RCEP ಯಿಂದ ಭಾರತ ತಾತ್ಕಾಲಿಕ ಹಿಂತೆಗೆತ: ಏಕೆ ಮತ್ತು ಮುಂದೇನು?

ಈ ಕೆಳಗಿನ ಟೇಬಲುಗಳನ್ನು ಗಮನಿಸಿ. ಮೊದಲನೇ ಟೇಬಲಿನಲ್ಲಿ ಭಾರತ RCEPಯ ದೇಶಗಳಲ್ಲಿ ಯಾವ್ಯಾವ ದೇಶದ ಜೊತೆ ಎಷ್ಟೆಷ್ಟು ವ್ಯಾಪಾರದ ಕೊರತೆ ಹೊಂದಿದೆ (2018-19 ರಲ್ಲಿ) ಎಂಬ ಅಂಕಿಅಂಶಗಳಿವೆ. ಎರಡನೇ ಟೇಬಲಿನಲ್ಲಿ ಯಾವ್ಯಾವ ಉತ್ಪನ್ನಗಳನ್ನು ಎಷ್ಟೆಷ್ಟು ರಫ್ತು ಮಾಡುತ್ತಿದೆ ಮತ್ತು ಆಮದು ಮಾಡಿಕೊಳ್ಳುತ್ತಿದೆ ಎಂಬ (2018-19 ರಲ್ಲಿ) ಅಂಕಿಅಂಶಗಳಿವೆ.

ಚಿತ್ರಕೃಪೆ: ಎಸ್‌ಬಿಐ ಇಂಡಿಯಾ

ಈ ಟೇಬಲನ್ನು ನೋಡಿ. ಭಾರತ RCEPಯ ಕೇವಲ ನಾಲ್ಕು ದೇಶಗಳನ್ನು ಲಾವೋಸ್, ಕಾಂಬೋಡಿಯಾ, ಮಯನ್ಮಾರ್ ಮತ್ತು ಫಿಲಿಪೀನ್ಸ್ ಬಿಟ್ಟು ಇತರ ಹನ್ನೊಂದು ದೇಶಗಳ ಜೊತೆಗೆ ವ್ಯಾಪಾರದ ಕೊರತೆ ಅನುಭವಿಸುತ್ತಿದೆ.

ಒಟ್ಟಾರೆಯಾಗಿ 2018-19 ರಲ್ಲಿ, ಈ ದೇಶಗಳಿಂದ 172.93 ಬಿಲಿಯನ್ ಡಾಲರುಗಳಷ್ಟು ಸರಕು ಸೇವೆಗಳನ್ನು ಆಮದು ಮಾಡಿಕೊಂಡಿದ್ದು, 67.69 ಬಿಲಿಯನ್ ಡಾಲರುಗಳಷ್ಟನ್ನು ಮಾತ್ರ ಈ ದೇಶಗಳಿಗೆ ರಫ್ತು ಮಾಡಿದೆ. ಹಾಗಾಗಿ ಭಾರತ, ಒಟ್ಟು 105.24 ಬಿಲಿಯನ್ ಡಾಲರುಗಳಷ್ಟು ವ್ಯಾಪಾರದ ಕೊರತೆಯನ್ನು ಈ ದೇಶಗಳ ಜೊತೆ ಹೊಂದಿದೆ.

ಹಾಗೆಯೇ ಭಾರತ ತನ್ನ ಒಟ್ಟು ಆಮದಿನಲ್ಲಿ (508 ಬಿಲಿಯನ್ ಡಾಲರುಗಳು) ಶೇಕಡಾ 34 ರಷ್ಟನ್ನು (172.93 ಬಿಲಿಯನ್ ಡಾಲರುಗಳು) RCEP ದೇಶಗಳಿಂದ ಮಾಡಿಕೊಳ್ಳುತ್ತಿದೆ. ತನ್ನ ಒಟ್ಟು ರಫ್ತಿನಲ್ಲಿ (322 ಬಿಲಿಯನ್ ಡಾಲರುಗಳು) ಶೇಕಡಾ 21 ರಷ್ಟನ್ನು (67.69 ಬಿಲಿಯನ್ ಡಾಲರುಗಳು) ಈ RCEP ದೇಶಗಳಿಗೆ ಮಾಡುತ್ತಿದೆ.

