ಹುಬ್ಬಳ್ಳಿಗೆ ‘ಶಾ’ ಆಗಮಿಸುವ ಹಿನ್ನಲೆ : ‘ಗೋಬ್ಯಾಕ್ ಅಮಿತ್ ಶಾ’ ಪ್ರತಿಭಟನೆ ಆಯೋಜನೆ

ಜನವರಿ 18ರಂದು ಹುಬ್ಬಳ್ಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಆಗಮಿಸುತ್ತಿರುವ ಹಿನ್ನಲೆ ಗೋಬ್ಯಾಕ್ ಅಮಿತ್ ಶಾ ಪ್ರತಿಭಟನೆ ಆಯೋಜನೆ ಮಾಡಲಾಗಿದೆ ಎಂದು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಪಾಟೀಲ್ ಹೇಳಿದ್ದಾರೆ.

ಅಮಿತ್ ಷಾ ಆಗಮನ ವಿರೋಧಿಸಿ ಧಾರವಾಡ ಜಿಲ್ಲಾ ಕಾಂಗ್ರೆಸ್‌ನಿಂದ ಪ್ರತಿಭಟನೆ ನಡೆಸಲಾಗುವುದು.  ಮಹದಾಯಿ ಯೋಜನೆ ಜಾರಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ರಾಜ್ಯದ ನೆರೆ ಪೀಡಿತ ಪ್ರದೇಶಗಳಿಗೆ ಸಮರ್ಪಕ ಅನುದಾನ ನೀಡಬೇಕು. ದುರುದ್ದೇಶದಿಂದ ಸಿಎಎ ಹಾಗೂ ಎನ್‌ಆರ್‌ಸಿ ಜಾರಿಗೆ ತರಲಾಗುತ್ತಿದೆ. ಅಲ್ಪಸಂಖ್ಯಾತರನ್ನು ಬಲಿ‌ ಕೊಡುವುದು.

ನರೇಂದ್ರ ಮೋದಿ, ಅಮಿತ್ ಷಾ ಹಿಡನ್ ಅಜೆಂಡಾ ಇದು. ಯಾರು ಬಿಜೆಪಿಗೆ ಮತ ಹಾಕುವುದಿಲ್ಲ ಅಂತಹವರನ್ನು ಮುಗಿಸುವ ತಂತ್ರ ನಡೆಸುತ್ತಿದ್ದಾರೆ. ದೇಶದಲ್ಲಿ ಆರ್ಥಿಕ ಸ್ಥಿತಿಗತಿ ತೀರಾ ಚಿಂತಾಜನಕವಾಗಿದೆ. ಕೇಂದ್ರ ಸರ್ಕಾರ ದೇಶದ, ರಾಜ್ಯದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಹುಡುಕಲಿ. ನಾಳೆಯಿಂದ ಡೋಂಟ್ ಕಮ್ ಅಮೀತ್ ಶಾ ಎಂಬ ಹ್ಯಾಶ್ ಟ್ಯಾಗ್ ಪ್ರತಿಭಟನೆ ಆರಂಭವಾಗಲಿದೆ ಎಂದು ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಬಿಜೆಪಿ ವಿಭಾಗ ಮಟ್ಟದ ಸಭೆಯಲ್ಲಿ ದೇಶಪಾಂಡೆ ನಗರದ ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.  ಕೇಂದ್ರ ಗೃಹ ಸಚಿವ ಅಮಿತ್ ಷಾ ಜನೆವರಿ 18ರಂದು ಹುಬ್ಬಳ್ಳಿಗೆ ಆಗಮಿಸುತ್ತಿರುವ ಹಿನ್ನೆಲೆ ಬಿಜೆಪಿ ಮುಖಂಡರಿಂದ ಪೂರ್ವಭಾವಿ ಸಿದ್ಧತೆಗಳ ಕುರಿತು ಚರ್ಚೆ‌ ಮಾಡಲಾಗುತ್ತಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಶಾಸಕರಾದ ಅರವಿಂದ ಬೆಲ್ಲದ್, ಸಿ.ಎಮ್. ನಿಂಬಣ್ಣವರ್, ಶಂಕರ್ ಪಾಟೀಲ್ ಮುನೇನಕೊಪ್ಪ, ಎಸ್‌.ವಿ. ಸಂಕನೂರ್, ಪ್ರದೀಪ್ ಶೆಟ್ಟರ್ ಉಪಸ್ಥಿತರಾಗಿದ್ದಾರೆ.

