ಹುತ್ತವನ್ನು ಭೇದಿಸಿಕೊಂಡು ಹೊರಗೆ ಬಂದಿದ್ದರಿಂದ ವಾಲ್ಮೀಕಿ ಎಂಬ ಹೆಸರು ಬಂದಿದೆ ಎಂಬುದು ಪ್ರಚಲಿತ.

ತಮಸಾ ನದಿ ತೀರದಲ್ಲಿ ಸಂತೋಷವಾಗಿ ಹಾರಾಡುತ್ತಿದ್ದ ಕ್ರೌಂಚ ಪಕ್ಷಿ ಜೋಡಿಯನ್ನು ಬೇಡನೊಬ್ಬನು ಬಂದು ಬಾಣ ಹೂಡಿ ಗಂಡುಹಕ್ಕಿಯನ್ನು ಕೊಂದುಬಿಡುತ್ತಾನೆ. ಅದರ ಸಂಗಾತಿ ಹೆಣ್ಣು ಹಕ್ಕಿಯು ಸಂಕಟದಿಂದ ಕೂಗಲಾರಂಭಿಸುತ್ತದೆ. ಈ ಹೃದಯವಿದ್ರಾವಕ ಸನ್ನಿವೇಶವನ್ನು ನೋಡಿ, ಕರುಣೆ, ದುಖಃ, ಕೋಪದಿಂದ ಮಹರ್ಷಿಗಳು ಬೇಡನನ್ನು ಶಪಿಸುವಾಗ ಶೋಕದಿಂದ ವಾಕ್ಯವನ್ನು ಶ್ಲೋಕ ರೂಪದಲ್ಲಿ ಉದ್ಗರಿಸುತ್ತಾರೆ.

ಈ ಶ್ಲೋಕವು ಗದ್ಯರೂಪದಲ್ಲಿರದೆ, ಪ್ರಾಸಬದ್ಧವಾಗಿ, ಲಯ-ಛಂದಸ್ಸುಗಳಿಂದ ಕೂಡಿತ್ತು. ಹಾಗೆಯೇ ಮಹರ್ಷಿ ವಾಲ್ಮೀಕಿಯವರು 24000 ಶ್ಲೋಕಗಳು, ಸರ್ಗಗಳು, ವನ, ಅರ್ಥ, ರಾಮೋಪಖ್ಯಾನ 20 ಆಧ್ಯಾಯಗಳನ್ನು ಛಂದಸ್ಸಿನಲ್ಲಿ ಬರೆದ ರಾಮಾಯಣವು ಮಾನವೀಯ ಮೌಲ್ಯವನ್ನೊಳಗೊಂಡ ಮಹಾಗ್ರಂಥವಾಗಿದೆ. ಬಾಲಕಾಂಡ, ಅಯೋಧ್ಯಾಕಾಂಡ, ಕಿಷ್ಕೆಂಧಾ ಕಾಂಡ, ಸುಂದರಕಾಂಡ, ಯುದ್ಧಕಾಂಡ ಹಾಗೂ ಉತ್ತರಕಾಂಡ ಎಂಬ 7 ಕಾಂಡಗಳನ್ನೊಳಗೊಂಡ ಮಹಾಕಾವ್ಯ ರಾಮಾಯಣ.