ಒಟ್ಟಾಗಿ ಭಾರತ ಜಗತ್ತಿನ ದೇಶಗಳೊಡನೆ 2018-19 ರಲ್ಲಿ ಒಟ್ಟು 186 ಬಿಲಿಯನ್ ಡಾಲರುಗಳಷ್ಟು ವ್ಯಾಪಾರದ ಕೊರತೆ ಅನುಭವಿಸುತ್ತಿದೆ.

ಇದೇ ಟೇಬಲಿನಲ್ಲಿ ಭಾರತ ಚೀನಾ ಜೊತೆ ಹೊಂದಿರುವ 53.5 ಬಿಲಿಯನ್ ಡಾಲರುಗಳಷ್ಟು ಭಾರೀ ವ್ಯಾಪಾರದ ಕೊರತೆಯನ್ನು ಗಮನಿಸಿ. ಜೊತೆಗೆ ಇಂಡೋನೇಷಿಯ, ಮಲೇಷ್ಯಾ, ಥೈಲಾಂಡಿನಂಥ ದೇಶಗಳ ಜತೆಗಿನ ವ್ಯಾಪಾರದ ಕೊರತೆಯನ್ನೂ ನೋಡಿ.

ಚಿತ್ರಕೃಪೆ: ಎಸ್‌ಬಿಐ ಇಂಡಿಯಾ

ಇನ್ನು ಎರಡನೇ ಟೇಬಲನ್ನು ಗಮನಿಸಿದಾಗ ಭಾರತ ವ್ಯವಸಾಯೋತ್ಪನ್ನಗಳು, ಟೆಕ್ಟ್ಸ್ಟೈಲ್ಸ್, ಮುತ್ತು ಮತ್ತು ಆಭರಣಗಳನ್ನು ಬಿಟ್ಟು ಉಳಿದೆಲ್ಲ ಉತ್ಪನ್ನಗಳಲ್ಲೂ ಇತರ ದೇಶಗಳ ಜತೆ ವ್ಯಾಪಾರ ಕೊರತೆ ಎದುರಿಸುತ್ತಿದೆ. ಮೇಲಿನ ಮೂರೇ ಮೂರು ಉತ್ಪನ್ನಗಳಲ್ಲಿ ಭಾರತ ಹೆಚ್ಚುವರಿ ವ್ಯಾಪಾರ ಹೊಂದಿದ್ದರೂ ಆಮದು ರಫ್ತಿನ ಅಂತರ ತುಂಬ ಕಡಿಮೆಯಿರುವುದು ಕಾಣುತ್ತದೆ. ಅದರರ್ಥ RCEP ಬಂದರೆ ಈ ಮೂರು ಉತ್ಪನ್ನಗಳಲ್ಲೂ ಭಾರತ ಕೊರತೆ ಎದುರಿಸಬೇಕಾಗುತ್ತದೆ. ಜೊತೆಗೆ, ತಯಾರಿಕಾ ಉತ್ಪನ್ನಗಳು (manufacturing goods), ಎಲೆಕ್ಟ್ರಾನಿಕ್ ಗೂಡ್ಸ್, ಕೆಮಿಕಲ್ಸ್ ಯಾವುದನ್ನೇ ನೋಡಿದರೂ ಭಾರತ RCEP ದೇಶಗಳ ಜತೆ ಭಾರೀ ವ್ಯಾಪಾರದ ಕೊರತೆ ಹೊಂದಿದೆ.

ಹೀಗೆ ನಾವು ನೋಡಿದಾಗ ಭಾರತ ತಾನು ವಿವಿಧ ಉತ್ಪನ್ನಗಳನ್ನು ಬೇರೆ ದೇಶಗಳಿಗೆ ರಫ್ತು ಮಾಡುವುದಕ್ಕಿಂತ ಮೂರು ಪಟ್ಟು ಹೆಚ್ಚಿಗೆ ಬೇರೆ ದೇಶದ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿರುವುದು ನಮಗೆ ಗೊತ್ತಾಗುತ್ತದೆ.