ಗೋಬ್ಯಾಕ್ ಅಮಿತ್ ಶಾ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಜನವರಿ 18ರಂದು ಅಮಿತ್ ಷಾ ಅವರು ಹುಬ್ಬಳ್ಳಿಗೆ ಆಗಮಿಸುತ್ತಿದ್ದಾರೆ. ಕಾಂಗ್ರೆಸ್‌ನವರು ಸಿಎಎ, ಎನ್‌ಆರ್‌ಸಿ ಬಗ್ಗೆ ಅಪಪ್ರಚಾರ ಮಾಡಿದ್ದಾರೆ. ದೇಶದ ಮೂರು ಕೋಟಿ ಮನೆಗಳನ್ನು ತಲುಪಿ ಸಿಎಎ ಕುರಿತು ಜನಜಾಗೃತಿ ಮೂಡಿಸಲಾಗುತ್ತಿದೆ. ಅಮಿತ್ ಷಾ ಅವರು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

ನಾವು ಶಾಂತಿಯುತವಾಗಿ ಜನಜಾಗೃತಿ ಮಾಡುತ್ತಿದ್ದೇವೆ‌. ಕೆಲವರು ಗಲಾಟೆ ಮಾಡಿ ಜನರ ದಾರಿ ತಪ್ಪಿಸುತ್ತಿದ್ದಾರೆ‌. ಕಾಂಗ್ರೆಸ್‌ನವರಿಗೆ ಜನರೇ ಗೋಬ್ಯಾಕ್ ಅಂತಾ ಹೇಳಿ ಮನೆಗೆ ಕಳಿಸಿದ್ದಾರೆ. ಕಾಂಗ್ರೆಸ್ ವಿರೋಧ ಪಕ್ಷವಾಗಿ ರಚನಾತ್ಮಕ ಹೋರಾಟ ಮಾಡಲಿ. ಅದನ್ನು ಬಿಟ್ಟು ವಿರೋಧಕ್ಕಾಗಿ ವಿರೋಧ ಮಾಡುವ ಪ್ರವೃತ್ತಿ ಕೈಬಿಡಬೇಕು.

ಸಚಿವ ಸಂಪುಟ ವಿಸ್ತರಣೆ ಕುರಿತು ಸಿಎಮ್ ಯಡಿಯೂರಪ್ಪನವರ ಅಭಿಪ್ರಾಯವೇ ನಮ್ಮ ಅಭಿಪ್ರಾಯ. ನೆರೆ ಪರಿಹಾರ, ಜಿಎಸ್‌ಟಿ ಹಣ ಹಂತಹಂತವಾಗಿ ಬಿಡುಗಡೆಯಾಗುತ್ತಿದೆ. ಸಿದ್ದರಾಮಯ್ಯ ಕೈಗೆ ಕಾಂಗ್ರೆಸ್‌ನವರು ತಾಳ, ತಮಟೆ ಏನು ಕೊಟ್ಟಿಲ್ಲ. ಹಿನ್ನೆಲೆ ಗಾಯನ ಮಾಡುವವರು ಮನೆಗೆ ಹೋಗಿದ್ದಾರೆ.
ಸಿದ್ದರಾಮಯ್ಯ ನಿಮ್ಮ ಬಳಿ ಏನೂ ಇಲ್ಲ ನಮ್ಮ ಬಗ್ಗೆ ಮಾತನಾಡಬೇಡಿ. ಸಿದ್ದರಾಮಯ್ಯ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಮಹದಾಯಿ ವಿಚಾರ ಟ್ರಿಬ್ಯುನಲ್‌ಗೆ ಹೋಗಲು ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಕಾರಣ ಎಂದು ಹರಿಹಾಯ್ದಿದ್ದಾರೆ.