ಮಹಾಕವಿಗಳು ಕಂಡಂತೆ ಮಹಾಕಾವ್ಯ : ವಾಲ್ಮೀಕಿ ರಾಮಾಯಣವು ಭರತಖಂಡದ ಸಂಸ್ಕೃಯನ್ನು ಬಹುಕಾಲದಿಂದ ಪೋಷಿಸುತ್ತ ಬಂದಿರುವ ಸಂಗತಿ ಸುವಿದಿತ . ಕಾಲಕಾಲಕ್ಕೆ ಸಂಸ್ಕೃತ ಪ್ರಾಕೃತಗಳಲ್ಲಿಯೂ ಇತರ ದೇಶಭಾಷೆಗಳಲ್ಲಿಯೂ ಬಗೆಬಗೆಯ ರಾಮಾಯಣಗಳು ಬಹುಸಂಖ್ಯೆಯಲ್ಲಿ ರಚಿತವಾಗುತ್ತ ಅನೇಕಾನೇಕ ಪ್ರತಿಭಾವಂತ ಕವಿಗಳನ್ನು ಆಕರ್ಷಿಸಿತು. ವಾಲ್ಮೀಕಿ ವಿರಚಿತ ಮೂಲ ರಾಮಾಯಣವನ್ನು ತಮ್ಮ ತಮ್ಮ ದೃಷ್ಠಿ ರೀತಿ-ರಿವಾಜುಗಳಲ್ಲಿ ಪುನರ್ರಚಿಸುವ ಸ್ಫೂರ್ತಿಯನ್ನು ನೀಡಿತು.

ವಿಭಿನ್ನ ಕವಿಗಳ ಮನಹೊಕ್ಕ ಮೂಲ ವಾಲ್ಮೀಕಿ ರಾಮಾಯಣವನ್ನು ತಮ್ಮ ದೃಷ್ಟಿಗೆ ನಿಲುಕಿದಂತೆ ಕಟ್ಟಿಕೊಟ್ಟರೂ ಅದರಿಂದಾಗಿ ಮೂಲ ವಾಲ್ಮೀಕಿ ರಾಮಾಯಣದ ಕಥನದ ಸೊಗಸು ಕುಂದಿಲ್ಲ, ಮಾಸಿಲ್ಲ ಅದೇ ಈ ಮಹಾಕಾವ್ಯದ ವಿಶೇಷತೆಯಾಗಿದೆ.

ಕುವೆಂಪು ಅವರ ದೃಷ್ಟಿಯಲ್ಲಿ ಮಾಸ್ತಿಯವರ ಆದಿಕವಿ ವಾಲ್ಮೀಕಿ : ಋಷಿಕವಿ ವಾಲ್ಮೀಕಿಯ ಸಮುದ್ರೋಪಮ, ಮಹಾಗಾನಕ್ಕೆ ಜಗತ್ತು “ಮಹಾಕಾವ್ಯ” ಎಂದು ನಾಮಕರಣ ಮಾಡಿದೆ ಏಕೆಂದರೆ ರಾಮಾಯಣವು ಪುರಾಣವಾದರೂ ಅದೊಂದು ಬೃಹದ್ ಭಾವಗೀತೆಯಂತೆಯೂ ಹಾಗೂ ಪುರಾಣದಂತೆಯೂ ಇದೆ. ಹೀಗಾಗಿ ಅದಕ್ಕೆ ಮಹಾಕಾವ್ಯ ಬಿರುದು ಸರ್ವಾಂಗ ಸುಂದರವಾಗಿದೆ. ಅದು ಏಕ ಕವಿಕೃತಿಯೂ ಆಗಿದೆ ಬಹುಕಾಲದ ಸಂಸ್ಕೃತಿಯ ಬಹು ದೊಡ್ಡ ಜನಾಂಗದ ಮನಃಕೃತಿಯೂ ಆಗಿದೆ. ವಾಲ್ಮೀಕಿಯ ಮಹಾಕೃತಿಯು ಚರಿತ್ರೆಯಲ್ಲ ಕಾವ್ಯ, ಕಾಲಾದೇಶಾತೀತವಾಗಿರುವುದರಿಂದ ನಿರಂತವಾಗಿ ನಡೆಯುತ್ತಿರುವ ಶಾಶ್ವತ ಘಟನಾ ಪರಂಪರೆಯಾಗಿದೆ.

