ಕಾಂಗ್ರೆಸ್ ನಿಂದ ಪಕೋಡ ಮಾರಾಟ – ಪೊಲೀಸರೊಂದಿಗೆ ಪೀಪಲ್ಸ್ ಫೋರಂ ಹೋರಾಟಗಾರರ ತಿಕ್ಕಾಟ

ಪೌರತ್ವ ಮಸೂದೆ ವಿರೋಧಿಸಿ ಕಲಬುರ್ಗಿಯಲ್ಲಿ ಹೋರಾಟಗಳು ಮುಂದುವರೆದಿವೆ. ಪೌರತ್ವ ವಿರೋಧಿಸಿ, ಕೇಂದ್ರ ಸರ್ಕಾರದ ಯುವ ವಿರೋಧಿ ನೀತಿ ಖಂಡಿಸಿ ಯುವ ಕಾಂಗ್ರೆಸ್ ನೇತೃತ್ವದಲ್ಲಿ ರಸ್ತೆ ಪಕ್ಕದಲ್ಲಿಯೇ ಪಕೋಟ ತಯಾರಿಸಿ ಮಾರಾಟ ಮಾಡಲಾಯಿತು. ಮತ್ತೊಂದೆಡೆ ಕರ್ನಾಟಕ ಪೀಪಲ್ಸ್ ಫೋರಂ ನೇತೃತ್ವದಲ್ಲಿ ಪೌರತ್ವದ ವಿರುದ್ಧ ಅಸಹಾಕಾರ ಚಳುವಳಿ ಆರಂಭಿಸಲಾಯಿತು. ಈ ವೇಳೆ ಪೊಲೀಸರು ಮತ್ತು ಪೀಪಲ್ಸ್ ಫೋರಂ ಹೋರಾಟಗಾರರ ನಡುವೆ ಮಾತಿನ ಚಕಮಕಿ ನಡೆಯಿತು.

ಪೌರತ್ವ ಮಸೂದೆ ಹೋರಾಟಗಳು ಕಲಬುರ್ಗಿ ಜಿಲ್ಲೆಯಲ್ಲಿ ಮುಂದುವರೆದೇ ಇವೆ. ಸ್ವಾತಂತ್ರ್ಯ ಸೇನಾನಿ ಸೂಭಾಷ್ ಚಂದ್ರಬೋಸ್ ಜನ್ಮದಿನದ ಅಂಗವಾಗಿ ವಿವಿಧ ಸಂಘಟನೆಗಳು ಪ್ರತ್ಯೇಕವಾಗಿ ಹೋರಾಟ ನಡೆಸಿದವು. ಯುವ ಕಾಂಗ್ರೆಸ್ ಘಟಕದ ನೇತೃತ್ವದಲ್ಲಿ ಪದವೀಧರರು ಪಕೋಡ ಸಿದ್ಧಪಡಿಸಿ ಮಾರಾಟ ಮಾಡಿದರು. ಮತ್ತೊಂದೆಡೆ ಸುಭಾಷ್ ಚೌಕ್ ಬಳಿ ಕರ್ನಾಟಕ ಪೀಪಲ್ಸ್ ಫೋರಂ ನೇತೃತ್ವದಲ್ಲಿ ಪೌರತ್ವದ ವಿರುದ್ಧ ಅಸಹಾಕಾರ ಚಳುವಳಿ ನಡೆಸಲಾಯಿತು.
ಪೌರತ್ವ ಮಸೂದೆ ವಿರೋಧಿಸಿ, ಪಕೋಡ ಮಾಡಿ ಜೀವನ ಮಾಡಬಹುದೆಂಬ ಪ್ರಧಾನಿ ಹೇಳಿಕೆ ಖಂಡಿಸಿ ಯುವಕ ಕಾಂಗ್ರೆಸ್ ಕಾರ್ಯಕರ್ತರು ವಿನೂತನವಾಗಿ ಪ್ರತಿಭಟಿಸಿದರು.

