ಎಗ್ಗಿಲ್ಲದ ತಂಬಾಕು ಉತ್ಪನ್ನಗಳ ಮಾರಾಟ: ಹೆಚ್ಚುತ್ತಿರುವ ಕ್ಯಾನ್ಸರ್ ರೋಗಿಗಳ ಸಂಖ್ಯೆ

ಬಾಗಲಕೋಟೆ ಜಿಲ್ಲೆಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ರೂ ಆರೋಗ್ಯ ಇಲಾಖೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗಿರೋದು ಆತಂಕ ಸೃಷ್ಟಿಸಿದೆ.. ಸಾರ್ವಜನಿಕ ಸ್ಥಳಗಳಲ್ಲಿ ಗುಟ್ಕಾ,ಮಾವಾ ಸೇರಿದಂತೆ ತಂಬಾಕು ಉತ್ಪನ್ನಗಳ ಮಾರಾಟ ಕಾನೂನು ಮೀರಿ ನಡೆಯುತ್ತಿದೆ..ಶಾಲಾ ಕೊಠಡಿ,ಸರ್ಕಾರಿ ಕಚೇರಿಗಳ ಆವರಣಕ್ಕೆ ಹೊಂದಿಕೊಂಡಿರೋ ಅಂಗಡಿಗಳಲ್ಲಿ ರಾಜಾರೋಷವಾಗಿ ತಂಬಾಕು ಉತ್ಪನ್ನಗಳು ಮಾರಾಟ ಮಾಡಲಾಗ್ತಿದೆ..

ಹೌದು…. ಬಾಗಲಕೋಟೆ ಜಿಲ್ಲೆಯ ಜನ್ರಿಗೆ ಇದೊಂದು ಶಾಕಿಂಗ್ ನ್ಯೂಸ್..ಯಾಕಂದ್ರೆ ಜಿಲ್ಲೆಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಎಗ್ಗಿಲ್ಲದೆ ನಡೆಯುತ್ತಿರೋದ್ರಿಂದ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ.ಬಾಗಲಕೋಟೆ ತಂಬಾಕು ನಿಯಂತ್ರಣ ಕೋಶ ಸರ್ಕಾರಕ್ಕೆ ಸಲ್ಲಿಸಿದ ಅಂಕಿಸಂಖ್ಯೆ ಪ್ರಕಾರ 2018ರ ಎಪ್ರಿಲ್ ನಿಂದ ಡಿಸೆಂಬರ್ ವರೆಗೆ ಅಂದ್ರೆ 9ತಿಂಗಳ ವರದಿ ಪ್ರಕಾರ ಬಾಯಿ ಕ್ಯಾನ್ಸರ್-52,ಎದೆ(ಸ್ತನ) ಕ್ಯಾನ್ಸರ್-06, ಗರ್ಭ ಕೋಶದ ಕ್ಯಾನ್ಸರ್-08,ಇತರೆ ಕ್ಯಾನ್ಸರ್-89 ಇದ್ರೆ,ಅದೇ 2019 ಎಪ್ರಿಲ್ ನಿಂದ , ಡಿಸೆಂಬರ್ ವರೆಗೆ 9ತಿಂಗಳಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ.9ತಿಂಗಳ ವರದಿ ಹೋಲಿಕೆ ಮಾಡಿ ನೋಡಿದಲ್ಲಿ ಕಳೆದ 2018ರಕ್ಕಿಂತ 2019ರಲ್ಲಿ ಬರೋಬ್ಬರಿ 243 ಕ್ಯಾನ್ಸರ್ ರೋಗಿಗಳ ಸಂಖ್ಯೆ ಏರಿಕೆಯಾಗಿದೆ.