ಮ್ಯಾಥೋ ಅರ್ನೋಲ್ಡ್ ಹೇಳುವಂತೆ ವ್ಯಕ್ತಿ ಪ್ರತಿಭೆ ಮತ್ತು ಯುಗ ಶಕ್ತಿ ಮಿಳಿತವಾದಾಗಲೇ ಮಹಾನ್ ಕೃತಿ ರಚನೆ ಸಾಧ್ಯ. ವಾಲ್ಮೀಕಿ ಎಂಬ ವ್ಯಕ್ತಿಯ ಕಾವ್ಯಪ್ರತಿಭೆಯ ಅಭಿವ್ಯಕ್ತಿಯಾಗಿ ರಾಮಾಯಣ ಭಾವಗೀತೆಯ ಗುಣಹೊಂದಿದೆ. ಇಂತಹ ಕವಿ-ಕೃತಿ ನಮಗೆ ಲಭಿಸಿರುವುದು ಕೇವಲ ಭಾರತೀಯರ ಹೆಮ್ಮೆ ಮಾತ್ರವಲ್ಲ, ಕುವೆಂಪು ಅವರೇ ಹೇಳುವಂತೆ ‘ಭುವನದಭಾಗ್ಯ’

ಮಾಸ್ತಿಯವರ ದೃಷ್ಟಿಯಲ್ಲಿ : ವಾಲ್ಮೀಕಿ ರಚಿಸಿರುವ ಆರು ಕಾಂಡಗಳಲ್ಲಿ ಅಯೋಧ್ಯಾ ಕಾಂಡವು ಬಹಳ ಶ್ರೇಷ್ಟತೆಯನ್ನು ಹೊಂದಿದೆ. ಇದು ರಾಮಾಯಣವೆಂಬ ಕಾವ್ಯ ಸೌಧದ ಮಧ್ಯಭಾಗ ಎಂದು ಅವರ ಭಾವನೆ. ವಾಲ್ಮೀಕಿ ಕಥೆಯನ್ನು ಬಾಲಕಾಂಡದಿಂದ ಆರಂಭಿಸಿದ್ದು, ಇಲ್ಲಿ ಭಾವದ ಕಣ್ಣು ಇದ್ದು, ಕಾವ್ಯದ ರಸ ಉಕ್ಕುತ್ತದೆ. [

ಪ್ರಕೃತಿ ವರ್ಣನೆಗಳಲ್ಲಿ ಸಹಜವಾದ ವರ್ಣನೆ, ಪ್ರೌಢವಾದ ವರ್ಣನೆ ಅಂದರೆ ಸ್ವಭಾವೋಕ್ತಿ ಹಾಗೂ ವಕ್ತ್ರೋಕ್ತಿ ಈ ಎರಡನ್ನೂ ರಾಮಾಯಣದಲ್ಲಿ ಕಾಣಬಹುದೆನ್ನುತಾರೆ ಮಾಸ್ತಿ. ವಾಲ್ಮೀಕಿ ಕಾಣದ ವಿಷಯವಿಲ್ಲ, ವರ್ಣಿಸದ ವಿವರವಿಲ್ಲ ಎಂಬುದು ಮಾಸ್ತಿಯವರ ಹೊಗಳಿಕೆ. ರಾಮಾಯಣದಲ್ಲಿ ಕಂಡುಬರುವ ವಿಧಿವಿಲಾಸದ ರೂಪಣವನ್ನು ಕುರಿತು ಮಾಸ್ತಿ ಹೇಳುತ್ತಾರೆ. ರಾಮಾಯಣದಲ್ಲಿ ರುಚಿಗಿಂತ ಶುಚಿಗೆ ಪ್ರಾಶಸ್ತ್ಯ, ಶೃಂಗಾರ ಇಲ್ಲಿ ಒಂದು ಸಲವಾದರೂ ಕದಡಿ ಬಗ್ಗಡವಾಗುವುದಿಲ್ಲ. ಗಂಡು ಹೆಣ್ಣಿನ ಪ್ರೇಮ ಜೀವನದಲ್ಲಿ ಬಹುಮುಖ್ಯ ತತ್ವ. ಆದರೆ ಅದನ್ನು ಗಂಭೀರವಾಗಿ ನಡೆಯಿಸಿಕೊಂಡು ಹೋಗಬೇಕು. ವಾಲ್ಮೀಕಿ ರಾಮಾಯಣದಲ್ಲಿ ಈ ಗಾಂಭೀರ್ಯವನ್ನು ಕಾಣುತ್ತೇವೆ ಎನ್ನುತ್ತಾರೆ ಮಾಸ್ತಿ.

