ಕೊರೊನ ಬಿಕ್ಕಟ್ಟಿನಲ್ಲಿ ನೆನಪಾಗುವ ಚೀನ-ಭಾರತ ಸ್ನೇಹ ರಾಯಭಾರಿ ಕರ್ನಾಟಕ ಮೂಲದ ಡಾ. ದ್ವಾರಕಾನಾಥ್ ಕೊಟ್ನೀಸ್

ಚೈನಾದ ವುಹಾನ್ ಪ್ರಾಂತ್ಯದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಕರೊನ ವೈಸರ್ ಸೋಂಕು ಈಗ ಜಾಗತಿಕವಾಗಿ ಬಹುತೇಕ ಎಲ್ಲ ದೇಶಗಳಿಗೂ ಹಬ್ಬಿ, ಎಲ್ಲ ದೇಶದ ನಾಗರಿಕರನ್ನು ಸೋಂಕಿದೆ. ಈಗ ವಿಶ್ವದಾದ್ಯಂತ ಸುಮಾರು ಎರಡೂವರೆ ಲಕ್ಷಕ್ಕೂ ಹೆಚ್ಚು ಜನಕ್ಕೆ ಸೋಂಕು ತಗಲಿದ್ದು, ಸುಮಾರು ಏಳು ಸಾವಿರಕ್ಕೂ ಹೆಚ್ಚು ಜನ ಮುತಪಟ್ಟಿದ್ದಾರೆ. ಹಲವು ದೇಶಗಳು ಇದು ರಾಷ್ಟ್ರೀಯ ತುರ್ತು ಎಂದು ಘೋಷಿಸಿವೆ. ಮನುಕುಲವನ್ನು ಉಳಿಸಿಕೊಳ್ಳಲು ಎಲ್ಲಾ ರಾಷ್ಟ್ರಗಳು ಒಟ್ಟಾಗಿ ಈ ಸೋಂಕುಮಾರಿಯ ವಿರುದ್ಧ ಹೋರಾಡಬೇಕಿದೆ.

ಇಂತಹ ಸಮಯದಲ್ಲಿ ಕೆಲವು ಹೊಣೆಗೇಡಿ ಮಾಧ್ಯಮಗಳು ಮತ್ತು ಹಲವು ಹೊಣೆಗೇಡಿ ರಾಜಕಾರಣಿಗಳು ಸುಳ್ಳು ಸುದ್ದಿಗಳನ್ನು ಹಬ್ಬಿಸುವುದರಿಂದ ಹಿಡಿದು, ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿವೆ. ಈ ವೈರಸ್ ಮೂಲ ಅಮೆರಿಕವೆ? ಚೈನಾನೇ? ಅಥವ ಇದು ಜೈವಿಕ ಯುದ್ಧದ ಭಾಗವಾಗಿ ಸಿದ್ಧಪಡಿಸಿದ ವೈರಸ್ಸೇ ಇತ್ಯಾದಿ ಆರೋಪ ಪ್ರತ್ಯಾರೋಪ, ಊಹಾರೋಪಗಳು ಒಂದು ಕಡೆಯಾದರೆ, ಭಾರತದ ಕೆಲವು ಮಾಧ್ಯಮಗಳು ಇದು ಚೈನಾ-ಪಾಕಿಸ್ತಾನ ಭಾರತದ ಮೇಲೆ ಹೂಡಿದ ಜೈವಿಕ ಯುದ್ಧ ಎಂಬ ಊಹಾಪೋಶದ ಸುಳ್ಳುಸುದ್ದಿಯನ್ನು ಬಿತ್ತರಿಸಿ ತಮ್ಮ ಬೇಳೆ ಬೇಯಿಸಿಕೊಂದು ಹೊಣೆಗೇಡಿತನ ಮೆರೆಯುತ್ತಿವೆ.

