ಕೊರೊನ ಬಿಕ್ಕಟ್ಟು: ಮತ್ತಷ್ಟು ಅಗತ್ಯ ಕ್ರಮಗಳನ್ನು ಸೂಚಿಸಿ ಪ್ರಧಾನಿಗೆ ಪತ್ರ ಬರೆದ ಸೋನಿಯಾ ಗಾಂಧಿ

ಭಾರತದಾದ್ಯಂತ ಕೊರೊನ ಸೋಂಕಿತ ಪ್ರಕರಣಗಳು 600 ದಾಟಿದ್ದು, 13 ಜನ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಸಂಖ್ಯೆಯ ಅಂದರೆ 121 ಜನ ಸೋಂಕಿಗೆ ಗುರಿಯಾಗಿದ್ದು, ಕರ್ನಾಟಕದಲ್ಲಿ 50ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕೇರದಲ್ಲಿ ಮಹಾರಾಷ್ಟ್ರದ ನಂತರ ಅತಿ ಹೆಚ್ಚು ಅಂದರೆ 110 ಪ್ರಕರಣಗಳು ದಾಖಲಾಗಿವೆ.

ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, 21 ದಿನಗಳ ಲಾಕ್ ಡೌನ್ ಗೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ಅದೇ ಸಮಯದಲ್ಲಿ ಎದುರಾಗಬಹುದಾದ ಆರ್ಥಿಕ ಮತ್ತು ಸಾಮಾಜಿಕ ಸಂಕಷ್ಟಗಳನ್ನು ಪರಿಹರಿಸಲು ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದಾರೆ.

ಈ ಸಮಯದಲ್ಲಿ ವೈದ್ಯರ, ನರ್ಸ್ ಗಳ ಮತ್ತು ಆರೋಗ್ಯ ಸಿಬ್ಬಂದಿಗಳ ಬಗ್ಗೆ ಹೆಚ್ಚು ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಲು ಕೋರಿದ್ದಾರೆ. ಎಲ್ಲರಿಗೂ ಅಗತ್ಯವಾದ ಎನ್ 95 ಮಾಸ್ಕ್ ಗಳನ್ನು ಪೂರೈಸುವಂತೆ ಮತ್ತು ಆರು ತಿಂಗಳ ಕಾಲಕ್ಕೆ ವಿಶೇಷ ಅಪಾಯ ಅನುದಾದ ಘೋಸಿಸುವಂತೆ ಪತ್ರದಲ್ಲಿ ತಿಳಿಸಿದ್ದಾರೆ. ಅಗತ್ಯ ವಸ್ತುಗಳ ಪೂರೈಕೆಗೆ ಕೂಡ ಹೆಚ್ಚು ಶ್ರಮವಹಿಸುವಂತೆ ಕೇಳಿಕೊಂಡಿದ್ದಾರೆ.

ದಿನಗೂಲಿ ನೌಕರರು, ನರೆಗಾ ಕೆಲಸಗಾರರು ಮತ್ತು ಈ ಲಾಕ್ ಡೌನ್ ನಿಂದ ತೊಂದರೆಗೆ ಒಳಗಾಗುವ ವ್ಯಕ್ತಿಗಳ ಅಕೌಂಟ್ ಗೆ ನೇರವಾಗಿ ಹಣವನ್ನು ಮುಂಗಡವಾಗಿ ಹಾಕುವ ವ್ಯವಸ್ಥೆ ಮಾಡಬೇಕಾಗಿರುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ. 7500 ರೂ ಜನಧನ ಖಾತೆಗೆ ವರ್ಗಾಯಿಸುವುದರ ಜೊತೆಗೆ, ಪಡಿತರ ಚೀಟಿ ಉಳ್ಳವರಿಗೆ ೧೦ ಕೆಜಿ ಅಕ್ಕಿ ಅಥವಾ ಗೋಧಿಯನ್ನು ಉಚಿತವಾಗಿ ನೀಡಲು ಸಲಹೆ ನೀಡಿದ್ದಾರೆ.

ವೇತನ ವರ್ಗಕ್ಕೆ ಸೇರುವವರಿಗೆ. ತಿಂಗಳ ಇ ಎಂ ಐ ಗಳನ್ನು ಆರು ತಿಂಗಳ ಕಾಲ ಮುಂದೂಡುವಂತೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಆಗುವ ಆರ್ಥಿಕ ಸಂಕಷ್ಟಗಳನ್ನು ಪರಿಹರಿಸಲು ಯೋಜನೆಗಳನ್ನು ರೂಪಿಸುವಂತೆ ಸಲಹೆ ನೀಡಿದ್ದಾರೆ.