ಕಾವ್ಯ ಸಂಸ್ಕೃತಿ ರುವಾರಿ ವಾಲ್ಮೀಕಿ ಮಹರ್ಷಿ : ವಾಲ್ಮೀಕಿಯ ವಿಸ್ತಾರವಾದ ಪ್ರಪಂಚ ಜ್ಞಾನದ ಫಲವಾಗಿ ಅವರ ಕಾವ್ಯದಲ್ಲಿ ಅವನು ಕಂಡ ಅಥವಾ ಆಶಿಸಿದ ಒಂದು ಸಂಸ್ಕೃತಿ ಚಿತ್ರ ದೊರೆಯುತ್ತದೆ. ಒಡವೆ ಮೇಲಣ ಆಸೆ ಹಾನಿಕರವಾದದ್ದು, ಮನುಷ್ಯ ಆಸೆಯನ್ನು ಹಿಡಿತದಲ್ಲಿಟ್ಟುಕೊಂಡಿರಬೇಕು. ಗಂಡು ಹೆಣ್ಣನ್ನಾಗಲಿ, ಹೆಣ್ಣು ಗಂಡನ್ನಾಗಲಿ ಬಲಾತ್ಕಾರದಿಂದ ತೆಗೆದುಕೊಳ್ಳಬಾರದು ಎಂಬ ನೀತಿ ರಾಮಾಯಣದಲ್ಲಿ ಅಡಗಿದೆ ಎಂದು ವಿವರಿಸುತ್ತಾರೆ ಮಾಸ್ತಿ.

ಡಿ.ವಿ.ಜಿ ಅವರ ದೃಷ್ಟಿಯಲ್ಲಿ : ಹೃದಯ ಪರಿಣಾಮದಿಂದ ನೋಡಿದರೆ ಅದು ಕಾವ್ಯ, ಕಲ್ಪಿತ ಕಥಾನಕಕ್ಕಿಂತ ಹೆಚ್ಚಿ ಪ್ರಭಾವವುಳ್ಳ ಕಾವ್ಯ. ರಾಮಾಯಣವು ಚರಿತ್ರೆಯನ್ನು ಅಂತರ್ಗತ ಮಾಡಿಕೊಂಡಿರುವ ಕಾವ್ಯವಾದುದರಿಂದಲೇ ಅದು ವಾಸ್ತವಿಕ ಪ್ರಮಾಣವೆಂಬಂತೆ ಜನಾಂಗೀಕಾರವನ್ನು ಸಂಪಾದಿಸಿಕೊಂಡಿದೆ. ನಮಗೆ ಅದು ಚಾರಿತ್ರಿಕ ಸಾಮಗ್ರಿಯೂ ಹೌದು. ಅದಕ್ಕಿಂತ ಹೆಚ್ಚಾಗಿ ಅದು ಹೃದಯ ಸಂಸ್ಕಾರ ಸಾಮಗ್ರಿ. ದೇಶ ಚರಿತ್ರೆ ಅದಕ್ಕಿಂತ ಮಿಗಿಲಾಗಿ ಜನತಾಂತರಾತ್ಮ ಚರಿತ್ರೆ ಎಂದು ಡಿವಿಜಿಯವರು ವಿಶ್ಲೇಷಿಸಿದ್ದಾರೆ.