ಹುಬ್ಬಳ್ಳಿಯಲ್ಲಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದು ಹೀಗೆ… ಅಮಿತ್ ಷಾ ನೇತ್ರತ್ವದಲ್ಲಿ ನಡೆದ ಎಲ್ಲಾ ಸಭೆಗಳು ಯಶಸ್ವಿಯಾಗಿವೆ.
ಹುಬ್ಬಳ್ಳಿಯಲ್ಲಿ ಜನೆವರಿ 18ರಂದು ನಡೆಯುವ ಸಿಎಎ ಜನಜಾಗೃತಿ ಸಭೆಯಲ್ಲಿ ಲಕ್ಷಾಂತರ ಜನರು ಭಾಗವಹಿಸಲಿದ್ದಾರೆ. ಕಾಂಗ್ರೆಸ್‌ನವರಿಗೆ ಬಿಜೆಪಿಯನ್ನು ಎದುರಿಸಲು ಯಾವುದೇ ವಿಷಯಗಳಿಲ್ಲ‌. ಮೋದಿಯವರ ವಿರುದ್ಧ, ಅಮಿತ್ ಷಾ ವಿರುದ್ಧ ಮಾತನಾಡಲು ಏನೂ ವಿಷಯಗಳಿಲ್ಲ. ಹೀಗಾಗಿ ಅಲ್ಪಸಂಖ್ಯಾತರನ್ನು ದಾರಿ ತಪ್ಪಿಸುತ್ತಿದ್ದಾರೆ. ದೇಶದಲ್ಲಿ ಉದ್ವಿಗ್ನತೆ, ಅಶಾಂತಿ ಮೂಡಿಸುತ್ತಿದ್ದಾರೆ. ಸಿಎಎ ಕಾಯ್ದೆಯಿಂದ ಯಾರನ್ನೂ ದೇಶದಿಂದ ಹೊರಗೆ ಹಾಕಲ್ಲ. ದೇಶದ ಹಿತದೃಷ್ಟಿಯಿಂದ ಕಾಂಗ್ರೆಸ್‌ನವರು ಈ ಕಾಯ್ದೆಗೆ ಬೆಂಬಲ ಕೊಡಬೇಕು.

ಜಾತಿ, ಧರ್ಮದ ಹೆಸರಲ್ಲಿ ರಾಜಕೀಯ ಮಾಡುವವರು ಕಾಂಗ್ರೆಸ್‌ನವರು. ಡಿ.ಕೆ. ಶಿವಕುಮಾರ್‌ಗೆ ಏಸು ಪ್ರತಿಮೆ ಪ್ರತಿಷ್ಠಾಪಣೆ ಮಾಡುವುದು ಯಾಕೆ ಬೇಕಾಗಿತ್ತೊ ಗೊತ್ತಿಲ್ಲ. ಸರ್ಕಾರದ ಜಾಗದಲ್ಲಿ ಏಸುಕ್ರಿಸ್ತನ ಮೂರ್ತಿ ಪ್ರತಿಷ್ಠಾಪಿಸುವ ವಿಷಯವನ್ನು ಡಿ.ಕೆ. ಶಿವಕುಮಾರ್ ಪ್ರತಿಷ್ಠೆ ಮಾಡಿಕೊಂಡಿದ್ದಾರೆ‌. ಸೌಹಾರ್ಧ ವಾತಾವರಣ ನಿರ್ಮಾಣ ಮಾಡುವ ಜವಾಬ್ದಾರಿ ಡಿ.ಕೆ. ಶಿವಕುಮಾರ್ ಕೈಯಲ್ಲಿದೆ. ಸಮಾಜದಲ್ಲಿ ಸಂಘರ್ಷ ಮೂಡಿಸುವ ಕೆಲಸ ಮಾಡಬಾರದು. ಡಿ.ಕೆ. ಶಿವಕುಮಾರ್ ತಮ್ಮ ಖಾಸಗಿ ಜಾಗದಲ್ಲಿ ಏಸು ಕ್ರಿಸ್ತನ ಮೂರ್ತಿ ಪ್ರತಿಷ್ಠಾಪಿಸಲಿ ಎಂದರು.

ಜಮೀರ್ ಅಹ್ಮದ್‌ಗೆ ಮಾಡಲು ಏನೂ ಕೆಲಸ ಉಳಿದಿಲ್ಲ. ಹೀಗಾಗಿ ಸೋಮಶೇಖರ್ ರೆಡ್ಡಿಯವರ ಮನೆಮುಂದೆ ಧರಣಿ ಮಾಡಲು ಹೋಗಿದ್ದಾರೆ. ಯಡಿಯೂರಪ್ಪ ಸಿಎಮ್ ಆದರೆ ಅವರ ಮನೆಯ ಮುಂದೆ ವಾಚ್‌ಮನ್ ಕೆಲಸ ಮಾಡುತ್ತೇನೆ ಅಂದಿದ್ದರು. ಮೊದಲು ಆ ಕೆಲಸ ಮಾಡಲಿ. ಆಮೇಲೆ ಸೋಮಶೇಖರ್ ರೆಡ್ಡಿಯವರ ಮನೆ ಮುಂದೆ ಧರಣಿ ಮಾಡಲಿ ಎಂದರು.