ಬಿಜೆಪಿ ಕೋರ್ ಕಮಿಟಿಯಿಂದ ಶೋಭಾ ಕಿಕ್ ಔಟ್..!

ಪಕ್ಷದ ಪದಾಧಿಕಾರಿಗಳ ನೇಮಕದಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಅಂತ ಟೀಕೆಗೆ ಗುರಿಯಾಗಿದ್ದ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಬಿಜೆಪಿ ಕೋರ್ ಕಮಿಟಿಯಿಂದ ಕೈಬಿಡಲಾಗಿದೆ. ಯಡಿಯೂರಪ್ಪ ಆಪ್ತರಾದ ಶೋಭಾರನ್ನು ಕೋರ್ ಕಮಿಟಿಯಿಂದ ದೂರ ಇಟ್ಟಿರುವ ವರಿಷ್ಟರು 12 ಸದಸ್ಯರ ನೂತನ ಕೋರ್ ಕಮಿಟಿಯನ್ನು ರಚಿಸಿದ್ದಾರೆ. ನೂತನ ಕಮಿಟಿಯಲ್ಲಿ ಸಿ.ಎಂ. ಉದಾಸಿ, ಗೋವಿಂದ ಕಾರಜೋಳ, ಅರವಿಂದ ಲಿಂಬಾವಳಿ, ನಳಿನ್ ಕುಮಾರ್ ಕಟೀಲ್ ಅವರಿಗೆ ಅವಕಾಶ ನೀಡಲಾಗಿದೆ. ನೂತನ ಕಮಿಟಿಯಲ್ಲಿ ಯಡಿಯೂರಪ್ಪ ಆಪ್ತರಿಗೆ ಹಿನ್ನಡೆಯಾಗಿದ್ದು, ಶೋಭಾ ಕರಂದ್ಲಾಜೆ ಹಾಗೂ ರವಿಕುಮಾರ್ ರನ್ನು ಕಮಿಟಿಯಲ್ಲಿ ಸೇರಿಸುವಂತೆ ಯಡಿಯೂರಪ್ಪ ಅವರು ವರಿಷ್ಠರ ಮುಂದೆ ಮನವಿ ಮಾಡಿದ್ದಾರೆ.

yadiyurappa-shoba1

ಪಕ್ಷದ ಪದಾಧಿಕಾರಿಗಳ ನೇಮಕದಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಅಂತ ಸ್ವಪಕ್ಷೀಯರಿಂದಲೇ ಟೀಕೆಗೆ ಗುರಿಯಾಗಿದ್ದ ಸಂಸದೆ ಶೋಭಾ ಕರಂದ್ಲಾಜೆ ಅವರು ಕೋರ್ ಕಮಿಟಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಯಡಿಯೂರಪ್ಪ ಅವರು ಅಧ್ಯಕ್ಷರಾದ ನಂತರ ಪಕ್ಷದಲ್ಲಿ ಹಿಡಿತ ಸಾಧಿಸಿದ್ದ ಶೋಭಾ ಕರಂದ್ಲಾಜೆಯನ್ನು, ಪಕ್ಷದ ಪರಮೊಚ್ಛ ಸಮಿತಿಯ ಅಂತ ಕರೆಯಲ್ಪಡುವ ಕೋರ್ ಕಮಿಟಿಯಿಂದ ದೂರ ಇಡುವ ಪ್ರಯತ್ನವನ್ನು ಕೇಂದ್ರ ನಾಯಕರು ಮಾಡಿದ್ದಾರೆ. ಕೇಂದ್ರದ ವರಿಷ್ಠರು ರಚನೆ ಮಾಡಿರುವ ಕೋರ್ ಕಮಿಟಿಯಿಂದ ಶೋಭಾ ಕರಂದ್ಲಾಜೆಗೆ ಅವಕಾಶ ನೀಡದೇ ಹೊಸ ಮುಖಗಳಿಗೆ ಅವಕಾಶ ಕೊಡಲಾಗಿದೆ. ಶತಾಯಗತಾಯ ಕೋರ್ ಕಮಿಟಿಯಲ್ಲಿ ಶೋಭಾರಿಗೆ ಅವಕಾಶ ಕೊಡಿಸಲೇ ಬೇಕು ಅಂತ ಯತ್ನ ಮಾಡಿದ್ದ ಯಡಿಯೂರಪ್ಪಗೆ ವರಿಷ್ಠರ ನಿರ್ಧಾರ ನಿರಾಸೆ ತಂದಿದೆ.