ಇನ್ನು ಇಂಥಾ ಪರಿಸ್ಥಿತಿಯಲ್ಲಿ RCEP ಗೆ ಸಹಿ ಹಾಕಿದರೆ ಈ ವ್ಯಾಪಾರ ಕೊರತೆ ಮತ್ತಷ್ಟು ಹೆಚ್ಚಿ ಭಾರತ ಹೊರದೇಶಗಳ ಉತ್ಪನ್ನಗಳಿಗೆ ಇನ್ನೂ ದೊಡ್ಡ ಮಾರುಕಟ್ಟೆಯಾಗುವುದು ಖಚಿತ.

ಹೀಗೆ ತಾನಿನ್ನೂ ಇತರೆ ಸದಸ್ಯ ದೇಶಗಳ ಜತೆ ಸ್ಪರ್ಧಾತ್ಮಕತೆಯಲ್ಲಿ ಹಿಂದೆ ಬಿದ್ದಿರುವುದರಿಂದ ಭಾರತ ಸರ್ಕಾರ ಅಂದರೆ ಪ್ರಧಾನಿ ಮೋದಿಯವರು (ಈಗ ಸರ್ಕಾರ ಅಂದರೆ ಮೋದಿ ಅನ್ನುವಂತಾಗಿದೆ) ಈಗ ಸದ್ಯಕ್ಕೆ RCEPಗೆ ಸಹಿ ಹಾಕಲು ನಿರಾಕರಿಸಿದ್ದಾರೆಯೇ ಎಂದು ನೋಡಿದರೆ ವಾಸ್ತವ ಹಾಗೆ ಕಾಣಿಸುವುದಿಲ್ಲ.

ಯಾಕೆಂದರೆ, ಇವತ್ತಿಗೂ ಖಅಇPಯ ಯಾವ್ಯಾವ ನಿಯಮಗಳಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಒಪ್ಪಿಗೆಯಿಲ್ಲ ಎಂಬುದನ್ನು ಕೇಂದ್ರ ಸರ್ಕಾರ ನಮ್ಮ ನಾಗರಿಕರಿಗಾಗಲೀ ಅಥವಾ ಕನಿಷ್ಟ ನಮ್ಮ ಸಂಸದರಿಗಾಗಲೀ ಏನನ್ನೂ ತಿಳಿಸಿಲ್ಲ.

ನಮ್ಮ ದೇಶದ ಹಲವಾರು ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಮತ್ತು ಹಲವು ಜನಪರ ಗುಂಪುಗಳು RCEP ಯ ಬಗ್ಗೆ ಜನರನ್ನು ಎಚ್ಚರಿಸಿ ಹಲವು ಪ್ರತಿಭಟನೆಗಳ ಮೂಲಕ ಸರ್ಕಾರದ ಮೇಲೆ ಒತ್ತಡ ಹಾಕಿದ್ದು ಸರ್ಕಾರ RCEP ಗೆ ಸಹಿ ಹಾಕದಿರಲು ಮುಖ್ಯ ಕಾರಣ.

ಹಾಗೆಯೇ, ಹಲವು ಸಣ್ಣ ಹಾಗೂ ಮಧ್ಯಮ ಗಾತ್ರದ ಕೈಗಾರಿಕಾ ಸಂಘಟನೆಗಳು, ಆಟೋಮೋಬೈಲ್ ಉದ್ದಿಮೆಯ ಸಂಘಟನೆಗಳು, ಟೆಕ್ಟ್ಸ್ಟೈಲ್ ಉದ್ದಿಮೆ ಸಂಘಟನೆಗಳು ಸರ್ಕಾರದ ಮೇಲೆ ಹಾಕಿದ ಒತ್ತಡವೂ ಸರ್ಕಾರ ಈಗ RCEP ಗೆ ಸಹಿ ಹಾಕದಂತೆ ತಡೆದಿದೆ.