ಆರೋಪ ಪ್ರತ್ಯಾರೋಪಗಳಾದರೂ, ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶ ದೇಶಗಳ ಸಂಬಂಧದ ಕುರಿತಾದದ್ದು. ಮುಂದೆ ಇಂತಹ ಬಿಕ್ಕಟ್ಟುಗಳು ತಲೆದೋರದಂತೆ ಎಚ್ಚರಿಕೆ ವಹಿಸುವ ಸಲುವಾಗಿ, ಈ ವೈರಸ್ ಗಳ ಮೂಲ ಎಂತಾದ್ದು? ಇದಕ್ಕೆ ಅತಿಯಾದ ಕಾಡುಗಳು ನಾಶವಾಗುತ್ತಿರುವುದು ಕಾರಣವೇ? ಮಾನವ ಸಮಾಜದ ಸ್ವಾರ್ಥ ಹೆಚ್ಚಾದಂತೆ, ಪ್ರಕೃತಿ ಜೊತೆಗಿನ ಸಂಬಂಧವನ್ನು ಮರೆತಿರುವುದು ಇಂತಹ ವಿಪತ್ತುಗಳಿಗೆ ಕಾರಣವೇ? ಎಂಬಿತ್ಯಾದಿ ಪ್ರಶ್ನೆಗಳು ಪ್ರಮುಖವಾಗುತ್ತವೆ. ಅದೇ ಸಮಯದಲ್ಲಿ ಇಂತಹ ವಿಪತ್ತಿನ ಸನ್ನಿವೇಶದಲ್ಲಿ, ಅದರ ನಿವಾರಣೆಗೆ ಟೊಂಕಕಟ್ಟಿ ದುಡಿಯುವ ವ್ಯಕ್ತಿಗಳ ಮಾನವೀಯ ಮೌಲ್ಯವೂ ಮುಖ್ಯ. ಅಪಾಯದ ಅಂಚಿನಲ್ಲಿ ನಿಂತು ಕಾರ್ಯ ನಿರ್ವಹಿಸುವ ವೈದ್ಯರು, ನರ್ಸ್ ಗಳು ಮತ್ತು ಇತರೆ ಆಸ್ಪತ್ರೆ ಸಿಬ್ಬಂದಿ ಇಡೀ ಸಮಾಜಕ್ಕೆ, ವಿಶ್ವಕ್ಕೆ, ಮನುಕುಲಕ್ಕೆ ತಮ್ಮ ಸೇವೆ ಸಲ್ಲಿಸುತ್ತಾ ಇರುತ್ತಾರೆ.

ಇಂತಹ ಸಮಯದಲ್ಲಿ ನೆನಪಾಗುವುದು ಜಪಾನಿ-ಚೀನ ಭೀಕರ ಯುದ್ಧದ ಸಮಯದಲ್ಲಿ ಚೈನಾ ದೇಶಕ್ಕೆ ಭಾರತದಿಂದ ಪ್ರಯಾಣ ಮಾಡಿ, ಅಲ್ಲಿ ಯುದ್ಧದಿಂದ ಅಪಾರ ಹಿಂಸೆ ನೋವು ಅನುಭವಿಸಿದ ಜನರ ಸುಶ್ರೂಷೆ ಮಾಡಿ ಅಲ್ಲೇ ಪ್ರಾಣ ಬಿಟ್ಟ ಡಾ. ದ್ವಾರಕಾನಾಥ್ ಕೊಟ್ನೀಸ್. ಇವರಿಗೆ ಕರ್ನಾಟಕದ ನಂಟೂ ಇತ್ತು ಎಂಬುದು ವಿಶೇಷ.

1938ರಲ್ಲಿ ನಡೆಯುತ್ತಿದ್ದ ಎರಡನೇ ಚೀನಾ-ಜಪಾನ್ ಯುದ್ಧ ಭೀಕರವಾಗಿತ್ತು. ಚೈನಾದ ಮೇಲೆ ಜಪಾನ್ ಅತಿಕ್ರಮಣ ಮಾಡಿದಾಗ ಚೈನಾ ಸರ್ಕಾರದ ಜನರಲ್ ಝು ದೆ, ಭಾರತದಿಂದ ವೈದ್ಯರ ತಂಡವನ್ನು ಕಳುಹಿಸಿಕೊಡುವಂತೆ ಅಂದಿನ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮುಖಂಡ ಜವಹಾರ್ ಲಾಲ್ ನೆಹರೂ ಅವರನ್ನು ಕೋರುತ್ತಾರೆ. ಆಗ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ನೇತಾಜಿ ಸುಭಾಷ್ ಚಂದ್ರ ಬೋಸ್, ಈ ಮನವಿಯನ್ನು ಭಾರತದ ಜನರ ಮುಂದೆ ಇಡುತ್ತಾರೆ.