yadiyurappa 1

ನೂತನ ಸಮಿತಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತಕುಮಾರ್, ಸದಾನಂದಗೌಡ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಹಾಗೂ ಮಾಜಿ ರಾಜ್ಯಾಧ್ಯಕ್ಷ ಹಾಗೂ ಲೋಕಸಭಾ ಸದಸ್ಯ ಪ್ರಲ್ಹಾದ ಜೋಶಿ ಅವರು ಮುಂದುವರಿದಿದ್ದಾರೆ. ಸಂಸದರಾದ ನಳೀನ್ ಕುಮಾರ್ ಕಟೀಲ್ , ಶಾಸಕರಾದ ಸಿ.ಟಿ.ರವಿ, ಅರವಿಂದ್ ಲಿಂಬಾವಳಿ, ಮಾಜಿ ಸಚಿವರಾದ ಸಿ.ಎಂ.ಉದಾಸಿ ಹಾಗೂ ಹಿರಿಯ ಶಾಸಕ ಗೋವಿಂದ ಕಾರಜೋಳ ಅವರು ಕೋರ್ ಕಮಿಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಯಡಿಯೂರಪ್ಪ ಅವರಿಗೆ ಪರಮಾಪ್ತರಾದ ಸಂಸದೆ ಶೋಭಾ ಕರಂದ್ಲಾಜೆ ಅವರು ಪಕ್ಷದ ಪದಾಧಿಕಾರಿಗಳ ನೇಮಕ ಹಾಗೂ ಪಕ್ಷದ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡ್ತಿದ್ದಾರೆ ಅಂತ ಆರೋಪಕ್ಕೆ ಗುರಿಯಾಗಿದ್ದರು. ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಸೇರಿದಂತೆ ಹಲವು ನಾಯಕರು ಶೋಭಾ ಮೇಲೆ ಮುನಿಸಿಕೊಂಡು ದೆಹಲಿ ನಾಯಕರಿಗೂ ದೂರು ನೀಡಿದ್ದರು. ಇದ್ರ ಬೆನ್ನಲ್ಲೇ ಬಿಡುಗಡೆಯಾಗಿರುವ ಕೋರ್ ಕಮಿಟಿಯಲ್ಲಿ ಶೋಭಾರನ್ನು ದೂರ ಇಟ್ಟಿರುವ ವರಿಷ್ಟರ ನಿರ್ಧಾರ, ಶೋಭಾ ಚಟುವಟಿಕೆಗಳಿಗೆ ಬ್ರೇಕ್ ಹಾಕಿದಂತಾಗಿದೆ.

ಕೋರ್ ಕಮಿಟಿಯಲ್ಲಿ ಸ್ಥಾನ ವಂಚಿತರಾಗಿರುವ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಪ್ರಧಾನ ಕಾರ್ಯದರ್ಶಿ ರವಿಕುಮಾರ್ ರನ್ನು ಕೋರ್ ಕಮಿಟಿಯಲ್ಲಿ ಸೇರಿಸಲು ಯಡಿಯೂರಪ್ಪ ಪ್ಲಾನ್ ಮಾಡಿದ್ದಾರೆ. ಶೋಭಾ ಮತ್ತು ರವಿಕುಮಾರ್ ರನ್ನು ಕೋರ್ ಕಮಿಟಿಯಲ್ಲಿ ಸೇರಿಸಲು ವರಿಷ್ಟರಿಗೆ ಒತ್ತಾಯ ಮಾಡಿದ್ದಾರೆ. ಈಗಿರುವ 12 ಸದಸ್ಯರ ಬಲವನ್ನು 14 ಸ್ಥಾನಕ್ಕೆ ಏರಿಕೆ ಮಾಡಬೇಕು ಅಂತ ಪಟ್ಟು ಹಿಡಿದಿದ್ದಾರೆ. ಮುಂದಿನ ಒಂದೆರಡು ದಿನಗಳಲ್ಲಿ ಪರಿಷ್ಕೃತ ಕೋರ್ ಕಮಿಟಿ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ನೂತನ ಕೋರ್ ಕಮಿಟಿಯಲ್ಲಿ ಶೋಭಾರನ್ನು ದೂರ ಇಟ್ಟರೂ, ಯಡಿಯೂರಪ್ಪ ಆಪ್ತರಿಗೆ ಅವಕಾಶ ಕೊಡಲಾಗಿದೆ. ಮಾಜಿ ಸಚಿವ ಸಿ.ಎಂ.ಉದಾಸಿ, ಅರವಿಂದ್ ಲಿಂಬಾವಳಿಗೆ ಸ್ಥಾನ ದೊರಕಿದೆ. ಅಲ್ಲದೇ ಅತೃಪ್ತರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಮಾಜಿ ಸಚಿವ ಸಿ.ಟಿ.ರವಿ, ಹಾಗೂ ತಟಸ್ಥರಾಗಿದ್ದ ಸಂಸದ ನಳೀನ್ ಕುಮಾರ್ ಕಟೀಲ್, ಗೋವಿಂದ ಕಾರಜೋಳ ಗೆ ಕೋರ್ ಕಮಿಟಿಯಲ್ಲಿ ಅವಕಾಶ ನೀಡಲಾಗಿದೆ. ಒಟ್ನಲ್ಲಿ ಕೇಸರಿ ಪಡೆಯಲ್ಲಿನ ಬಂಡಾಯದ ಚಟುವಟಿಕೆ ಶಮನವಾಗುವ ಮುನ್ನವೇ, ಶೋಭಾರನ್ನು ಕೈಬಿಟ್ಟಿರುವ ಕೋರ್ ಕಮಿಟಿ ರಚನೆಯಾಗಿರುವುದು ಪಕ್ಷದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

Comments are closed.