ಆದರೆ ಈಗಾಗಲೇ CII ( Confederation of Indian Industries) ಮುಂದೆ ಭಾರತ RCEPಗೆ ಸಹಿ ಹಾಕಬೇಕಾಗುತ್ತದೆ ಎಂದು ಹೇಳಿದೆ. ಯಾಕೆಂದರೆ ಈ RCEP ಯಿಂದ ರೈತರಿಗೆ ಮತ್ತು ಸಣ್ಣ ಮಧ್ಯಮ ಕೈಗಾರಿಕೆಗಳಿಗೆ ತೊಂದರೆಯಾಗುತ್ತದೆಯೇ ಹೊರತು ಬೃಹತ್ ಉದ್ಯಮಿಗಳಿಗೆ RCEP ಯಲ್ಲಿ ಲಾಭವೇ ಆಗುತ್ತದೆ. ಯಾಕೆಂದರೆ ರಿಲಯನ್ಸ್, ಅದಾನಿಯಂತಹ ಉದ್ಯಮಿಗಳು RCEP ಯ ಯಾವ ದೇಶದಲ್ಲಿ ಅನುಕೂಲವಿದೆಯೋ ಅಲ್ಲಿಯೇ ತಮ್ಮ ಉತ್ಪಾದನಾ ಘಟಕ ಸ್ಥಾಪಿಸಿ ಅಲ್ಲಿಂದಲೇ ಭಾರತ ಮತ್ತು ಇತರೆ ದೇಶಗಳಿಗೆ ರಫ್ತು ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಅಥವಾ ಬೇರೆ ದೇಶಗಳಿಂದ ಕಡಿಮೆ ಬೆಲೆಗೆ ಖರೀದಿಸಿ ಭಾರತದಲ್ಲಿ ಲಾಭಕ್ಕೆ ಮಾರಿ ಮಾರುಕಟ್ಟೆ ಏಕಸ್ವಾಮ್ಯ ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ.

ಈ ರೀತಿಯ ಬೃಹತ್ ಉದ್ದಿಮೆಗಳ ಒತ್ತಡ ಮತ್ತು ಅಂತಾರಾಷ್ಟ್ರೀಯ ಒತ್ತಡದಿಂದಾಗಿ ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ( ಬಹುಶಃ ಇನ್ನು ಮೂರು ತಿಂಗಳುಗಳಲ್ಲಿ – ಫೆಬ್ರವರಿ 2020) RCEP ಗೆ ಸಹಿ ಹಾಕುವ ಸಾಧ್ಯತೆ ದಟ್ಟವಾಗಿದೆ. ಹಾಗೂ ಅದಕ್ಕೆ ಪೂರಕವಾಗಿ ಜನಾಭಿಪ್ರಾಯ ರೂಪಿಸುವ ಕೆಲಸವೂ ಸದ್ದಿಲ್ಲದೆ ನಡೆಯುವ ಸಾಧ್ಯತೆಗಳೂ ಇವೆ.

ಆದುದರಿಂದ, ಈ ತಾತ್ಕಾಲಿಕ ಜಯದಲ್ಲಿ ಮೈಮರೆಯದೆ ಈ ದೇಶದ ರೈತರು, ಕಾರ್ಮಿಕರು, ಪತ್ರಕರ್ತರು, ಬರಹಗಾರರು, ಕಲಾವಿದರು ಒಟ್ಟಾರೆ ಈ ದೇಶದ ಬಗ್ಗೆ ಕಳಕಳಿ ಇರುವವರೆಲ್ಲರೂ ಸರ್ಕಾರದ ಮೇಲೆ RCEP ಗೆ ಮುಂದೆಯೂ ಸಹಿ ಹಾಕದಂತೆ ಪರಿಣಾಮಕಾರಿಯಾಗಿ ಒತ್ತಡ ಹಾಕುವ, ಹೋರಾಟ ರೂಪಿಸುವ ಅವಶ್ಯಕತೆಯಿದೆ.

ಡಾ.ಬಿ.ಸಿ ಬಸವರಾಜ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights