ಆಗಸ್ಟಾ ಕಾಪ್ಟರ್ ಹಗರಣದ ಆರೋಪಿ ಸಕ್ಸೇನಾ,ತಲ್ವಾರ್ ಯುಎಇನಿಂದ ಭಾರತಕ್ಕೆ ಗಡೀಪಾರು

ಯುಪಿಎ ಅವಧಿಯ ಆಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣದ ತನಿಖೆಯಲ್ಲಿ ತನಿಖಾ ಸಂಸ್ಥೆಗಳಿಗೆ ಮಹತ್ತರ ಗೆಲುವು ದೊರೆತಿದೆ. ಈ ಹಗರಣದ ಸಹ ಆರೋಪಿಯಾಗಿರುವ ದುಬೈ ಮೂಲದ ಉದ್ಯಮಿ ರಾಜೀವ್ ಸಕ್ಸೇನಾನನ್ನು ಯುಎಇ ಗಡೀಪಾರುಗೊಳಿಸಿದೆ. ಇದೇ ವೇಳೆ, ಜಾರಿ ನಿರ್ದೇಶನಾಲಯಕ್ಕೆ ಬೇಕಾಗಿದ್ದ ಇನ್ನೊಬ್ಬ ಕಾರ್ಪೊರೇಟ್ ವೈಮಾನಿಕ ಕ್ಷೇತ್ರದ ಲಾಬಿಗಾರ ದೀಪಕ್ ತಲ್ವಾರ್ ಅನ್ನು ಗಡೀಪಾರು ಮಾಡಲಾಗಿದೆ.
ತಿಂಗಳ ಹಿಂದಷ್ಟೇ ಕಾಪ್ಟರ್ ಹಗರಣದ ಪ್ರಮುಖ ಆರೋಪಿ ಮಧ್ಯವರ್ತಿ ಕ್ರಿಶ್ಟಿಯಾನ್ ಮೈಕೆಲ್‌ನನ್ನು ಯುಎಇ ಗಡೀಪಾರುಗೊಳಿಸಿತ್ತು.
ಈಗಾಗಲೇ ರಾಜೀವ್ ಸಕ್ಸೇನಾನನ್ನು ದುಬೈನಲ್ಲಿನ ಆತನ ನಿವಾಸದಿಂದ ಬುಧವಾರವೇ ಜಾರಿ ನಿರ್ದೇಶನಾಲಯ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ವಿಶೇಷ ವಿಮಾನದಲ್ಲಿ ಭಾರತಕ್ಕೆ ಕರೆ ತಂದಿದ್ದಾರೆ. ಗುರುವಾರ ದೀಪಕ್ ತಲ್ವಾರ್‌ನನ್ನೂ ಕರೆ ತರುವ ಸಾಧ್ಯತೆಯಿದೆ.
ಸಕ್ಸೇನಾನ ಪತ್ನಿಯನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ 2017ರಲ್ಲೇ ಬಂಧಿಸಲಾಗಿತ್ತು. ಆಕೆಯೀಗ ಜಾಮೀನಿನಡಿಯಲ್ಲಿ ಬಿಡುಗಡೆಗೊಂಡಿದ್ದಾಳೆ. ಸಕ್ಸೇನಾ ದುಬೈನಲ್ಲಿ ತಲೆಮರೆಸಿಕೊಂಡಿದ್ದ. 3,600 ಕೋಟಿ ರೂ. ಹಗರಣದಲ್ಲಿ ಈತನ ಪಾತ್ರದ ಕುರಿತು ತನಿಖೆ ನಡೆಸಿದ್ದ ಜಾರಿ ನಿರ್ದೇಶನಾಲಯ ಜಾಮೀನುರಹಿತ ಬಂಧನ ವಾರಂಟ್ ಹೊರಡಿಸಿತ್ತು. ಇದನ್ನು ಈಗ ಯುಎಇ ಮಾನ್ಯ ಮಾಡಿದೆ.
ಭಾರತಕ್ಕೆ ಬಂದಿರುವ ಇನ್ನೊಬ್ಬ ಆರೋಪಿ ದೀಪಕ್ ಇಡಿ ಹಾಗೂ ಸಿಬಿಐ ಎರಡಕ್ಕೂ ಬೇಕಾಗಿದ್ದು, ಸಿಎಸ್‌ಆರ್‌ನ ಭಾಗವಾಗಿ ವಿದೇಶಿ ನಿಧಿ ಹೆಸರಲ್ಲಿ 90 ಕೋಟಿ ರೂ. ದುರ್ಬಳಕೆ ಮಾಡಿದ ಆರೋಪವಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಕೆಲವು ವೈಮಾನಿಕ ಒಪ್ಪಂದಗಳಲ್ಲಿ ಈತನ ಪಾತ್ರವಿದೆಯೇ ಎಂದೂ ತನಿಖೆ ನಡೆಸಲಾಗುತ್ತಿದೆ.

Leave a Reply