ತನ್ನ ದೇಶದ ಸ್ವಾತಂತ್ರ್ಯಕ್ಕಾಗಿಯೇ ಹೋರಾಡುತ್ತಿದ್ದ ಭಾರತೀಯ ಕಾಂಗ್ರೆಸ್, ಚೈನಾದ ಮೇಲೆ ನಡೆಯುತ್ತಿರುವ ಅತಿಕ್ರಮಣವನ್ನು ವಿರೋಧಿಸಿ, ಹಣ ಸಂಗ್ರಹ ಮಾಡಿ, ವೈದ್ಯರ ತಂಡವನ್ನು ಚೈನಾಗೆ ಕಳುಹಿಸಲು ಅಣಿಯಾಗುತ್ತದೆ. ಇದರ ಭಾಗವಾಗಿ ಡಾ. ಅಟಲ್, ಡಾ. ದೇಬೇಶ್ ಮುಖರ್ಜಿ, ಡಾ. ಬಿ ಕೆ ಬಸು, ಡಾ. ಚೋಳ್ಕರ್ ಮತ್ತು ತರುಣ ಡಾಕ್ಟರ್ ದ್ವಾರಕಾನಾಥ್ ಕೊಟ್ನೀಸ್ ಚೈನಾ ಯಾತ್ರೆಗೆ ಮುಂದಾಗುತ್ತಾರೆ.

ದ್ವಾರಕಾನಾಥ್ ಅವರ ಬಗ್ಗೆ ಮೂಡಿ ಬಂದಿದ್ದ ಕ್ವಾಜಾ ಅಹಮ್ಮದ್ ಅಬ್ಬಾಸ್ ಅವರ ಒಂದು ಪುಸ್ತಕವನ್ನು ಆಧರಿಸಿ ಕೊಟ್ನೀಸ್ ಅವರ ಚೈನಾಗಾಥೆಯನ್ನು ಕನ್ನಡದಲ್ಲಿ ಕಟ್ಟಿಕೊಟ್ಟಿರುವ ತ.ರಾ.ಸು ಹೀಗೆ ಬಣ್ಣಿಸುತ್ತಾರೆ. “ಬಿಜಾಪುರದ ಕನ್ನಡಕಿಡಿ ದ್ವಾರಕಾನಾಥ್ ಕೊಟ್ನೀಸ್ ಆಗಿನ್ನೂ ಶೋಲಾಪುರದಲ್ಲಿ ವೈದ್ಯವೃತ್ತಿ ಆರಂಭಿಸಿದ್ದರು. ಇವರೂ ಮುಖರ್ಜಿಯಂತೆ ಉತ್ಸಾಹಿ ದೇಶಪ್ರೇಮಿ ತರುಣ; ಇನ್ನೂ ಅವಿವಾಹಿತ”.

28 ವರ್ಷದ ಈ ಯುವ ಭಾರತೀಯ ವೈದ್ಯ ಚೈನಾಗೆ ತೆರಳಿದ ಮೇಲೆ ಅವರದ್ದು ತ್ರಾಸದಾಯಕ ಬದುಕು. ಅವರು ಒಮ್ಮೆ 72 ಘಂಟೆಗಳ ಕಾಲ ಯಾವುದೇ ವಿರಾಮ, ನಿದ್ದೆ ಇಲ್ಲದೆ ಯುದ್ಧ ಗಾಯಳುಗಳಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದು ದಾಖಲಾಗಿದೆ. ಸುಮಾರು 800ಕ್ಕೂ ಹೆಚ್ಚು ಯೋಧರಿಗೆ ಶಸ್ತ್ರಚಿಕಿತ್ಸೆ ಒದಗಿಸುವ ಈ ಮಾನವೀಯ ವೈದ್ಯರನ್ನು ಅಲ್ಲಿನ ಒಂದು ಆಸ್ಪತ್ರೆಗೆ ನಿರ್ದೇಶಕರನ್ನಾಗಿ ನೇಮಿಸಲಾಗುತ್ತದೆ.

ಉಳಿದೆಲ್ಲಾ ವೈದ್ಯರು ಭಾರತಕ್ಕೆ ಹಿಂದಿರುಗಿದ ಮೇಲೆಯೂ ಕೊಟ್ನೀಸ್ ಅವರು ಚೈನಾದಲ್ಲಿಯೇ ಉಳಿದುಕೊಳ್ಳುತ್ತಾರೆ. ಅಲ್ಲಿ ತಮ್ಮ ನಿಸ್ವಾರ್ಥ ಸೇವೆಯನ್ನು ಮುಂದುವರೆಸುತ್ತಾರೆ. ತಾವು ಕೆಲಸ ಮಾಡುತ್ತಿದ್ದ ಆಸ್ಪತ್ರೆ-ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯಾಗಿದ್ದ ಕ್ಯು-ಚಿಂಗ್-ಲಾನ್ ಅವರನ್ನು ಪ್ರೀತಿಸಿ ಮದುವೆಯಾದರು.