ನೇತಾಜಿ ಸುಭಾಷ್ ಚಂದ್ರಭೋಸ್ ರ ಜನ್ಮದಿನವಾದ ಇಂದು, ನೇತಾಜಿ ಪ್ರತಿಮೆ ಬಳಿಯೇ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಪದವೀಧರರು ಪಕೋಡ ತಯಾರಿಸಿದರು. ಅಲ್ಲಿಯೇ ಪಕೋಡ ಮಾರಾಟ ಮಾಡಿ, ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಡಿಸಿದರು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ. ದೇಶದ ಆರ್ಥಿಕ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಎರಡು ಕೋಟಿ ಉದ್ಯೋಗ ನೀಡೋದಾಗಿ ಹೇಳಿ, ಅಷ್ಟೇ ಪ್ರಮಾಣದ ಉದ್ಯೋಗಿಗಳಿಗೆ ಕೆಲಸವಿಲ್ಲದಂತೆ ಬೀದಿಪಾಲು ಮಾಡಿದೆ ಎಂದು ಆರೋಪಿಸಿದರು. ಪಕೋಡ ಮಾರಿ ಜೀವನ ಮಾಡಬಹುದೆಂದು ಪ್ರಧಾನಿ ಹೇಳ್ತಾರೆ. ಆದರೆ ಪಕೋಡ ಮಾರೋಕೆ ಪದವಿ ಓದಬೇಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈಗಲಾದರೂ ನಿರುದ್ಯೋಗ ಸಮಸ್ಯೆ ನಿವಾರಿಸುವಂತೆ ಆಗ್ರಹಿಸಿದರು.

ಪೀಪಲ್ಸ್ ಫೋರಂನಿಂದ ಅಸಹಾಕಾರ ಚಳುವಳಿ….
ಸಿಎಎ, ಎನ್.ಆರ್.ಸಿ., ಎನ್.ಪಿ.ಆರ್. ವಿರೋಧಿಸಿ ಕರ್ನಾಟಕ ಪೀಪಲ್ಸ್ ಫೋರಂ ನೇತೃತ್ವದಲ್ಲಿ ಕಲಬುರ್ಗಿಯಲ್ಲಿ ಅಸಹಾಕಾರ ಚಳುವಳಿ ಆರಂಭಿಸಲಾಯಿತು. ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರಭೋಸ್ ಚೌಕ್ ಬಳಿ ಚಳುವಳಿಗೆ ಚಾಲನೆ ನೀಡಲಾಯಿತು. ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆಯಿಂದ ಭೋಸ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಚಳುವಳಿಗೆ ಚಾಲನೆ ನೀಡಿದರು. ಯಾವುದೇ ಕಾರಣಕ್ಕೂ ನಮ್ಮ ಮಾಹಿತಿಯನ್ನು ಕೊಡೋಲ್ಲ. ಪೌರತ್ವ ನೋಂದಣಿಗೆ ದಾಖಲೆಗಳನ್ನೂ ಕೊಡಲ್ಲ. ಯಾವುದೇ ದಾಖಲೆ ಕೊಡದೆ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಅಸಹಾಕಾರ ವ್ಯಕ್ತಪಡಿಸೋದಾಗಿ ಮುಖಂಡರು ಎಚ್ಚರಿಸಿದರು. ಕೇಂದ್ರ ಸರ್ಕಾರದ ಪೌರತ್ವ ಮಸೂದೆ ವಿರುದ್ಧ ದೇಶಾದ್ಯಂತ ಅಸಹಾಕಾರ ಚಳುವಳಿ ನಡೆಸೋದಾಗಿ ಮಾರುತಿ ಮಾನ್ಪಡೆ ಎಚ್ಚರಿಕೆ ನೀಡಿದರು.

ಪೊಲೀಸರೊಂದಿಗೆ ಮಾತಿನ ಚಕಮಕಿ….
ಅಸಹಾಕಾರ ಚಳುವಳಿ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಕೇವಲ ಪುತ್ಥಳಿಗೆ ಮಾಲಾರ್ಪಣೆ ಮಾಡೋದಾಗಿ ಹೇಳಿ, ಪ್ರತಿಭಟನೆ ಮಾಡುತ್ತಿದ್ದೀರಿ ಎಂದು ಸಿಪಿಐ ಶಕೀಲ್ ಅಂಗಡಿ ಆಕ್ಷೇಪಿಸಿದರು. ನಾವು ಘೋಷಣೆಯನ್ನಷ್ಟೇ ಕೂಗುತ್ತಿದ್ದೇವೆ ಎಂದ ಮಾರುತಿ ಮಾನ್ಪಡೆ, ಅದೇನು ಮಾಡಿಕೊಳ್ಳುತ್ತಿಯೋ ಮಾಡಿಕೋ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಅಧಿಕಾರಿ ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ಹೆಚ್ಚಾಯಿತು. ನಂತರ ಪೊಲೀಸರು ಮೌನಕ್ಕೆ ಶರಣಾದರು. ಕೆಲ ಕಾಲ ಕೇಂದ್ರದ ವಿರುದ್ಧ ಘೋಷಣೆ ಕೂಗಿದ ಹೋರಾಟಗಾರರು, ನಂತರ ಅಲ್ಲಿಂದ ಹೊರಟು ಹೋದರು.

ascript' src="https://ensuddi.com/wp-content/themes/colormag/js/fitvids/jquery.fitvids.js?ver=20150311&189db0&189db0">