ಟಿಬೆಟಿಯನ್ಸಿಗೂ ಕನ್ನಡ ಕಲಿಸಿ… ಕನ್ನಡಪರ ಸಂಘಟನೆಗಳ ಹೋರಾಟ

ಕನ್ನಡ ನಾಡಿನಲ್ಲಿ ಎಲ್ಲಾ ಶಾಲೆಗಳಲ್ಲೂ ಕನ್ನಡ ಕಡ್ಡಾಯಗೊಳಿಸಿ ಸರ್ಕಾರ ಆದೇಶ ನೀಡಿದೆ. ಆದ್ರೆ ನಾಲ್ಕು ದಶಕಗಳಿಂದ ಕನ್ನಡ ನಾಡಿನಲ್ಲಿರುವ ಟಿಬೆಟಿಯನ್ನರಿಗೆ ಮಾತ್ರ ಕನ್ನಡ ಬೇಡ್ವಂತೆ. ಕನ್ನಡ ಕಡ್ಡಾಯಗೊಳಿಸಿ ಆದೇಶ ಹೊರಡಿಸುತ್ತಿದ್ದಂತೆ, ಟಿಬೆಟಿಯನ್ನರು ಶಿಕ್ಷಣ ಸಚಿವರನ್ನು ಬೇಟಿಯಾಗಿ ಕನ್ನಡ ಕಲಿಕೆಯಿಂದ ವಿನಾಯಿತಿ ನೀಡುವಂತೆ ಮನವಿ ಮಾಡಿದ್ದಾರೆ. ಇದು ಕನ್ನಡಪರ ಸಂಘಟನೆಗಳು ಕೆರಳುವಂತೆ ಮಾಡುವಂತೆ.

ಟಿಬೆಟಿಯನ್ ಕ್ಯಾಂಪನ್‍ನಲ್ಲಿ ಕೇಂದ್ರೀಯ ಶಾಲೆ ಎದುರು ಪ್ರತಿಭಟನೆಗೆ ತೆರಳುತ್ತಿರುವ ಕನ್ನಡಪರ ಸಂಘಟನೆಗಳು. ಸಂಘಟನೆ ಕಾರ್ಯಕರ್ತರನ್ನು ರಸ್ತೆಯಲ್ಲಿ ತಡೆದು ಹಿಂದಕ್ಕೆ ದಬ್ಬುತ್ತಿರುವ ಪೊಲೀಸ್ರು. ಎಸ್ ಇದು ಕೊಡಗು ಜಿಲ್ಲೆ ಕುಶಾಲನಗರ ಸಮೀಪದ ಬೈಲುಕುಪ್ಪೆಯಲ್ಲಿರುವ ಟಿಬೆಟಿಯನ್ ಕ್ಯಾಂಪ್‍ನ ಶಾಲೆ ಎದುರು ಪ್ರತಿಭಟನೆಗೆ ಮುಂದಾದ ರಕ್ಷಣಾ ವೇದಿಕೆ ಕಾರ್ಯಕರ್ತರನ್ನು ಪೊಲೀಸ್ರು ವಾಪಸ್ ಕಳುಹಿಸಿದ ದೃಶ್ಯ. ಟಿಬೆಟ್ ನಿಂದ ಭಾರತಕ್ಕೆ ಆಶ್ರಯ ಬಯಸಿ ಬಂದ ಟಿಬೆಟಿಯನ್ನರು ಕರ್ನಾಟಕದ ಹಲವೆಡೆ ತಮ್ಮದೇ ಸಾಮ್ರಾಜ್ಯ ನಿರ್ಮಿಸಿಕೊಂಡಿದ್ದಾರೆ. ರಾಜ್ಯದ್ಯಂತ ಇರುವ ಅವರ ಕ್ಯಾಂಪ್‍ಗಳಲ್ಲಿ ಸಿಬಿಎಸ್‍ಸಿ ಪಠ್ಯಾಧಾರಿತ 12 ಶಾಲೆಗಳು ಇವೆ. ಅದರಲ್ಲಿ ಬೈಲುಕುಪ್ಪೆಯಲ್ಲಿರುವ ಶಾಲೆಯೂ ಒಂದು. ಈ ಎಲ್ಲಾ ಶಾಲೆಗಳ ಪ್ರತಿನಿಧಿಗಳು ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‍ಕುಮಾರ್ ಅವರನ್ನು ಭೇಟಿಯಾಗಿ ಕನ್ನಡ ಕಲಿಕೆಯಿಂದ ನಮಗೆ ವಿನಾಯಿತಿ ನೀಡ್ಬೇಕು.