8ನೇಯ ಶತಮಾನದಿಂದ ಅನೇಕ ಭಾರತೀಯ ವಸಾಹತುಗಳು ದಕ್ಷಿಣಪೂರ್ವ ಏಷ್ಯಾದಲ್ಲಿ ಏರ್ಪಟ್ಟಾಗ ರಾಮಾಯಣದ ಕಥೆ ವಿವಿಧ ರೂಪಾಂತರಗಳ ಮೂಲಕ ಆ ದೇಶಗಳಿಗೂ ಹರಡಿತು. ರಾಮಾಯಣ ಇಂಡೋನೇಷ್ಯಾ ಜಾವಾ, ಸುಮಾತ್ರಾ ಮತ್ತು ಬೋರ್ನಿಯಾ, ಥೈಲೆಂಡ್, ಕಾಂಬೋಡಿಯ, ಮಲೇಷಿಯ, ವಿಯೆಟ್ನಾಮ್ ಲಾಓಸ್‍ಗಳಲ್ಲಿ ಸಾಹಿತ್ಯ, ಶಿಲ್ಪಕಲೆ ಮತ್ತು ನಾಟಕ ರೂಪದಲ್ಲಿ ಇಂದಿಗೂ ಜನಮನ ಸೂರೆಗೊಳ್ಳುತ್ತಿದೆ.

ಭಾರತೀಯರಾದ ಹಿಂದೂ, ಮುಸ್ಲಿಂ, ಕ್ರೈಸ್ತ, ಪಾರಸಿ ಇನ್ನಾವುದೇ ಧಾರ್ಮಿಕತೆಯ ಅವಲಂಬಿತನಾಗಿದ್ದರೂ ರಾಮಾಯಣದ ಸಂಗತಿಗಳನ್ನು ಪರಿಗ್ರಹಿಸದೇ ಇರುವುದಿಲ್ಲ. ಈ ದೇಶದ ಪ್ರತಿಯೊಬ್ಬರಿಗೂ ಇದು ಒಂದಲ್ಲ ಒಂದು ರೀತಿಯಲ್ಲಿ ಪರಿಚಯಕ್ಕೆ ಬಂದಿರುತ್ತದೆ. ರಾಮಾಯಣ ಈ ಮಣ್ಣಿನ ಮಹಾಕಾವ್ಯವಷ್ಟೇ ಅಲ್ಲ. ಈ ನೆಲ ಪುರಾಣದ ಪದಕ ಪಡೆದಿದೆ. “ಲ್ಯಾಂಡ್ ಆಫ್ ಲೆಜೆಂಡ್” ಎಂದು ಕರೆಯಬಹುದಾದ ರಾಮಾಯಣವನ್ನು ಅರಿಯದ ಮನುಜನಿಲ್ಲ ಬಳಸದ ತೀರ್ಮಾನಗಳಿಲ್ಲ. ಜೀವಿಸದ ಭಾರತೀಯನಿಲ್ಲ.

ಒಟ್ಟಾರೆಯಾಗಿ ವಾಲ್ಮೀಕಿಯ ಈ ರಾಮಾಯಣ ಕೃತಿ ವೈವಿಧ್ಯಮಯ ಭಾರತದಲ್ಲಿ ಏಕತೆಯನ್ನು ರೂಪಿಸಿರುವುದು ಅಮೋಘವಾದ ಸಾಂಸ್ಕೃತಿಕ ಸಂಗತಿಯಾಗಿದೆ. ಅಖಂಡ ಭಾರತದ ಸಮೈಕ್ಯ ಭಾವದ ನಿರ್ಮಾತೃವಾಗಿದ್ದಾರೆ. ನಮ್ಮ ಅಂತರಂಗದ ಸಹೃದಯತೆಗೆ ದೃಷ್ಟಾಂತವನ್ನು ಕೊಡಬಲ್ಲ ಕಾವ್ಯ ರಚನೆ ಬಹುದೊಡ್ಡ ತಪಶ್ಚರ್ಯೇ ಅಂತಹ ತಪಸ್ವಿ ಮಹರ್ಷಿ ವಾಲ್ಮೀಕಿಗೆ ನಮ್ಮೆಲ್ಲರ ನಮನಗಳು.

ಸಂಗ್ರಹ : ಶ್ರೀಮತಿ ಪಿ.ಕೌಸಲ್ಯ
ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ,
ಬೆಂಗಳೂರು.

Comments are closed.