ಇಂದು ಬಜೆಟ್ ಅಧಿವೇಶನ ಶುರು : ಚರ್ಚೆಗೆ ಬರಲಿವೆ ಪೌರತ್ವ, ತ್ರಿವಳಿ ತಲಾಖ್ ಮಸೂದೆಗಳು

ಮೋದಿ ಸರ್ಕಾರದ ಕೊನೆಯ ಸಂಸತ್ ಅಧಿವೇಶನ ಗುರುವಾರ ಆರಂಭಗೊಳ್ಳಲಿದೆ. ಈ ಬಜೆಟ್ ಅಧಿವೇಶನದ ಎರಡನೇ ದಿನವಾದ ಶುಕ್ರವಾರ ಉಸ್ತುವಾರಿ ಹಣಕಾಸು ಸಚಿವ ಪಿಯೂಷ್ ಗೋಯೆಲ್ ಬಜೆಟ್ ಮಂಡನೆ ಮಾಡಲಿದ್ದಾರೆ. ಮೊದಲ ದಿನ ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಭಾಷಣ ಮಾಡಲಿದ್ದಾರೆ.
ಫೆಬ್ರವರಿ 13ರಂದು ಅಧಿವೇಶನ ಕೊನೆಗೊಳ್ಳಲಿದೆ. ಮೋದಿ ಸರ್ಕಾರದ ಪಾಲಿಗೆ ಇದೇ ಕೊನೆಯ ಅಧಿವೇಶನವಾಗಿರುವುದರಿಂದ ಬಹುಚರ್ಚಿತ ಮಸೂದೆಗಳನ್ನು ಚರ್ಚೆಗೆ ಕೈಗೆತ್ತಿಕೊಳ್ಳಬೇಕಾದ ಹಾಗೂ ಅಂಗೀಕಾರ ಪಡೆದುಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಸರ್ಕಾರವಿದೆ. ಪೌರತ್ವ (ತಿದ್ದುಪಡಿ) ಮಸೂಲೆ, 2016 ಹಾಗೂ ತ್ರಿವಳಿ ತಲಾಖ್ ಮಸೂದೆಗಳು ಮುಖ್ಯವಾಗಿ ಚರ್ಚೆಗೆ ಬರಲಿವೆ. ಇವೆರಡಕ್ಕೂ ವಿಪಕ್ಷಗಳು ಈಗಾಗಲೇ ವಿರೋಧ ವ್ಯಕ್ತಪಡಿಸಿರುವುದು ಗಮನಾರ್ಹ.
ಈ ಅಧಿವೇಶನದಲ್ಲಿ ರಫೇಲ್ ಜೆಟ್ ಖರೀದಿ ವಿಷಯ, ಕೃಷಿ ಸಮಸ್ಯೆಯಂತಹ ವಿಷಯಗಳನ್ನೆತ್ತಿ ಸರ್ಕಾರಕ್ಕೆ ಮುಜುಗರವನ್ನುಂಟು ಮಾಡಲು ವಿಪಕ್ಷಗಳು ಯೋಜಿಸಿವೆ ಎಂದು ಮೂಲಗಳು ಹೇಳಿವೆ. ಇದಕ್ಕೆ ಪ್ರತಿಯಾಗಿ ಸರ್ಕಾರ ರಫೇಲ್  ಡೀಲ್ ಕುರಿತು ಸಿಎಜಿ ವರದಿ ಮಂಡನೆ ಮಾಡುವ ಸಾಧ್ಯತೆಯಿದೆ.

Leave a Reply