2019ರ ಎಪ್ರಿಲ್ ನಿಂದ ಡಿಸೆಂಬರ್ ವರೆಗೆ ಬಾಯಿ ಕ್ಯಾನ್ಸರ್-106,ಎದೆ(ಸ್ತನ) ಕ್ಯಾನ್ಸರ್-54,ಗರ್ಭ ಕೋಶದ ಕ್ಯಾನ್ಸರ್-53,ಹಾಗೂ ಇತರೆ ಕ್ಯಾನ್ಸರ್-185 ಸೇರಿ ಒಟ್ಟು -398 ಕ್ಯಾನ್ಸರ್ ರೋಗಿಗಳ ಪತ್ತೆಯಾಗಿದೆ.ಇನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆಂದು ಬರೋ ರೋಗಿಗಳಲ್ಲಿ ಪ್ರತಿತಿಂಗಳು ಕನಿಷ್ಠ ೬ರೋಗಿಗಳಲ್ಲಿ ಕ್ಯಾನ್ಸರ್ ಪತ್ತೆಯಾಗುತ್ತಿದೆ.ಜೊತೆಗೆ ಶಾಲೆ, ಸರ್ಕಾರಿ ಕಚೇರಿ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿನ ಅಂಗಡಿಗಳಲ್ಲಿ ಗುಟ್ಕಾ ಚೀಟುಗಳನ್ನು ಜೋತು ಹಾಕಿ ರಾಜಾರೋಷವಾಗಿ ಮಾರಾಟ ಮಾಡಲಾಗುತ್ತಿದೆ.ತಂಬಾಕು ನಿಯಂತ್ರಣ ಕಾಯ್ದೆ ಪ್ರಕಾರ ಶಾಲಾವರಣದ ೧೦೦ಮೀಟರ್ ನೊಳಗೆ ತಂಬಾಕು ಉತ್ಪನ್ನಗಳನ್ನು ಮಾರಾಟ,ಹಾಗೂ ಅಂಗಡಿಗಳಲ್ಲಿ ಗುಟ್ಕಾ ಚೀಟುಗಳನ್ನು ಜೋತು ಹಾಕಬಾರದಂತಿದೆ.ಇನ್ನು ಅಂಗಡಿಯಲ್ಲಿ ತಂಬಾಕು ಸೇವನೆಯಿಂದ ಕ್ಯಾನ್ಸರ್ ಬರುತ್ತೆ ಎಂದು ನಾಮಫಲಕಗಳನ್ನು ಹಾಕಿಲ್ಲ‌. ಹೀಗಾಗಿ ಬಾಗಲಕೋಟೆ ಜಿಲ್ಲೆಯಲ್ಲಿ ತಂಬಾಕು ನಿಯಂತ್ರಣ ಕಾಯ್ದೆ ನಿಯಮಗಳನ್ನು ಗಾಳಿಗೆ ತೂರಿ ಎಗ್ಗಿಲ್ಲದೆ ಮಾರಾಟ ಮಾಡಲಾಗುತ್ತಿದೆ..ತಂಬಾಕು ಉತ್ಪನ್ನಗಳು ಜನ್ರಿಗೆ ಸುಲಭವಾಗಿ ದೊರೆಯೋದ್ರಿಂದ ವ್ಯಸನಿಗಳ ಸಂಖ್ಯೆಯೂ ಹೆಚ್ಚಾಗಿ, ಕ್ಯಾನ್ಸರ್ ನಂತಹ ಮಾರಕ ರೋಗಗಳಿಗೆ ತುತ್ತಾಗುತ್ತಿದ್ದಾರೆ.

