Ranaji Cricket : ಕರ್ನಾಟಕದ ಗೌತಮ್ ಪರಿಣಾಮಕಾರಿ ದಾಳಿ ಎದುರಿಸಲು ತಿಣುಕಾಡಿದ ತಮಿಳುನಾಡು

ಸ್ಪಿನ್ನರುಗಳಿಗೆ ನೆರವು ನೀಡುತ್ತಿರುವ ಪಿಚ್‌ನಲ್ಲಿ ಕರ್ನಾಟಕದ ಕೃಷ್ಣಪ್ಪ ಗೌತಮ್ ಅವರ ಪರಿಣಾಮಕಾರಿ ದಾಳಿಯನ್ನು ಎದುರಿಸಲು ತಿಣುಕಾಡಿದ ತಮಿಳುನಾಡು ರಣಜಿ ಋತುವಿನ ಮೊದಲ ಪಂದ್ಯದಲ್ಲಿ ಕರ್ನಾಟಕದ ವಿರುದ್ಧ ಮೊದಲ ಇನಿಂಗ್ಸ್ ಮುನ್ನಡೆಗೆ ಪರದಾಡುತ್ತಿದೆ.

ಮೊದಲ ಸರದಿಯಲ್ಲಿ ಕರ್ನಾಟಕ ಗಳಿಸಿದ 336 ರನ್ನುಗಳಿಗೆ ಉತ್ತರವಾಗಿ ತಮಿಳುನಾಡು ತಂಡ ಎರಡನೇ ದಿನದ ಆಟ ಕೊನೆಗೊಂಡಾಗ 4 ವಿಕೆಟ್ ಕಳೆದುಕೊಂಡು 165 ರನ್ ಗಳಿಸಿತ್ತು. ಮಹತ್ವದ ಮೊದಲ ಸರದಿ ಮುನ್ನಡೆಗೆ ತಮಿಳುನಾಡು ಇನ್ನೂ 172 ರನ್ ಗಳಿಸಬೇಕಿದೆ.

ತಮಿಳುನಾಡಿನ ಹಾದಿಯನ್ನು ಕಠಿಣಗೊಳಿಸಿದ ಗೌತಮ್ ಅತ್ಯಂತ ಕರಾರುವಾಕ್ ದಾಳಿಯ ಮೂಲಕ ಎದುರಾಳಿ ದಾಂಡಿಗರನ್ನು ಕಟ್ಟಿಹಾಕಿದರು. ಎರಡು ಓವರುಗಳ ಅಂತರದಲ್ಲಿ ಆರಂಭಿಕರಾದ ವಿಜಯ್ ಹಾಗೂ ಮುಕುಂದ್ ಅವರನ್ನು ಬಲಿ ಪಡೆದ ಗೌತಂ ನಂತರ ನಾಯಕ ವಿಜಯ್ ಶಂಕರ್‍ ಅವರ ವಿಕೆಟ್ ಕಿತ್ತರು.

ಮೇಲ್ಪಂಕ್ತಿಯ ಆಟಗಾರರನ್ನು ಕಳೆದುಕೊಂಡಿರುವ ತಮಿಳುನಾಡು ತನ್ನ ಮುಂದಿರುವ ಸವಾಲನ್ನು ಮೆಟ್ಟಿನಿಲ್ಲಲು ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಅವರನ್ನು ನೆಚ್ಚಿಕೊಂಡಿದೆ. 23 ರನ್ ಗಳಿಸಿ ಆಟುತ್ತಿರುವ ದಿನೇಶ್ ಹೆಗಲ ಮೇಲೆ ತಮಿಳುನಾಡಿನ ಮುನ್ನಡೆ ನಿಂತಿದೆ.

Leave a Reply