ಶಿವರಾತ್ರಿ ಶಿವನಿಗೆ ಮಾಂಸದ ನೈವೇದ್ಯ : ಪ್ರಸಾದದ ರೀತಿಯಲ್ಲಿ ಮಾಂಸದೂಟ ಸವಿದ ಭಕ್ತರು

ನಾಡಿನೆಲ್ಲಡೆ ಮಹಾ ಶಿವರಾತ್ರಿ ಹಬ್ಬವನ್ನು ತುಂಬಾ ಸಂಭ್ರಮ, ಸಡಗರ, ಭಕ್ತಿಯಿಂದ ಆಚರಿಸಲಾಗುತ್ತೆ. ಅನೇಕ ಭಕ್ತರು ಉಪವಾಸ ವ್ರತ ಇದ್ದು, ರಾತ್ರಿ ಇಡೀ ಜಾಗರಣೆ ಮಾಡಿ ಹಬ್ಬವನ್ನ ಭಕ್ತಿಯಿಂದ ಆಚರಿಸುತ್ತಾರೆ. ಆದ್ರೆ ಇಲ್ಲೊಂದು ಗ್ರಾಮದಲ್ಲಿ ಶಿವರಾತ್ರಿ ಹಬ್ಬವನ್ನ ವಿಭಿನ್ನವಾಗಿ ಆಚರಿಸುತ್ತಾರೆ. ಗ್ರಾಮದಲ್ಲಿರೋ ದೇವಸ್ಥಾನದ ಆವಣರದಲ್ಲಿ ಮಾಂಸದ ಅಡುಗೆಮಾಡಿ, ದೇವರಿಗೆ ಮಾಂಸದ ನೈವೇದ್ಯವನಿಟ್ಟು ಸಾವಿರಾರು ಜನ ಭಕ್ತರು ಒಟ್ಟಿಗೇ ಕುಳಿತು ಮಾಂಸದೂಟವನ್ನು ಪ್ರಸಾದದ ರೀತಿಯಲ್ಲಿ ಸವಿದು ಮಹಾ ಶಿವರಾತ್ರಿ ಹಬ್ಬವನ್ನ ಆಚರಿಸುತ್ತಾರೆ.

ಹೌದು, ನಾಡಿನೆಲ್ಲಡೆ ಮಹಾ ಶಿವರಾತ್ರಿ ಹಬ್ಬವನ್ನ ಉಪವಾಸ ಜಾಗರಣೆ ಮೂಲಕ ಭಕ್ತಿಯಿಂದ ಆಚರಿಸಲಾಗುತ್ತೆ. ಆದ್ರೆ ಇಲ್ಲೊಂದು ಗ್ರಾಮದಲ್ಲಿ ಮಹಾಶಿವರಾತ್ರಿ ಹಬ್ಬವನ್ನ ವಿಭಿನ್ನವಾಗಿ ಆಚರಿಸುತ್ತಿದ್ದಾರೆ. ಹಬ್ಬದ ದಿನದಂದೆ ದೇವಸ್ಥಾನದ ಭಕ್ತರೆಲ್ಲ ಒಟ್ಟಿಗೆ ಸೇರಿ ಮಾಂಸದೂಟ ತಯಾರು ಮಾಡಿ, ದೇವಸ್ಥಾನದ ಬಳಿಯೇ ಪ್ರಸಾದವನ್ನ ಸವಿದು ಹಬ್ಬವನ್ನ ಆಚರಿಸುವುದು ವಾಡಿಕೆ. ಅಂದಹಾಗೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಮಂಗಾಡಹಳ್ಳಿ ಗ್ರಾಮದಲ್ಲಿ ಈ ರೀತಿ ವಿಭಿನ್ನವಾಗಿ ಶಿವರಾತ್ರಿ ಹಬ್ಬವನ್ನ ಆಚರಿಸಲಾಗಿದೆ. ಗ್ರಾಮದ ಸಿದ್ದಾಪ್ಪಜಿ ದೇವಸ್ಥಾನದ ಬಳಿ ಈ ಭಕ್ತರೆಲ್ಲರೂ ಸೇರಿ ಕುರಿ, ಕೋಳಿ, ತಂದು ಅಲ್ಲಿಯೇ ಅಡುಗೆಯನ್ನು ತಯಾರುಮಾಡುತ್ತಾರೆ. ನಂತ್ರ ದೇವರಿಗೆ ಪ್ರಸಾದ ಸಮರ್ಪಣೆ ಮಾಡಿ, ನಂತರ ದೇವಸ್ಥಾನದ ಮುಂಭಾಗ ಕುಳಿತು ಊಟವನ್ನು ಸೇವಿಸುತ್ತಾರೆ. ಸುಮಾರು ನೂರಾರು ಕೋಳಿಗಳನ್ನ ಹಬ್ಬಕ್ಕೆಂದು ಸಮರ್ಪಣೆ ಮಾಡುತ್ತಾರೆ. ಸಾವಿರಾರು ಭಕ್ತರು ಒಟ್ಟಿಗೆ ಕುಳಿತು ಮಾಂಸದ ಪ್ರಸಾದವನ್ನ ಸೇವಿಸುವುದು ಇಲ್ಲಿನಿ ಪ್ರತೀತಿ.