ಇನ್ನು ತಂಬಾಕು ನಿಯಂತ್ರಣ ಕೋಶದ ಅಧಿಕಾರಿಗಳು ಓಪನ್ ಆಗಿ ಗುಟ್ಕಾ,ಮಾವಾ ಮಾರಾಟ ಮಾಡ್ತಿರೋ ಅಂಗಡಿಗಳ ಮೇಲೆ ದಾಳಿ ಮಾಡಿ ನಿಯಂತ್ರಣ ಹಾಕದೇ ಕೈಕಟ್ಟಿ ಕುಳಿತ್ತಿದ್ದಾರೆ ಅನ್ನೋ ಆರೋಪ ಕೇಳಿಬರುತ್ತಿದೆ.ಶಾಲೆ, ಸಾರ್ವಜನಿಕ ಸ್ಥಳಗಳಲ್ಲಿ ಸುಲಭವಾಗಿ ದೊರೆಯುವ ಗುಟ್ಕಾ,ಮಾವಾ,ಇದ್ರಿಂದ ಕ್ಯಾನ್ಸರ್ ಬರುತ್ತೆ ಅನ್ನೋ ನಾಮಫಲಕ, ಜೊತೆಗೆ ಅಕ್ರಮವಾಗಿ ಬಾಗಲಕೋಟೆ ನಗರದ ಕೆಲವೆಡೆ ಮನೆಯಲ್ಲಿ ತಯಾರಿಸಿ ಗೌಪ್ಯವಾಗಿ , ಜೊತೆಗೆ ಪಂಕಾ ಮಸೀದಿ ಬಳಿ ಅಂಗಡಿಯಲ್ಲಿ ಮಾವಾವನ್ನು ಪೋಲಿಸರ ಕಣ್ಣೆದುರಲ್ಲೆ ಮಾರಾಟವಾಗ್ತಿದೆ.ಬಾಗಲಕೋಟೆ ನಗರದ ಪಂಕಾ ಮಸೀದಿ ಬಳಿ ಅಂಗಡಿಯಲ್ಲಿ ಮಾವಾ ಮಾರಾಟ ವಹಿವಾಟು ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಅಂಗಡಿಯವನು ,ಮಾವಾ ಖಾಲಿಯಾಗಿದೆ,ಮನೆಗೆ ತರಲಿಕ್ಕೆ ಹೋಗಿದ್ದಾರೆ,10ನಿಮಿಷ ಬಿಟ್ಟು ಬನ್ನಿ ಎಂದಿದ್ದಲ್ಲದೆ, ಪೊಲೀಸರು ಇದ್ದಾರೆ ಅಂತ ಕೇಳಿದ್ರೆ ಪೊಲೀಸರ ಭಯವಿಲ್ಲದೆ ಮಾವಾ ಮಾರಾಟ ಮಾಡೋದು ಕಂಡುಬಂದಿದೆ. ಜಿಲ್ಲಾಡಳಿತ , ಆರೋಗ್ಯ ಇಲಾಖೆ ಅಧಿಕಾರಿಗಳು ರಾಜಾರೋಷವಾಗಿ ಗುಟ್ಕಾ,ಮಾವಾ ಮಾರಾಟಕ್ಕೆ ಕಡಿವಾಣ ಹಾಕ್ಬೇಕೆಂದು ಸ್ಥಳೀಯರು ಆಗ್ರಹಿಸ್ತಿದ್ದಾರೆ..

ಒಟ್ನಲ್ಲಿ, ಬಾಗಲಕೋಟೆ ಜಿಲ್ಲೆಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ರಾಜಾರೋಷವಾಗಿ ನಡೆಯುತ್ತಿದ್ರೂ ಹೇಳೋರಿಲ್ಲ,ಕೇಳೊರಿಲ್ಲ ಅನ್ನೋ ಪರಿಸ್ಥಿತಿಯಿದೆ..ಮಾರಕ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರೋದ್ರಿಂದ ಸಾರ್ವಜನಿಕರು ಭಯಪಡುವಂತಾಗಿದೆ.ಇನ್ಮೇಲಾದರೂ ಆರೋಗ್ಯ ಇಲಾಖೆ ಅಧಿಕಾರಿಗಳು ರಾಜಾರೋಷವಾಗಿ ಗುಟ್ಕಾ,ಮಾವಾ ಮಾರಾಟದ ಅಂಗಡಿಗಳ ಮೇಲೆ ದಾಳಿ ಮಾಡಿ ಕ್ರಮಕೈಗೊಳ್ತಾರಾ ಅಂತ ಕಾದುನೋಡಬೇಕಿದೆ.