ಉರಿಬಿಸಿಲಲ್ಲಿ ಸಾಗಿ ಬರುತ್ತಿದೆ 1000 ಕಾರ್ಮಿಕರ ದಂಡು

ಬಳ್ಳಾರಿಯಿಂದ ಬೆಂಗಳೂರಿಗೆ ಸದ್ದಿಲ್ಲದೆ ಉರಿಬಿಸಿಲಲ್ಲಿ ನಡೆದು ಬರುತ್ತಿದೆ 1000 ಜನ ಬಡ ಕಾರ್ಮುಕರ ದಂಡು. ತುಂಗಭದ್ರಾ ಅಚ್ಚುಕಟ್ಟೆ ಪ್ರದೇಶಕ್ಕೆ ನೀರುಣಿಸುವ ಹಂಗಾಮಿ ಕಾರ್ಮಿಕರು ಕನಿಷ್ಟ ಕೂಲಿಗಾಗಿ ಹೋರಾಟ ಆರಂಭಿಸಿ ಇಲ್ಲಿಗೆ 23 ದಿನಗಳಾಗಿವೆ.

ಕರ್ನಾಟಕ ನೀರಾವರಿ ನಿಗಮದ ಕೇಂದ್ರ ಕಛೇರಿ ಇರುವ ಮುನಿರಾಬಾದಿನಲ್ಲಿ ಬಳ್ಳಾರಿ, ರಾಯಚೂರು ಮತ್ತು ಕೊಪ್ಪಳ ಭಾಗದ ಹಂಗಾಮಿ ಕಾರ್ಮಿಕರು ಕನಿಷ್ಟ ಕೂಲಿಯನ್ನು ಜಾರಿ ಮಾಡಲು ಒತ್ತಾಯಿಸಿ ಟಿಯುಸಿಐ[ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ]ದ ನೇತೃತ್ವದಲ್ಲಿ ಕಳೆದ ತಿಂಗಳು ಮಾರ್ಚ್ 17ರಿಂದ ಅನಿಧಿಷ್ಟ ಧರಣಿಯನ್ನು ಆರಂಭಿಸಿದ್ದರು. ವೇತನವನ್ನು 8400ರಿಂದ 16950ಕ್ಕೆ ಏರಿಸಬೇಕು ಮತ್ತು ಪ್ರತಿ ತಿಂಗಳ ಮೊದಲ ವಾರದಲ್ಲಿ ವೇತನ ನೀಡಬೇಕು ಎಂಬುದು ಅವರ ಬೇಡಿಕೆಗಳಾಗಿವೆ.

ಧರಣಿ ಹೋರಾಟ, ಉಪವಾಸ ಮುಷ್ಕರ, ರಸ್ತಾ ರೋಕೋ, ಕಛೇರಿಗೆ ಬೀಗಮುದ್ರೆ ಹೋರಾಟ ಯಾವುದನ್ನು ಮಾಡಿದರೂ ಸಂಬಂಧಪಟ್ಟ ಅಧಿಕಾರಿಗಳು ಜಗ್ಗಿಲ್ಲ. ಸಾಲದೆಂಬಂತೆ ಚೀಫ್ ಇಂಜಿನಿಯರ್ ಕಟ್ಟಿಮನಿ ನಿಮ್ಮ ಬೇಡಿಕೆ ಈಡೇರಬೇಕಿದ್ದರೆ ಮುಖ್ಯಮಂತ್ರಿಯನ್ನೇ ಕೇಳಿ ಎಂದು ಎಲ್ಲರೆದುರು ಕೂಗಿ ಹೇಳಿದ್ದಾರೆ. ಅದನ್ನೇ ಪಣವಾಗಿ ತೆಗೆದುಕೊಂಡ ಕಾಮರ್ಿಕರು ಬಟ್ಟೆಗಂಟು ಬನ್ನಿಗಿಟ್ಟುಕೊಂಡು, ಕೈಯಲ್ಲೊಂದು ನೀರಿನ ಬಾಟಲಿ ಹಿಡಿದು ರಸ್ತೆ ತುಂಬಿ ಬೆಂಗಳೂರಿನತ್ತ ಹೊರಟಿದ್ದಾರೆ.

ಏಪ್ರಿಲ್ 14ಕ್ಕೆ ಬೆಂಗಳೂರು ತಲುಪಬೇಕು. ಬೆಂಗಳೂರಿನಲ್ಲಿ ಜನತೆಯ ಹಕ್ಕೋತ್ತಾಯಗಳ ದಿನವಾಗಿ ನಡೆಯುತ್ತಿರುವ ಅಂಬೇಡ್ಕರ್ ಜನ್ಮದಿನಚರಣೆಯಲ್ಲಿ ಪಾಲ್ಗೊಳ್ಳಬೇಕು ಮತ್ತು ಮುಖ್ಯಮಂತ್ರಿಯ ಮನೆ ಎದುರು ಸಮಸ್ಯೆ ಬಗೆಹರಿಯುವ ತನಕ ಕೂತೇಬಿಡಬೇಕು ಎಂಬ ಧೃಡ ನಿಲುವಿನ ಜೊತೆ ಈ ಕಾರ್ಮಿಕ ಬಂಧುಗಳು ನಡಿಯುತ್ತಿದ್ದಾರೆ.

ವಿಚಿತ್ರವೆಂದರೆ ಬಿಗ್ ಬಾಸ್ ಸ್ಪರ್ಧಿ ಆತ್ಮಹತ್ಯೆ ಯತ್ನ ಪ್ರಕರಣದಲ್ಲಿ ರಾತ್ರಿಯೀಡಿ ಆಸ್ಪತ್ರೆ ಕಾಯುತ್ತಿದ್ದ ಮಾಧ್ಯಮ ಉರಿಬಿಸಿಲಿನಲ್ಲಿ ಸಾಗುತ್ತಿರುವ ಈ ಮಹಾ ಜಾಥವನ್ನ ಮಾತ್ರ ಗಣನೆಗೆ ತೆಗೆದುಕೊಳ್ಳದೆ  ದುರಂತವೇ ಸರಿ.

Comments are closed.