ಅಂದಹಾಗೆ ಮಂಗಾಡಹಳ್ಳಿ ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದ ಈ ಆಚರಣೆ ಮಾಡಿಕೊಂಡು ಭಕ್ತರು ಬರುತ್ತಿದ್ದಾರೆ. ಪ್ರತಿವರ್ಷ ಭಕ್ತರು ದೇವಸ್ಥಾನಕ್ಕೆ ಬಂದು ಹರಕೆ ಮಾಡಿಕೊಳ್ಳುತ್ತಾರೆ. ತಮ್ಮ ಇಷ್ಠಾರ್ಥಗಳು ನೆರೆವೇರಿದ ಬಳಿಕ ಶಿವರಾತ್ರಿ ಹಬ್ಬದ ದಿನದಂದು ತಮ್ಮ ಹರಕೆಯನ್ನು ತೀರಿಸುತ್ತಾರೆ. ಇನ್ನೂ ಕೇವಲ ಶಿವರಾತ್ರಿ ಹಬ್ಬದ ದಿನ ಮಾತ್ರವಲ್ಲದೇ, ಗೌರಿ ಗಣೇಶ ಹಬ್ಬಗಳಲ್ಲೂ ಸಹಾ ಮಾಂಸದೂಟವನ್ನ ಮಾಡಲಾಗುತ್ತದೆ. ಈ ರೀತಿಯ ವಿಭಿನ್ನ ಆಚರಣೆಗೆ ಕೇವಲ ಮಂಗಾಡಹಳ್ಳಿ ಗ್ರಾಮದ ಭಕ್ತರು ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮದ ಭಕ್ತರು ಕೂಡ ಪಾಲ್ಗೊಳ್ಳುತ್ತಾರೆ. ರಾಮನಗರ ಜಿಲ್ಲೆ ಸೇರಿದಂತೆ ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಮೂಲೆಗಳಿಂದಲೂ ಭಕ್ತರು ಆಗಮಿಸಿ ಉಘೇ ಸಿದ್ದಪ್ಪ ಎಂದು ಮಾಂಸದೂಟ ಮಾಡುತ್ತಾರೆ.

ಇನ್ನೂ ಈ ರೀತಿಯ ಆಚರಣೆ ನಿಲ್ಲಿಸಬೇಕೆಂದು ಗ್ರಾಮಸ್ಥರು ಚಿಂತನೆ ಕೂಡ ಮಾಡಿದ್ದರು. ಆದ್ರೆ ಕೆಲವರ್ಷಗಳ ಹಿಂದೆ ಶಿವರಾತ್ರಿ ದಿನದಂದು ಮಾಂಸದೂಟ ಮಾಡದೆ ಇದ್ದಿದ್ದರಿಂದ ಕೋಳಿಗಳು ದೇವಸ್ಥಾನದ ಒಳಗೆ ನುಗ್ಗಿದ್ದವಂತೆ. ಹೀಗಾಗಿ ಗ್ರಾಮಸ್ಥರು ಮತ್ತೆ ಆಚರಣೆ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಒಟ್ಟಾರೆ ಶಿವರಾತ್ರಿ ದಿನದಂದು ಭಕ್ತರು ವತ್ರ, ಉಪವಾಸದ ಜೊತೆಗೆ ಸಸ್ಯಹಾರ ಸೇವಿಸುವ ಮೂಲಕ ಹಬ್ಬ ಆಚರಣೆ ಮಾಡಿದ್ರೆ, ಮಂಗಾಡಹಳ್ಳಿ ಗ್ರಾಮದಲ್ಲಿ ಮಾತ್ರ ಮಾಂಸದೂಟವನ್ನ ಸವಿದು ಶಿವರಾತ್ರಿ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡ್ತಾರೆ.