ಇಷ್ಟೆಲ್ಲಾ ಸೇವೆಗಳ ನಡುವೆಯೂ ಅವರು ಭಾರತಕ್ಕೆ ಹಿಂದಿರುಗುವ ಬಗ್ಗೆ ಚಿಂತಿಸುತ್ತಲೇ ಇದ್ದರು. ಅವರು 1942, ಜೂನ್ ನಲ್ಲಿ ಅವರ ವೈದ್ಯ ಗೆಳೆಯ, ಭಾರತಕ್ಕೆ ಹಿಂದಿರುಗಿದ್ದ ಬಸು ಅವರಿಗೆ ಬರೆಯುವ ಪತ್ರದಲ್ಲಿ  “ಹಿಂದೂಸ್ಥಾನದ ಇಂದಿನ ಪರಿಸ್ಥಿತಿ ನೋಡಿದರೆ ನಾನಿನ್ನು ಈ ದೇಶದಲ್ಲಿ ಹೆಚ್ಚುದಿನ ಇರುವುದು ಸಾಧ್ಯವಿಲ್ಲ, ಹಿಂದೂಸ್ಥಾನದ ಸಂಗ್ರಾಮಕ್ಕೆ ನಮ್ಮ ಅಗತ್ಯವಿದೆ. ಅಲ್ಲವೆ?” ಎಂದು ಬರೆಯುತ್ತಾರೆ.

ಆದರೆ ವಿಧಿ ಇದಕ್ಕೆ ಅವಕಾಶ ನೀಡಲಿಲ್ಲ. ಒಂದು ವರ್ಷದಿಂದಲೂ ಮೂರ್ಚೆ ರೋಗದಿಂದ ಬಳಲುತ್ತಿದ್ದ ಕೊಟ್ನೀಸ್, 1942 ಡಿಸೆಂಬರ್ ನಲ್ಲಿ ಇದೇ ರೋಗಕ್ಕೆ ಬಲಿಯಾದರು. ಚೈನಾದ ಜನ ಮಾನಸದಲ್ಲಿ ಇಂದಿಗೂ ಕೊಟ್ನೀಸ್ ತಮ್ಮ ನಿಸ್ವಾರ್ಥ ಮಾನವೀಯ ಸೇವೆಗಾಗಿ ಉಳಿದಿದ್ದಾರೆ. ಚೈನಾ ದೇಶದಲ್ಲಿ ಕೊಟ್ನೀಸ್ ಅವರ ಪ್ರತಿಮೆಯನ್ನು ನಿರ್ಮಿಸಿ ಗೌರವಿಸಲಾಗಿದೆ.

ಭಾರತ ಸರ್ಕಾರ ಡಿಸೆಂಬರ್ 9, 1993ರಲ್ಲಿ ದ್ವಾರಕಾನಾಥ್ ಕೊಟ್ನೀಸ್ ಅವರ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ ಮಾಡಿ ಗೌರವಿಸಿದೆ. ಕರ್ನಾಟಕದ ಮೂಲದವರೇ ಆದ ವಿ ಶಾಂತಾರಾಂ, “ಡಾ, ಕೋಟ್ನಿಸ್ ಕಿ ಅಮರ್ ಕಹಾನಿ” ಎಂಬ ಹಿಂದಿ ಚಿತ್ರವನ್ನು ನಿರ್ದೇಶಿಸಿದ್ದರು. ಇದರಲ್ಲಿ ಕೊಟ್ನೀಸ್ ಪಾತ್ರವನ್ನು ಅವರೇ ಪೋಷಿಸಿದ್ದರು.

ಜಪಾನಿ ಅತಿಕ್ರಮಣದ ಯುದ್ಧದ ಬಿಕ್ಕಟ್ಟಿನಲ್ಲಿ ಚೈನಾದ ಯೋಧರ, ಜನಸಾಮಾನ್ಯರ ವೈದ್ಯಕೀಯ ಸುಶ್ರೂಷೆಗೆ ಯಾವುದೇ ಸ್ವಾರ್ಥವಿಲ್ಲದೆ ಸಂಪೂರ್ಣವಾಗಿ ತೊಡಗಿಸಿಕೊಂಡ ಕರ್ನಾಟಕ ಮೂಲದ ದ್ವಾರಕಾನಾಥ್ ಕೊಟ್ನೀಸ್, ಇಂದು ಜಗತ್ತಿನಾದ್ಯಂತ ಬಿಕ್ಕಟ್ಟು ಸೃಷ್ಟಿಸಿರುವ ಕರೊನ ವೈರಸ್ ವಿರುದ್ಧದ ಹೋರಾಟಕ್ಕೆ ಎಲ್ಲ ವೈದ್ಯರಿಗೂ, ಸಾಮಾನ್ಯ ಜನರಿಗೂ ಸ್ಫೂರ್ತಿಯಾಗಲಿ.