ರಾಜಣ್ಣ, ಮುದ್ದಹನುಮೇಗೌಡ ತಲಾ 3.5 ಕೋಟಿ ರೂ. ಪಡೆದ್ರಾ..? ಸಂಸದ ಸ್ಪಷ್ಟನೆ

ನಾಮಪತ್ರ ವಾಪಸ್ ಪಡೆಯಲು ಸಂಸದ ಮುದ್ದಹನುಮೇಗೌಡ ಹಾಗೂ ಮಾಜಿ ಶಾಸಕ ರಾಜಣ್ಣ ಅವರು 3.5 ಕೋಟಿ ರೂ. ಹಣ ಪಡೆದಿದ್ದಾರೆ ಎಂದು ಸಂಭಾಷಣೆ ನಡೆಸಿದ್ದ ಆಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈ ಬಗ್ಗೆ ಸಂಸದರು ಸ್ಪಷ್ಟನೆ ನೀಡಿದ್ದಾರೆ.

ಆಡಿಯೋದಲ್ಲಿ ಮಾತನಾಡಿರುವ ಇಬ್ಬರನ್ನು ತನಿಖೆಗೆ ಒಳಪಡಿಸಿದ್ರೆ ಸತ್ಯ ಏನು ಎಂಬುದು ಗೊತ್ತಾಗುತ್ತದೆ. ಯಾಕಂದ್ರೆ ನಾನಾಗಲಿ ಅಥವಾ ಯಾರೋ ಜವಾಬ್ದಾರಿ ಇರೋ ವ್ಯಕ್ತಿ ಆ ಆಡಿಯೋದಲ್ಲಿ ಇಲ್ಲ. ನಾನು ದೇವಸ್ಥಾನದಲ್ಲಿ ಈ ಕೈನ ಬಹಳ ಶುದ್ಧವಾಗಿಟ್ಟುಕೊಂಡಿದ್ದೇನೆ ಎಂದು ಘೋಷಣೆ ಮಾಡಿದ್ದೇನೆ. ನಾನು ನಾಮಪತ್ರ ಹಿಂಪಡೆದು ಬಳಿಕ ಪ್ರಚಾರದಲ್ಲಿ ಭಾಗವಹಿಸಿದ್ದ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಪರಮೇಶ್ವರ್ ಅವರ ಮುಂದೆಯೇ ನಾನು ಘೋಷಣೆ ಮಾಡಿರೋದು. ಅದಕ್ಕಿಂತ ಇನ್ನೇನು ನಾನು ಘೋಷಣೆ ಮಾಡಬೇಕು ಎಂದು ಹೇಳಿದರು.

ಕಾಂಗ್ರೆಸ್, ಜೆಡಿಎಸ್ ಮುಖಂಡರು ಮಾತಾಡಿದರೆ ನಾನು ಪ್ರತಿಕ್ರಿಯೆ ಕೊಡುತ್ತಿದ್ದೆನು. ಈ ಸಂಬಂಧ ಪರಮೇಶ್ವರ್ ಅವರನ್ನೇ ಕೇಳಬೇಕು. ಅವರು ಒಪ್ಪಿಕೊಂಡರೆ ನಾವು ಒಪ್ಪಿಕೊಳ್ಳಬೇಕಾಗುತ್ತದೆ. ನಮ್ಮ ಜಿಲ್ಲೆಯಲ್ಲಿ ಪ್ರಚಾರ ಪ್ರಾರಂಭಿಸಿದಾಗ ದೇವೇಗೌಡರು, ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಬಂದಿದ್ದರು. ಈ ಸಮಯದಲ್ಲಿ ನನ್ನ ಮನೆಗೆ ಪರಮೇಶ್ವರ್ ಹಾಗೂ ದಿನೇಶ್ ಗುಂಡೂರಾವ್ ಬಂದಿದ್ದರು. ಆಗ ಕಾಂಗ್ರೆಸ್ ಗೆ ಸಂಬಂಧಿಸಿದ ಚೆಕ್ ಗಳನ್ನು ತಂದಿದ್ದರು. ಇದನ್ನೇ ಕೆಲವರು ಚೆಕ್ ಕೊಟ್ಟಿದ್ದಾರೆಂದು ಹಬ್ಬಿಸಿದ್ದಾರೆ ಎಂದು ಗರಂ ಆದ್ರು.

ಈ ಆಡಿಯೋ ಬಗ್ಗೆ ಪರಮೇಶ್ವರ್ ಅವರೇ ಉತ್ತರ ಕೊಡಬೇಕು. ಇಂತ ವಿಷಯಕ್ಕೆ ಪ್ರತಿಕ್ರಿಯೆ ಕೊಟ್ಟು ಗಾಂಭೀರ್ಯತೆ ಕಳೆದುಕೊಳ್ಳಲ್ಲ. ನನ್ನ ಜಿಲ್ಲೆಯ ಜನರಿಗೆ ನನ್ನ ಬಗ್ಗೆ ಸಂಪೂರ್ಣ ನಂಬಿಕೆ ಇದೆ ಎಂದು ತುಮಕೂರಿನಲ್ಲಿ ದೇವೇಗೌಡರನ್ನು ಗೆಲ್ಲಿಸಲು ಕೋಟಿ ಕೋಟಿ ಡೀಲ್ ಮಾಡಿದ್ದಾರೆನ್ನಲಾದ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರ ಸಂಭಾಷಣೆ ಬಹಿರಂಗವಾದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ.

Leave a Reply