ನಾವು ಪ್ರಥಮ ಭಾಷೆಯಾಗಿ ಮಾತೃಭಾಷೆ ಟಿಬೆಟನ್ ಮತ್ತು ದ್ವಿತೀಯ ಭಾಷೆಯಾಗಿ ಇಂಗ್ಲೀಷ್ ಕಲಿಯುತ್ತಿದ್ದೇವೆ. ಹೀಗಾಗಿ ಕನ್ನಡ ಕಲಿಕೆಯಿಂದ ನಮಗೆ ವಿನಾಯಿತಿ ಬೇಕು ಅಂತಾ ಸಚಿವರನ್ನು ಖುದ್ದು ಭೇಟಿಯಾಗಿ ಮನವಿ ಸಲ್ಲಿಸಿದ್ರು. ಇದು ಕನ್ನಡಪರ ಸಂಘಟನೆಗಳ ಕಿವಿಗೆ ಬಿದ್ದಿದೇ ತಡ ಅವರ ಕ್ಯಾಂಪ್‍ಗಳಿಗೆ ನುಗ್ಗಿ ಅವರ ಶಾಲೆಗಳ ಎದುರು ಧರಣಿಗೆ ಮುಂದಾದ್ರು. ಕನ್ನಡ ನಾಡಿನಲ್ಲಿದ್ದುಕೊಂಡು ಕನ್ನಡ ಬೇಡ ಎನ್ನುತ್ತಿರುವ ಇವರು ಮುಂದೊಂದು ದಿನ ನಮಗೆ ಪ್ರತ್ಯೇಕ ತಾಲ್ಲೂಕು ಕೊಡಿ ಎಂದು ಕೇಳೋದ್ರಲ್ಲೂ ಯಾವ ಆಶ್ಚರ್ಯವಿಲ್ಲ ಅಂತಾ ಆಕ್ರೋಶ ವ್ಯಕ್ತಪಡಿಸಿದ್ರು.

ಹೀಗೆ ಕನ್ನಡ ಕಲಿಕೆಯಿಂದ ವಿನಾಯಿತಿ ನೀಡುವಂತೆ ಮನವಿ ಮಾಡಿರುವ ಟಿಬೆಟಿಯನ್ ಶಾಲೆಗಳ ಪ್ರತಿನಿಧಿಗಳಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ. ಇದು ಕನ್ನಡಪರ ಸಂಘಟನೆಗಳನ್ನು ಮತ್ತಷ್ಟು ಕೆರಳುವಂತೆ ಮಾಡಿದೆ. ಪೊಲೀಸ್ರು ಪ್ರತಿಭಟನಾಕಾರರನ್ನು ತಡೆದ್ರು ಕೂಡ ಬೈಲುಕುಪ್ಪೆಯ ಒಂದನೇ ಕ್ಯಾಂಪ್‍ನ ಮುಖ್ಯರಸ್ತೆಯಲ್ಲಿಯೇ ಜಮಾಯಿಸಿದ ಶಿವರಾಮೇಗೌಡ ಬಣದ ಕೊಡಗು ಮತ್ತು ಮೈಸೂರು ಜಿಲ್ಲೆಯ ಕಾರ್ಯಕರ್ತರು ಟಿಬೆಟಿಯನ್ನರ ವಿರದ್ಧ ಧಿಕ್ಕಾರ ಕೂಗಿದ್ರು. ಇಲ್ಲಿಯ ಎಲ್ಲಾ ಸೌಲಭ್ಯಗಳು ಬೇಕು ಕನ್ನಡ ಬೇಡ ಎಂದ್ರೆ ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಬಳಿಕ ಸ್ಥಳಕ್ಕೆ ಆಗಮಿಸಿದ ಹಾರ್ನಹಳ್ಳಿ ಹೋಬಳಿ ಕಂದಾಯ ಅಧಿಕಾರಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ್ರು. ನಿಮ್ಮ ಮನವಿಯನ್ನು ಮೇಲಿನ ಅಧಿಕಾರಿಗಳಿಗೆ ಕಳುಹಿಸಿಕೊಡುವುದಾಗಿ ಹೇಳಿದ ಬಳಿಕ ಕರವೇ ಕಾರ್ಯಕರ್ತರು ಪ್ರತಿಭಟನೆ ಕೈಬಿಟ್ರು.

ಒಟ್ಟಿನಲ್ಲಿ ಕನ್ನಡ ಕಡ್ಡಾಯಗೊಳಿಸಿ ಸರ್ಕಾರ ಆದೇಶ ಮಾಡಿದ್ರು, ಟಿಬೆಟಿಯನ್ನರು ಮಾತ್ರ ನಮಗೆ ಕನ್ನಡ ಕಲಿಕೆಯಿಂದ ವಿನಾಯಿತಿ ಕೊಡಿ ಅಂತಾ ಸಚಿವರಲ್ಲಿ ಮನವಿ ಮಾಡಿರೋದು ಕನ್ನಡಪರ ಸಂಘಟನೆಗಳನ್ನು ರೊಚ್ಚಿಗೆಬ್ಬಿಸಿದೆ. ಆದ್ರೆ ಶಿಕ್ಷಣ ಸಚಿವರು ಟಿಬೆಟಿಯನ್ನರ ಮನವಿಗೆ ಓಕೆ ಅಂತಾರಾ ಎಲ್ಲಾ ಕನ್ನಡಪರವಾಗಿ ನಿಲ್ತಾರಾ ಕಾದು ನೋಡ್ಬೇಕಿದೆ.