ಕೊರೊನ ಬಿಕ್ಕಟ್ಟು: ಮಕ್ಕಳಿಗೆ ಕೈತೊಳೆಯುವ ಪಾಠ ಮಾಡುವ ಚಿತ್ರ ಪುಸ್ತಕ ಮಾರಾಟದಲ್ಲಿ 2000% ಏರಿಕೆ

ಕೊರೊನ ವೈರಸ್ ನನ್ನು ಸದ್ಯಕ್ಕೆ ಹಿಮ್ಮೆಟ್ಟುವ ಪರಿಣಾಮಕಾರಿ ತಂತ್ರಗಳು, ಗುಂಪು ಸೇರದೆ ಇರುವುದು, ಸಾಮಾಜಿಕ ಅಂತರ ಕಾಪಾಡುವುದು ಮತ್ತು ಆಗಾಗ ಸೋಪಿನಿಂದ ಕೈತೊಳೆಯುವುದು ಎಂದು ವಿಶ್ವ ಆರೋಗ್ಯ ಸಂಸ್ಥೆಯಿಂದ ಹಿಡಿದು ವಿವಿಧ ದೇಶಗಳ, ರಾಜ್ಯಗಳ ಆಡಳಿತಗಳು ನಾಗರಿಕರಿಗೆ ಪದೇ ಪದೇ ಪ್ರಸಾರ ಮಾಡಿ ತಿಳಿಹೇಳುತ್ತಿವೆ.

ಇಂತಹ ಸಮಯದಲ್ಲಿ ಮಕ್ಕಳಿಗೆ ಪದೇ ಪದೇ ಕೈತೊಳೆಯುವಂತೆ ಮಕ್ಕಳಿಗೆ ತಿಳಿಹೇಳುವುದು ಅತಿ ಕಷ್ಟದ ಕೆಲಸ. ಈಗ ಇದಕ್ಕೆ ಸಹಯಾವಾಗುವಂತಹ ಹಿಂದೆಯೇ ಬರೆದಿದ್ದ ಇಂಗ್ಲಿಶ್ ಚಿತ್ರಪುಸ್ತಕ ಈಗ ಇಂಗ್ಲೆಂಡ್ ನಲ್ಲಿ ದಾಖಲೆ ಮಾರಾಟ ಕಾಣುತ್ತಿದೆಯಂತೆ.

ಟೋನಿ ರಾಸ್ ಅವರ 2011ರ  “ಐ ಡೋಂಟ್ ವಾಂಟ್ ಟು ವಾಶ್ ಮೈ ಹ್ಯಾಂಡ್ಸ್” (ನನಗೆ ಕೈತೊಳೆಯಲು ಇಷ್ಟ ಇಲ್ಲ) ಮಕ್ಕಳ ಚಿತ್ರಪುಸ್ತಕ ಫೆಬ್ರವರಿ ತಿಂಗಳಲ್ಲಿ 2000% ಹೆಚ್ಚು ಮಾರಾಟ ಕಂಡಿದೆಯಂತೆ. ಹೊರಗೆ ಆಟ ಆಡಿಕೊಂಡು ಬಂದು, ನಾಯಿಯ ಜೊತೆಗೆ ಆಟ ಆಡಿ, ಸೀನಿದ ನಂತರ ರಾಜಕುಮಾರರಿಗೆ ಕೈತೊಳೆಯಲು ಪುಸಲಾಯಿಸುವ ಕಥೆ ಇರುವ ಚಿತ್ರಪುಸ್ತಕ ಇದು.

ಶಾಲೆಗಳಿಗೆ ರಜೆ ಇದ್ದು, ಮಕ್ಕಳೆಲ್ಲಾ ಮನೆಯಲ್ಲಿ ಕಾಲ ಕಳೆಯುವ ಪರಿಸ್ಥಿತಿಯಲ್ಲಿ ಒಳ್ಳೆಯ ಕಥೆಗಳನ್ನು ತಿಳಿಹೇಳುವ ಪುಸ್ತಕಗಳನ್ನು ಮಕ್ಕಳಿಗೆ ಓದಿಸುವ ಅಗತ್ಯ ಪೋಷಕರಿಗೆ ಈಗ ಬಂದೊದಗಿದೆ.